ಜಿಲ್ಲೆ

ಅಂಬೇಡ್ಕರ್ ನೀಡಿದ ಸಂವಿಧಾನ ವಿಶ್ವಕ್ಕೆ ಮಾದರಿ

ಅವಿನಾಶ್ ಜೈನಹಳ್ಳಿ

ಮೈಸೂರು: ದೇಶದ ಇಂದಿನ ಸಾಧನೆಗೆ ಸ್ವಾತಂತ್ರೃ ಪೂರ್ವದ ನಾಯಕರು, ಚಿಂತಕರು ಹಾಗೂ ಡಾ.ಬಿ.ಆರ್.ಅಂಬೇಡ್ಕರ್ ಅವರ ಅಪಾರ ಕೊಡುಗೆ ಇದೆ ಎಂದು ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್ ಹೇಳಿದರು.

ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಡಾ.ಬಿ.ಆರ್.ಅಂಬೇಡ್ಕರ್ ಅಧ್ಯಯನ ಮತ್ತು ಸಂಶೋಧನ ಕೇಂದ್ರದಿಂದ ಮುಕ್ತ ವಿವಿಯ ಘಟಿಕೋತ್ಸವ ಭವನದಲ್ಲಿ ಶನಿವಾರ ಆಯೋಜಿಸಿದ್ದ ಡಾ.ಬಿ.ಆರ್.ಅಂಬೇಡ್ಕರ್ ಅವರ ಅಭಿವೃದ್ಧಿ ದೃಷ್ಟಿಕೋನ ಮತ್ತು ಸಮಕಾಲಿನ ಜಗತ್ತು ವಿಷಯ ಕುರಿತ ಅಂತಾರಾಷ್ಟ್ರೀಯ ಸಮ್ಮೇಳನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಶಿಕ್ಷಣವು ಸುಲಭವಾಗಿ ಕೈಗೆಟುಕದ ಕಾಲದಲ್ಲಿ ವರ್ಣಭೇದ, ಜಾತಿಭೇದ ವ್ಯವಸ್ಥೆ ಇತ್ತು. ಸ್ವಾತಂತ್ರ್ಯ ಪೂರ್ವದಲ್ಲಿ ವಿದೇಶದಲ್ಲಿ ಉನ್ನತ ಪದವಿ ಪಡೆದವರು ಡಾ.ಬಿ.ಆರ್.ಅಂಬೇಡ್ಕರ್ ಅವರು. ಈ ದೇಶದ ಜಾತಿ ಪದ್ಧತಿ, ಅಸ್ಪೃಶ್ಯತೆ ತೊಲಗಿಸಲು ಅವರು ನೀಡಿರುವ ಸಂವಿಧಾನ ಪ್ರಪಂಚಕ್ಕೆ ಮಾದರಿಯಾಗಿದೆ ಎಂದರು.

ಅಂಬೇಡ್ಕರ್ ಅವರು ಆರ್ಥಿಕ ತಜ್ಞ, ಶಿಕ್ಷಣ ತಜ್ಞ, ಸಾಮಾಜಿಕ ಚಿಂತಕ, ಕ್ರಾಂತಿಕಾರಿ ನಾಯಕ, ತತ್ವಜ್ಞಾನಿ ಹಾಗೂ ಮಹಾ ಮಾನವತಾವಾದಿ. ಈ ನಿಟ್ಟಿನಲ್ಲಿ 21ನೇ ಶತಮಾನದಲ್ಲಿ ಬಾಬಾ ಸಾಹೇಬರ ದೂರದೃಷ್ಟಿತ್ವದ ಅಭಿವೃದ್ಧಿ ವಿಚಾರಗಳು ಹೇಗೆ ಪ್ರತಿಧ್ವನಿಸುತ್ತಿದೆ ಎಂಬುದನ್ನು ಅರಿಯಬೇಕಿದೆ ಎಂದರು.
ಬಾಬಾ ಸಾಹೇಬರು ಶಿಕ್ಷಣದ ಬಗ್ಗೆ ತೋರಿದ ಕಾಳಜಿಯಿಂದ ಇಂದು ಭಾರತ ಶಿಕ್ಷಣ ವ್ಯವಸ್ಥೆ ಪ್ರತಿಯೊಬ್ಬರ ಹಕ್ಕಾಗಿ ಮಾರ್ಪಟ್ಟಿದೆ. ಸಮಾಜದ ಬದಲಾವಣೆಗೆ ಶಿಕ್ಷಣವು ಪ್ರಬಲ ಅಸ್ತ್ರವೆಂದು ಅವರು ಭಾವಿಸಿದ್ದರು. ಪ್ರತಿಯೊಬ್ಬರಿಗೂ ಶಿಕ್ಷಣ ದೊರಕುವಲ್ಲಿ ಸಾವಿತ್ರಿಬಾಯಿ ಫುಲೆ ಅವರ ಚಿಂತನೆಗಳನ್ನು ಬಾಬಾ ಸಾಹೇಬರೂ ಪ್ರತಿಪಾದಿಸಿದರು ಎಂದರು.

