ಜಿಲ್ಲೆ

ನಿರ್ಭೀತ ಬದುಕಿಗೆ ಸಂವಿಧಾನದಲ್ಲಿ ಅವಕಾಶ

ಲಲಾಟಾಕ್ಷ ಎಸ್

ಕೊಳ್ಳೇಗಾಲ: ತಾಲೂಕು ಆಡಳಿತ, ತಾಲೂಕು ಪಂಚಾಯಿತಿ, ಸಮಾಜ ಕಲ್ಯಾಣ ಇಲಾಖೆಯಿಂದ ಪಟ್ಟಣದಲ್ಲಿ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ 133ನೇ ಜನ್ಮದಿನದ ಅಂಗವಾಗಿ ಅಂಬೇಡ್ಕರ್ ಅವರ ಭಾವಚಿತ್ರವನ್ನು ಮೆರವಣಿಗೆ ಮಾಡಲಾಯಿತು.


ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್‌ಪ್ರತಿಮೆ ಮುಂಭಾಗ ಉಪವಿಭಾಗಾಧಿಕಾರಿ ಶಿವಮೂರ್ತಿ ಹಾಗೂ ತಹಸೀಲ್ದಾರ್ ಮಂಜುಳಾ ರಥಕ್ಕೆ ಅಂಬೇಡ್ಕರ್ ಭಾವಚಿತ್ರವಿಟ್ಟು ಪುಷ್ಪಾರ್ಚನೆ ಮಾಡಿ ಮೆರವಣಿಗೆಗೆ ಚಾಲನೆ ನೀಡಿದರು. ನಂತರ, ಪಟ್ಟಣದ ಹೆದ್ದಾರಿ(209)ಯಲ್ಲಿ ಸಾಗಿದ ರಥವು ತಾಪಂ ಆವರಣ ತಲುಪಿತು. ಮೆರವಣಿಗೆಯಲ್ಲಿ ದಲಿತ ಮುಖಂಡರು, ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಭಾಗವಹಿಸಿದ್ದರು.


ತಾಪಂ ಸಭಾಂಗಣದಲ್ಲಿ ನಡೆದ ವೇದಿಕೆ ಕಾರ್ಯಕ್ರಮದಲ್ಲಿ ಉಪವಿಭಾಗಾಧಿಕಾರಿ ಶಿವಮೂರ್ತಿ ಮಾತನಾಡಿ, ಭಾರತ ಸಂವಿಧಾನ ನಮಗೆ ಬದುಕುವ ಹಕ್ಕು ನೀಡಿದೆ. ಮತದಾನ ವ್ಯವಸ್ಥೆಯಲ್ಲಿ ನಮ್ಮ ನಾಯಕನನ್ನು ಆರಿಸಿಕೊಳ್ಳುವ ಅವಕಾಶ ನೀಡಿದೆ. ಯಾವುದೇ ಆಮಿಷ, ಹಣ, ಹೆಂಡಕ್ಕೆ ಮತವನ್ನು ಮಾರಿಕೊಂಡರೆ ನಮ್ಮ ಹಕ್ಕನ್ನು ಕಳೆದುಕೊಂಡಂತೆ ಎಂದು ಬಾಬಾ ಸಾಹೇಬರು ತಿಳಿಸಿದ್ದಾರೆ. ಹಾಗಾಗಿ ಯಾವುದೇ ಆಮಿಷಕ್ಕೆ ಒಳಗಾಗದೆ ಪ್ರತಿಯೊಬ್ಬರೂ ಮತದಾನ ಮಾಡಬೇಕು. ನಮ್ಮ ಮತದಿಂದ ಯೋಗ್ಯರನ್ನು ಆಯ್ಕೆ ಮಾಡಬೇಕು. ಆಗ ಮಾತ್ರ ಬಾಬಾ ಸಾಹೇಬರ ಜಯಂತಿ ಆಚರಣೆ ಸಾರ್ಥಕವಾಗುತ್ತದೆ ಎಂದರು.
ಸೂರ್ಯ, ಚಂದ್ರ ಇರುವವರೆಗೂ ಡಾ.ಬಿ.ಆರ್.ಅಂಬೇಡ್ಕರ್ ಅವರು ಅಜರಾಮರಾಗಿರುತ್ತಾರೆ. ಇಂದು ಸರ್ವಾಧಿಕಾರಿ ವ್ಯವಸ್ಥೆಯಿದ್ದರೆ ನಾವೆಲ್ಲರೂ ಬದುಕಲು ಸಾಧ್ಯವಾಗುತ್ತಿರಲಿಲ್ಲ. ಅಂಬೇಡ್ಕರ್ ಅವರು ಸಂವಿಧಾನ ಚೌಕಟ್ಟಿನಲ್ಲಿ ನಮಗೆಲ್ಲ ರಕ್ಷಣೆ ನೀಡಿದ್ದಾರೆ. ನಾವು ನಿರ್ಭೀತರಾಗಿ ಬದುಕಲು ಸಂವಿಧಾನ ಎಲ್ಲ ಅವಕಾಶ ನೀಡಿದೆ. ಅಂಬೇಡ್ಕರ್ ಅವರನ್ನು ಒಂದು ವರ್ಗಕ್ಕೆ ಸಿಮೀತಗೊಳಿಸಬಾರದು ಎಂದು ಹೇಳಿದರು.


