ಜಿಲ್ಲೆ

ನೈತಿಕವಾಗಿ ಬದುಕು ಕಟ್ಟಿಕೊಳ್ಳಲು ಎಡೆ ನೀಡಿದ ಸಂವಿಧಾನ: ಡಾ.ಎಸ್.ನರೇಂದ್ರ ಕುಮಾರ್ ಅಭಿಮತ

ಮೈಸೂರು: ಯಾರನ್ನೂ ನೋಯಿಸದೆ ನೈತಿಕವಾಗಿ ಬದುಕು ಕಟ್ಟಿಕೊಳ್ಳಲು ಡಾ.ಬಿ.ಆರ್. ಅಂಬೇಡ್ಕರ್ ರಚಿತ ಸಂವಿಧಾನ ಎಡೆ ಮಾಡಿಕೊಟ್ಟಿದೆ ಎಂದು ಮೈಸೂರು ವಿಶ್ವವಿದ್ಯಾಲಯದ ಗಾಂಧಿ ಅಧ್ಯಯನ ಕೇಂದ್ರದ ನಿರ್ದೇಶಕ ಡಾ.ಎಸ್.ನರೇಂದ್ರ ಕುಮಾರ್ ಅಭಿಪ್ರಾಯಪಟ್ಟರು.
ಮಹಾರಾಣಿ ಮಹಿಳಾ ವಿಜ್ಞಾನ ಸ್ವಾಯತ್ತ ಕಾಲೇಜಿನಲ್ಲಿ ಭಾನುವಾರ ಆಯೋಜಿಸಿದ್ದ ಡಾ.ಬಿ.ಆರ್.ಅಂಬೇಡ್ಕರ್ ಜಯಂತಿ ಕಾರ್ಯಕ್ರಮದಲ್ಲಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಅವರು ಮಾತನಾಡಿದರು.
ಡಾ.ಬಿ.ಆರ್.ಅಂಬೇಡ್ಕರ್ ಅವರು ಜಾತಿ, ಧರ್ಮ ಮತ್ತು ಲಿಂಗಾಧಾರಿತ ಇಲ್ಲದ ಸಮ ಸಮಾಜದ ಕನಸು ಕಂಡಿದ್ದರು. ಎಲ್ಲವನ್ನೂ ಒಳಗೊಳ್ಳುವ ಸಮಾಜ ನಮ್ಮದಾಗಬೇಕು ಎಂಬ ಆಶಯ ಅವರದಾಗಿತ್ತು. ಯಾರನ್ನೂ ನೋಯಿಸದೆ, ನೈತಿಕವಾಗಿ ಬದುಕು ಕಟ್ಟಿಕೊಳ್ಳಲು ಪ್ರೇರಣೆಯಾಗುವ ಸಂವಿಧಾನವನ್ನು ನೀಡಿದ್ದಾರೆ ಎಂದು ಬಣ್ಣಿಸಿದರು.
ಸಮಾಜದ ಅಭಿವೃದ್ಧಿಗೆ, ಸಮಾಜವೇ ಪ್ರಯೋಗಾಲಯವಾಗಬೇಕು. ಎಲ್ಲ ಧರ್ಮ, ಮನುಷ್ಯನ ಕಲ್ಯಾಣಕ್ಕೆ ಸಂವಿಧಾನ ಬಳಸಿಕೊಳ್ಳಬೇಕು. ಆದರೀಗ ಮನುಷ್ಯ ಮನುಷ್ಯರ ನಡುವೆ ದ್ವೇಷ ಬಿತ್ತಲಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಮನುಷ್ಯ ಮನುಷ್ಯರ ನಡುವೆ ಸಮನ್ವಯಕ್ಕೆ ಅಂಬೇಡ್ಕರ್ ಸಂವಿಧಾನದ ಮೂಲಕ ನೀಡಿರುವ ಕೊಡುಗೆ ಹೆಚ್ಚು. ಹೀಗಾಗಿ ಮಾನವೀಯ ಸಂಬಂಧ ಮತ್ತು ಸಮಾನತೆಗೆ ಮಿಡಿಯುವ ಅಂಬೇಡ್ಕರ್ ವಾದ ಸದಾ ಜೀವಂತ ಎಂದು ಹೇಳಿದರು.
ಜಾತಿ ಪದ್ಧತಿ ದೇಶದ ಬಹುದೊಡ್ಡ ಮೂಢನಂಬಿಕೆ. ಹಾಗಾಗಿ ಸಮಯದಲ್ಲಿ ಒಡಕು, ಅಶಾಂತಿ ಇದ್ದು, ಸಮನ್ವಯತೆ ಕೊರತೆ ಕಾಣುತ್ತಿದೆ. ಇದು ಕೊನೆಯಾಗಬೇಕು. ಈ ದೇಶದಲ್ಲಿ ಸಾಮಾಜಿಕ ಸಮಾನತೆಯ ನೆಲೆಗಟ್ಟಿನಲ್ಲಿ ಚಿಂತನೆ ಮಾಡಿ ಸಮ ಸಮಾಜದ ನಿರ್ಮಾಣಕ್ಕೆ ಎಲ್ಲರೂ ಬುನಾದಿ ಹಾಕಿಕೊಳ್ಳಬೇಕು. ಆಧುನಿಕ ಕಾಲಘಟ್ಟದಲ್ಲಿ ಶೋಷಣೆ ಹೆಚ್ಚಾಗಿದ್ದು, ಇದರ ನಿರ್ಮೂಲನೆಗೆೆ ಅಂಬೇಡ್ಕರ್ ವಾದವೇ ಸಿದ್ಧೌಷಧ ಎಂದು ಅಭಿಪ್ರಾಯಪಟ್ಟರು.
ಕಾಲೇಜಿನ ಸಾಂಸ್ಕೃತಿಕ ಸಮಿತಿ ಸಂಚಾಲಕಿ ಡಾ.ಲಲಿತಾ, ವಿದ್ಯಾರ್ಥಿನಿಯರಾದ ಬಿ ಮೇಘನಾ, ವಿದ್ಯಾಶ್ರೀ, ಪುಣ್ಯಾ ಇತರರು ಇದ್ದರು.