ಅಂಬೇಡ್ಕರ್ ಅವರ ವಿದ್ವತ್, ಪಾಂಡಿತ್ಯ ಮೆಚ್ಚಿ ಅಂದಿನ ಪ್ರಧಾನಿ ನೆಹರೂ ಅವರು ತಮ್ಮ ಸಂಪುಟದಲ್ಲಿ ಕಾನೂನು ಸಚಿವರನ್ನಾಗಿಸಿದ್ದರು. ಭಾರತದ ಜನ ಜಾಗೃತಿಯ ಸಂಕೇತ ಅವರಾಗಿದ್ದಾರೆ. ಭಾರತವೂ ಸೇರಿದಂತೆ ಜಗತ್ತಿನ ಸಮಸ್ಯೆಯನ್ನು ಅವರು ನೋಡುವ ರೀತಿ ಭಿನ್ನವಾಗಿತ್ತು. ಜಾತಿ ವ್ಯವಸ್ಥೆಯಲ್ಲಿ ಸಿಲುಕಿ ನಲುಗಿದ ಪ್ರತಿಯೊಬ್ಬರಿಗೂ ಸಾಮಾಜಿಕ ನ್ಯಾಯಕ್ಕೆ ಹೋರಾಟ ಮಾಡಿದರು ಎಂದು ಹೇಳಿದರು.

ಸಾಮಾಜಿಕ ಮತ್ತು ಆರ್ಥಿಕ ಅಸಮಾನತೆಯನ್ನು ತೊಡೆದು ಹಾಕುವುದೇ ಅವರ ಪ್ರಮುಖ ಉದ್ದೇಶವಾಗಿತ್ತು. ಆ ನಿಟ್ಟಿನಲ್ಲಿ ಭಾರತದ ಸಂವಿಧಾನ ರಚನೆಗೆ ಮುಂದಾದರು. ಸ್ವಾತಂತ್ರೃ ಭಾರತದಲ್ಲಿ ಅವರು ನೀಡಿದ ಅಭಿವೃದ್ಧಿಗೆ ಸಂಬಂಧಿಸಿದ ಅನೇಕ ಸಲಹೆ ಪ್ರಮುಖವಾದವು. ಬಾಬಾ ಸಾಹೇಬರ ಚಿಂತನೆಗಳು ಜಗತ್ತಿನೆಲ್ಲೆಡೆ ಸಾರ್ವಕಾಲಿಕ ಚಿಂತನೆಗಳಾಗಿವೆ ಎಂದು ತಿಳಿಸಿದರು.

ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಮಾತನಾಡಿ, ಡಾ.ಬಿ.ಆರ್.ಅಂಬೇಡ್ಕರ್ ಅವರನ್ನು ಓದುವುದು ಹೊಸ ದೇಶಕ್ಕೆ ಪ್ರವೇಶಿಸಿದಂತೆ ಹಾಗೂ ಮಾನವೀಯತೆಯನ್ನು ಅಧ್ಯಯನ ಮಾಡಿದಂತೆ ಎಂದರು.

ಬಾಬಾ ಸಾಹೇಬರು ದೇಶಕಟ್ಟಲು, ಜನರನ್ನು ಬೆಸೆಯಲು, ಸಾಂಸ್ಕೃತಿಕವಾದ ಬದುಕಿನ ನಿರೂಪಣೆಗೆ ನೀಡಿರುವ ಸತ್ವಭರಿತ ಅನೇಕ ಕೊಡುಗೆಯ ಬಗ್ಗೆ ಎಲ್ಲರೂ ಚಿಂತನೆ ಮಾಡಬೇಕಿದೆ. ಅಸಮಾನತೆಯನ್ನು ತೊರೆದು ಸಮಸಮಾಜದ ಸಾಧನೆಯ ಗುರಿಯ ಕಡೆಗೆ ಹೆಜ್ಜೆ ಇಡಬೇಕಿದೆ ಎಂದು ಹೇಳಿದರು.
ಅಭಿವೃದ್ಧಿ ವಿಚಾರದಲ್ಲಿ ಐರೋಪ್ಯ ರಾಷ್ಟ್ರಗಳು ಮುಂಚೂಣಿಯಲ್ಲಿವೆ. ನಾವು ಹಿಂದುಳಿದಿದ್ದೇವೆ. ಎಡಪಂಥೀಯ ಚಿಂತನೆಗಳು ಪ್ರಶ್ನಿಸುವ, ಆರೋಗ್ಯ ಕ್ಷೇತ್ರ ಸುಧಾರಣೆ, ಬಡತನ ನಿರ್ಮೂಲನೆ ಸೇರಿದಂತೆ ಸುಖಿ ರಾಜ್ಯ ಕಟ್ಟಲು ಬಯಸಿದರೆ, ಬಲಪಂಥೀಯ ಚಿಂತನೆಗಳು ಜನರನ್ನು ಭಾವನಾತ್ಮಕ ವಿಚಾರಗಳಿಗೆ ಒಳಪಡಿಸಿ ಅಧಿಕಾರಕ್ಕೇರಿ ಅಭಿವೃದ್ಧಿ ಗೋಲನ್ನು ಹಿಂದೆ ತಳ್ಳುತ್ತಿವೆ. ಇಂದು ನಮ್ಮ ಬಹುತ್ವ ಅಪಾಯದಲ್ಲಿದೆ. ಅಲ್ವಸಂಖ್ಯಾತರು ಭಯಗ್ರಸ್ತರಾಗಿ ಬದುಕುವ ವಾತಾವರಣ ನಿರ್ಮಾಣವಾಗಿದೆ ಎಂದು ಕಳವಳ ವ್ಯಕ್ತಪಡಿಸಿದರು.

