ಸೊರಬದಲ್ಲಿ ಹಮ್ಮಿಕೊಂಡಿದ್ದ ಭಾರತ ಸಂವಿಧಾನ ಪೀಠಿಕೆಯ ಜಾಗತಿಕ ವಾಚನ ಕಾರ್ಯಕ್ರಮಕ್ಕೆ ಹುಸೇನ್ ಸರಕಾವಸ್ ಚಾಲನೆ ನೀಡಿದರು. ಎಸ್.ಮಂಜುನಾಥ್, ಡಾ. ಎನ್.ಆರ್.ಪ್ರದೀಪ್‌ಕುಮಾರ್, ಕೆ.ಜಿ.ಕುಮಾರ್ ಇತರರಿದ್ದರು. 
ಜಿಲ್ಲೆ

ವಿಶ್ವದಲ್ಲಿಯೇ ಭಾರತದ ಸಂವಿಧಾನ ಶ್ರೇಷ್ಠ

ಸೊರಬ: ಜಗತ್ತಿನಲ್ಲಿಯೇ ಶ್ರೇಷ್ಠವಾದ ಭಾರತದ ಸಂವಿಧಾನವನ್ನು ಪ್ರತಿಯೊಬ್ಬರು ಓದುವ ಜತೆಗೆ ಸಂವಿಧಾನದ ಕುರಿತು ಅರಿವನ್ನು ಹೊಂದಬೇಕು ಎಂದು ತಹಸೀಲ್ದಾರ್ ಹುಸೇನ್ ಸರಕಾವಸ್ ಹೇಳಿದರು.

ಪಟ್ಟಣದ ಡಾ. ರಾಜ್ ಕಲಾಕ್ಷೇತ್ರದ ಮುಂಭಾಗದಲ್ಲಿ ಶುಕ್ರವಾರ ತಾಲೂಕು ಆಡಳಿತ, ತಾಪಂ, ಸಮಾಜ ಕಲ್ಯಾಣ ಇಲಾಖೆ, ಪುರಸಭೆ ವತಿಯಿಂದ ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ನಿಮಿತ್ತ ಹಮ್ಮಿಕೊಂಡಿದ್ದ ಭಾರತ ಸಂವಿಧಾನ ಪೀಠಿಕೆಯ ಜಾಗತಿಕ ವಾಚನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಸಂವಿಧಾನ ಶಿಲ್ಪಿ ಡಾ. ಬಿ.ಆರ್.ಅಂಬೇಡ್ಕರ್ ಅವರು ಎಲ್ಲರಿಗೂ ಅನ್ವಯವಾಗುವ ಅತ್ಯಂತ ಶ್ರೇಷ್ಠ ಸಂವಿಧಾನವನ್ನು ನೀಡಿದ್ದಾರೆ. ಸಂವಿಧಾನದ ಆಶಯಗಳನ್ನು ಪ್ರತಿಯೊಬ್ಬರು ಅನುಸರಿಸಬೇಕು. ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನದಂದು ಸಂವಿಧಾನದ ಪೀಠಿಕೆಯನ್ನು ಸಾಮೂಹಿಕವಾಗಿ ವಾಚನ ಮಾಡುವಂತಹದ್ದು ವಿಶೇಷವಾಗಿದೆ ಎಂದರು.
ಭ್ರಾತೃತ್ವ, ಸಾಮರಸ್ಯ ಹಾಗೂ ಸಮಾನತೆಯ ಕುರಿತು ಅರಿತು ಕೊಳ್ಳುವುದು ಅತಿಮುಖ್ಯ. ಇದನ್ನು ಅನುಸರಿಸಿದಾಗ ನಮ್ಮ ದೇಶದ ಸರ್ವ ಜನಾಂಗದ ಶಾಂತಿಯ ತೋಟವಾಗಿ ಹೊರ ಹೊಮ್ಮಲಿದೆ. ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವದ ದಿನದಂದು ಸಂವಿಧಾನದ ಆಶಯ ಮತ್ತು ಮೂಲ ತತ್ವಗಳನ್ನು ಅರಿತುಕೊಳ್ಳುವ ಪ್ರಯತ್ನಕ್ಕೆ ಪ್ರತಿಯೊಬ್ಬ ನಾಗರೀಕರು ಕೈ ಜೋಡಿಸಬೇಕು. ವಿಶ್ವದಲ್ಲಿಯೇ ಅತಿ ದೊಡ್ಡ ಪ್ರಜಾಪ್ರಭುತ್ವ ದೇಶವಾದ ಭಾರತವು ವೈವಿಧ್ಯತೆಯಲ್ಲಿ ಏಕತೆಯನ್ನು ಜಗತ್ತಿಗೆ ಸಾರುವ ಮೂಲಕ ಮಾದರಿ ರಾಷ್ಟ್ರವಾಗಿದೆ ಎಂದು ಹೇಳಿದರು.
ಸಾಮಾಜಿಕ ಚಿಂತಕ ರಾಜಪ್ಪ ಮಾಸ್ತರ್ ಮಾತನಾಡಿ, ಡಾ. ಬಿ.ಆರ್. ಅಂಬೇಡ್ಕರ್ ಅವರು ಸರ್ವ ಜನಾಂಗದ ಏಳಿಗೆಗಾಗಿ ಸಂವಿಧಾನ ರಚಿಸಿದ್ದಾರೆ. ಸಂವಿಧಾನದ ಆಶಯದಂತೆ ಎಲ್ಲರೂ ನಡೆಯಬೇಕು. ಭಾರತೀಯ ಪ್ರಜೆಗಳಾದ ನಾವು ಸಂವಿಧಾನವನ್ನು ರಕ್ಷಿಸಬೇಕು ಎಂದರು.
ಶ್ರೀ ರಂಗನಾಥ ದೇವಸ್ಥಾನದಿಂದ ಮುಖ್ಯರಸ್ತೆ ಮಾರ್ಗವಾಗಿ ಡಾ. ರಾಜ್ ಕಲಾಕ್ಷೇತ್ರದ ವರೆಗೆ ಜಾಥಾ ನಡೆಸಲಾಯಿತು.
ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಎಸ್.ಮಂಜುನಾಥ್, ತಾಪಂ ಇಒ ಡಾ. ಎನ್.ಆರ್.ಪ್ರದೀಪ್‌ಕುಮಾರ್, ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಕೆ.ಜಿ.ಕುಮಾರ್, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಇಕ್ಬಾಲ್ ಜಾತಿಗೇರ್, ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಎನ್.ಎಂ.ರೇವಣಪ್ಪ, ಬಿಇಒ ಸತ್ಯನಾರಾಯಣ, ಕ್ಷೇತ್ರ ಸಮನ್ವಯಾಧಿಕಾರಿ ದಯಾನಂದ ಕಲ್ಲೇರ್, ಪುರಸಭೆ ಮುಖ್ಯಾಧಿಕಾರಿ ಟಿ.ಬಾಲಚಂದ್ರ, ದಲಿತ ಮುಖಂಡರಾದ ಶ್ಯಾಮಣ್ಣ ತುಡಿನೀರು, ಬಸವರಾಜ ಹಶ್ವಿ, ದಿನೇಶ್ ಹಣಜಿ, ಪುರಸಭೆ ಸದಸ್ಯರಾದ ಮಧುರಾಯ್ ಜಿ.ಶೇಟ್, ಯು.ನಟರಾಜ್, ಜಯಲಕ್ಷ್ಮೀ ಇತರರಿದ್ದರು.