ಉಪನ್ಯಾಸಕ ಗುರುರಾಜ್ ಮಾತನಾಡಿ, ಅಂಬೇಡ್ಕರ್ ಒಳಗೊಳ್ಳದ ಭಾರತಕ್ಕೆ ಭವಿಷ್ಯವಿಲ್ಲ. ಅಂಬೇಡ್ಕರ್ ಅವರನ್ನು ಪ್ರತಿ ಮನೆಗೂ ತಲುಪಿಸಬೇಕಿದೆ. ವಿಶ್ವ ಸಂಸ್ಥೆ ಮಹಾತ್ಮ ಗಾಂಧೀಜಿ ಹಾಗೂ ಅಂಬೇಡ್ಕರ್ ಅವರ ಜಯಂತಿಯನ್ನು ಆಚರಣೆ ಮಾಡುತ್ತದೆ. ಗಾಂಧೀ ಜಯಂತಿಯನ್ನು ಅಹಿಂಸ ದಿನವಾಗಿ, ಅಂಬೇಡ್ಕರ್ ಜಯಂತಿಯನ್ನು ವಿಶ್ವ ಜ್ಞಾನದ ದಿನವಾಗಿ ಆಚರಿಸಲಾಗುತ್ತದೆ. ಇವರಿಬ್ಬರು ದೇಶದ ಎರಡು ಕಣ್ಣುಗಳಾಗಿದ್ದಾರೆ. ಅಂಬೇಡ್ಕರ್ ಅವರನ್ನು ಅಸ್ಪಶ್ಯ ವರ್ಗದ ನಾಯಕ ಎಂದು ಕಾಣುತ್ತಿರುವುದು ನೋವಿನ ಸಂಗತಿ ಎಂದರು.

ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕಗಳಿಸಿದ ಸರ್ಕಾರಿ ಕಾಲೇಜಿನ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಜೇತವನದ ಮನೋರಖ್ಖಿತ ಬಂತೇಜಿ, ತಹಸೀಲ್ದಾರ್ ಮಂಜುಳಾ, ತಾಲೂಕು ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶ್ರೀನಿವಾಸ್, ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಮಂಜುಳಾ, ಡಿವೈಎಸ್ಪಿ ಎಂ.ಧರ್ಮೇಂದ್ರ, ವೃತ್ತ ನಿರೀಕ್ಷಕ ಶಿವಮಾದಯ್ಯ, ಸಮಾಜ ಕಲ್ಯಾಣ ಇಲಾಖೆ ಪ್ರಭಾರ ಸಹಾಯಕ ನಿರ್ದೇಶಕ ಕೇಶವಮೂರ್ತಿ, ಅಧಿಕಾರಿ ಇಲಾಖೆ ವೃತ್ತ ನಿರೀಕ್ಷಕಿ ವಿಜಯಲಕ್ಷ್ಮೀ ಇದ್ದರು.