ಸಂವಿಧಾನ ಕುರಿತು ಜನರಲ್ಲಿ ವ್ಯಾಪಕ ಜಾಗೃತಿ ಮೂಡಿಸಲಾಗುತ್ತಿದೆ. ಅದರಂತೆ ವಿಶ್ವವಿದ್ಯಾಲಯಗಳಲ್ಲಿ ಸಂವಿಧಾನ ಕುರಿತು ಸಮಗ್ರವಾದ ಅಧ್ಯಯನ ನಡೆಯಬೇಕಿದೆ. ಪ್ರಾಧ್ಯಾಪಕರು ವಿದ್ಯಾರ್ಥಿಗಳಿಗೆ ಸಂವಿಧಾನದ ಆಶಯಗಳನ್ನು ಬಿತ್ತಬೇಕಿದೆ. ಈ ಮೂಲಕ ಅಂಬೇಡ್ಕರ್ ಅವರ ಕನಸಾದ ಸಮೃದ್ಧ ಭಾರತದ ನಿರ್ಮಾಣಕ್ಕೆ ಪ್ರತಿಯೊಬ್ಬರೂ ಕೈಜೋಡಿಸಬೇಕಿದೆ ಎಂದು ಕರೆ ನೀಡಿದರು.

ಮಾಧ್ಯಮಗಳು ವೈಚಾರಿಕತೆ ಮತ್ತು ವೈಜ್ಞಾನಿಕವಾದ ನಿಲುವುಗಳನ್ನು ಬಲಪಡಿಸುವಂತೆ ಕಾರ್ಯನಿರ್ವಹಿಸಬೇಕಿದೆ. ಸತಿ ಸಹಗಮನ ಪದ್ಧತಿ ಪಾಲಿಸಿದವರು ಇಂದು ಸಂವಿಧಾನದ ಮೇಲೆ ಸವಾರಿ ಮಾಡುತ್ತಿದ್ದಾರೆ. ಸಾಮಾಜಿಕ ಹಾಗೂ ಅರ್ಥಿಕ ಸಮಾನತೆ ಇಲ್ಲದ ಸ್ವಾತಂತ್ರ್ಯಕ್ಕೆ ಅರ್ಥವಿಲ್ಲ. ಭಾರತದ ಎಲ್ಲ ಜನರನ್ನು ಸಂರಕ್ಷಣೆ ಮಾಡುವ ಸಂವಿಧಾನವನ್ನು ಬಾಬಾ ಸಾಹೇಬರು ನೀಡಿದ್ದಾರೆ. ನಮಗೆ, ನಮ್ಮ ಮಕ್ಕಳಿಗೆ, ಮಹಿಳೆಯರಿಗೆ, ರೈತರಿಗೆ, ಕಾರ್ಮಿಕರಿಗೆ ನೆಮ್ಮದಿಯ ಬದುಕು ಸಂವಿಧಾನದ ಸಮರ್ಪಕ ಜಾರಿಯಲ್ಲಿದೆ ಎಂದು ತಿಳಿಸಿದರು.

ಕುಲಪತಿ ಪ್ರೊ.ಶರಣಪ್ಪ ವಿ.ಹಲಸೆ, ಕುಲಸಚಿವ ಪ್ರೊ.ಕೆ.ಎಲ್.ಎನ್.ಮೂರ್ತಿ, ಆಕ್ಸ್‌ಫರ್ಡ್ ವಿವಿಯ ಅಸಂಗ್ ವಾಂಖೇಡ, ಪರಿಕ್ಷಾಂಗ ಕುಲಸಚಿವ ಪ್ರೊ.ಪ್ರವೀಣ್, ವ್ಯವಸ್ಥಾಪನಾ ಮಂಡಳಿ ಸದಸ್ಯ ಬಿ.ಜಿ.ಪಾಟೀಲ್, ಪ್ರೊ.ಎನ್.ಲಕ್ಷ್ಮೀ, ಡಾ.ಶಿವಕುಮಾರಸ್ವಾಮಿ ಇದ್ದರು. ಇದಕ್ಕೂ ಮುನ್ನ ಚಾಮರಾಜನಗರದ ಬಾಲಕ ತೇಜಸ್ವಿ ಚಕ್ರವರ್ತಿ ಸಂವಿಧಾನದ ಬಗ್ಗೆ ತಿಳಿಸಿದರು.