ಮಂಡ್ಯ: ಡಾ.ಬಿ.ಆರ್.ಅಂಬೇಡ್ಕರ್ ಅವರಿಗೆ ಗೌರವ ಹೆಚ್ಚಾಗಲಿದೆಯೆಂದು ಸಂವಿಧಾನ ದಿನವನ್ನೇ ಮರೆಮಾಚಿ ಕಾಂಗ್ರೆಸ್ 60 ವರ್ಷ ಆಡಳಿತ ನಡೆಸಿತು ಎಂದು ಸಂವಿಧಾನ ಸನ್ಮಾನ ಅಭಿಯಾನದ ವಿಭಾಗ ಸಂಚಾಲಕ ಎನ್.ವಿ.ಫಣೇಶ್ ಹೇಳಿದರು.
ನಗರದ ವಿಠ್ಠಲ ಸಮುದಾಯ ಭವನದಲ್ಲಿ ಸಿಟಿಜನ್ ಫಾರ್ ಸೋಶಿಯಲ್ ಜಸ್ಟೀಸ್‌ನಿಂದ ಸಂವಿಧಾನ ದಿನದ ಅಂಗವಾಗಿ ಆಯೋಜಿಸಿದ್ದ ಸಂವಿಧಾನ ಸನ್ಮಾನ ಅಭಿಯಾನ ಉದ್ಘಾಟಿಸಿ ಮಾತನಾಡಿದ ಅವರು, ಭಾರತಕ್ಕೆ ಸಂವಿಧಾನ ಸಮರ್ಪಿಸಿ 75 ವರ್ಷಗಳಾಗಿದ್ದರೂ ದೇಶದ ವಿದ್ಯಾವಂತರಿಗೆ ಸಂವಿಧಾನದ ಅರಿವು, ಮಹತ್ವ ಗೊತ್ತಿಲ್ಲದಾಗಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಆಡಳಿತ ಬಂದ ಮೇಲೆ ಸಂವಿಧಾನ ದಿನಾಚರಣೆ ಘೋಷಣೆಯಾಯಿತು. ರಾಷ್ಟ್ರೀಯ ಕಾನೂನು ದಿನ ಎಂದು ಆಚರಿಸುತ್ತಾ ಸಂವಿಧಾನದ ಅರಿವು, ಮಹತ್ವ, ಅಂಬೇಡ್ಕರ್ ಅವರ ಶ್ರಮ ತ್ಯಾಗ, ಸಾಮರ್ಥ್ಯವನ್ನು ಜನರಿಗೆ ತಿಳಿಯುವಂತೆ ಮಾಡಲಾಯಿತು ಎಂದರು.
ಜಿಲ್ಲಾ ಸಂಚಾಲಕ ಡಾ.ಸದಾನಂದ ಮಾತನಾಡಿ, ಸಂವಿಧಾನ ಪೀಠಿಕೆಯನ್ನು ಸಮರ್ಪಕವಾಗಿ ಓದಿ ಅರ್ಥೈಸಿಕೊಂಡರೆ ಪ್ರಬುದ್ಧತೆಯ ಪ್ರಜೆಗಳು ನಿರ್ಮಾಣವಾಗುತ್ತಾರೆ. ಸಂವಿಧಾನ ಆಶಯಗಳು ಜನರಿಗೆ ತಲುಪಬೇಕಿದೆ. ಇದರ ಮಾಹಿತಿ ಬಿತ್ತರಗೊಳ್ಳುತ್ತಿದೆ. ಭಾರತೀಯರ ಬದುಕನ್ನು ಹಸನು ಮಾಡುತ್ತಿರುವ ಸಂವಿಧಾನದಲ್ಲಿ 448 ವಿಧಿಗಳಿದ್ದು, 25 ಭಾಗಗಳಲ್ಲಿ 12 ಅನುಚ್ಛೇದಗಳು ಪ್ರತಿ ನಾಗರಿಕರಿಗೆ ಕರ್ತವ್ಯ ಮತ್ತು ಹಕ್ಕುಗಳನ್ನು ಒದಗಿಸುತ್ತಿವೆ ಎಂದು ತಿಳಿಸಿದರು.
ಭಾರತೀಯ ಸಂವಿಧಾನಕ್ಕೆ ಇದುವರೆಗೆ 106 ತಿದ್ದುಪಡಿಗಳಾಗಿವೆ . ಇವುಗಳಲ್ಲಿ 71 ತಿದ್ದುಪಡಿಗಳನ್ನು ಮಾಡಿ 45 ವರ್ಷ ದೇಶವನ್ನು ಆಳಿದ ಕಾಂಗ್ರೆಸ್ ಸಂವಿಧಾನದ ಮೂಲ ಆಶಯವನ್ನು ತಿರುಚಿದೆ. ಕಾಂಗ್ರೆಸ್ ಸರ್ಕಾರಗಳು ತನ್ನ ಸ್ವಾರ್ಥಕ್ಕಾಗಿ ಸಂವಿಧಾನವನ್ನು ಅಮಾನತು ಮಾಡಲು ಹೊರಟಿವೆ ಎಂದು ಎಚ್ಚರಿಸಿದರು.
ರಾಜ್ಯ ಬಿಜೆಪಿ ಮಾಧ್ಯಮ ವಕ್ತಾರ ಮೋಹನ್ ವಿಶ್ವ, ರಾಜ್ಯ ರೈತ ಕಾರ್ಯದರ್ಶಿ ಅಶೋಕ್‌ಕುಮಾರ್, ರಾಜ್ಯ ಕಾರ್ಯಕಾರಿಣಿ ಸಮಿತಿ ಸಮಿತಿ ಸದಸ್ಯ ಡಾ.ಸಿದ್ದರಾಮಯ್ಯ, ಜಿಲ್ಲಾಧ್ಯಕ್ಷ ಡಾ.ಇಂದ್ರೇಶ್, ಎಸ್‌ಸಿ ಮೋರ್ಚಾ ಜಿಲ್ಲಾಧ್ಯಕ್ಷ ಶಂಕರ್, ನಗರ ಮೋರ್ಚಾ ಅಧ್ಯಕ್ಷ ವಸಂತ್, ಒಬಿಸಿ ಮೋರ್ಚಾ ಅಧ್ಯಕ್ಷ ನರಸಿಂಹಚಾರ್, ಎಸ್‌ಟಿ ಮೋರ್ಚಾ ಜಿಲ್ಲಾಧ್ಯಕ್ಷ ವೆಂಕಟೇಶ್, ಮುಖಂಡರಾದ ಇಂಡುವಾಳು ಸಚ್ಚಿದಾನಂದ, ಕೃಷ್ಣ, ಕೆಂಪಬೋರಯ್ಯ ಇತರರಿದ್ದರು.