ಜಿಲ್ಲೆ

ಸಂವಿಧಾನ ಬದುಕು ಕಟ್ಟಿಕೊಡುವ ಗ್ರಂಥ: ಉರಿಲಿಂಗ ಪೆದ್ದಿಮಠದ ಮಠಾಧೀಶ ಜ್ಞಾನಪ್ರಕಾಶ ಸ್ವಾಮೀಜಿ ಹೇಳಿಕೆ

Chikkaballapur

ಶಿಡ್ಲಘಟ್ಟ: ದೇಶದ ಕಟ್ಟಕಡೆಯ ಕಾಡಂಚಿನಲ್ಲಿರುವ ಆದಿವಾಸಿ ಜನಾಂಗದ ಮಹಿಳೆ ಉನ್ನತ ಹುದ್ದೆ ಅಲಂಕರಿಸಲು ಸಾಧ್ಯವಾಗಿದೆ ಎಂದರೆ ಅದು ಡಾ.ಬಿ.ಆರ್.ಅಂಬೇಡ್ಕರ್ ರಚಿಸಿರುವ ಸಂವಿಧಾನದಿಂದ ಎಂದು ಮೈಸೂರು ಉರಿಲಿಂಗ ಪೆದ್ದಿಮಠದ ಮಠಾಧೀಶ ಜ್ಞಾನಪ್ರಕಾಶ ಸ್ವಾಮೀಜಿ ಹೇಳಿದರು. ನಗರದ ನೆಹರು ಕ್ರೀಡಾಂಗಣದಲ್ಲಿ ಸೋಮವಾರ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗ ಹಾಗೂ ಅಲ್ಪಸಂಖ್ಯಾತರ ಒಕ್ಕೂಟ ಆಯೋಜಿಸಿದ್ದ ವಿಶ್ವಜ್ಞಾನಿ ಭೀಮೋತ್ಸವ-2022 ಹಾಗೂ ಬೃಹತ್ ಸಂವಿಧಾನ ಜನಜಾಗೃತಿ ಐಕ್ಯತಾ ಸಮಾವೇಶದಲ್ಲಿ ಮಾತನಾಡಿ, ಆದರ್ಶ ಭಾರತ ಕನಸು ಕಂಡವರು ಡಾ.ಬಿ.ಆರ್.ಅಂಬೇಡ್ಕರ್. ಆದರೆ ಈಗ ದೇಶದಲ್ಲಿ ಆಯುಧಗಳು ವಿಜೃಂಭಿಸುತ್ತಿವೆ. ಸಂವಿಧಾನವೆಂದರೆ ಸತ್ತವರ ಬಗ್ಗೆ ಬರೆದ ಪುಸ್ತಕವಲ್ಲ, ಭಾರತೀಯರ ಬದುಕು ಕಟ್ಟಿಕೊಡುವ ಮಹಾನ್ ಗ್ರಂಥ. ಕೈಗೆ ಶಾಸ್ತ್ರ, ಪುರಾಣ ಗ್ರಂಥ ಕೊಟ್ಟು ಮರುಳು ಮಾಡುತ್ತಾರೆ. ಆದರೆ ನಿಜವಾಗಿಯೂ ನಾವು ಹಿಡಿಯಬೇಕಾಗಿರುವುದು ಸಂವಿಧಾನದ ಪುಸ್ತಕ. ಅದನ್ನು ಎಲ್ಲರೂ ಓದಬೇಕಿದೆ ಎಂದರು.


ಸರ್ಕಾರ ಅರವತ್ತು ಸಾವಿರ ವಿದ್ಯಾರ್ಥಿಗಳ ವಿದ್ಯಾರ್ಥಿವೇತನವನ್ನು ತಡೆಹಿಡಿದಿದೆ. ಕೇಂದ್ರ ಸರ್ಕಾರ 5.43 ಲಕ್ಷ ಹುದ್ದೆ ಹಾಗೂ ರಾಜ್ಯ ಸರ್ಕಾರ 2.32 ಲಕ್ಷ ಹುದ್ದೆಗಳನ್ನು ಭರ್ತಿ ಮಾಡದೆ ಸಂವಿಧಾನದ ಒಂದೊಂದು ಪುಟವನ್ನೂ ಕಿತ್ತು ಹಾಕುತ್ತಿದೆ. ಚುನಾವಣೆಯಲ್ಲಿ ಮತಗಳನ್ನು ಮಾರಿಕೊಳ್ಳದಿರಿ. ದೇಶ ಕಟ್ಟುವ ದೈವಗಳು ನಮಗೆ ಬೇಕು. ದೇಶ ಒಡೆಯುವ ದೆವ್ವಗಳಲ್ಲ ಎಂದರು.


ಮಾಜಿ ಸಚಿವ ಸತೀಶ್ ಜಾರಕಿಹೊಳಿ ಮಾತನಾಡಿ, ಅಚ್ಛೇ ದಿನ್ ಬಂದ ನಂತರ ಶೋಷಣೆ ಪ್ರಾರಂಭವಾಗಿಲ್ಲ, ಸಾವಿರಾರು ವರ್ಷಗಳಿಂದಲೂ ಶೋಷಣೆ ನಡೆಯುತ್ತಿದೆ. ಮುಂದೆಯೂ ನಡೆಯುತ್ತದೆ. ಅನ್ಯಾಯ ಒಗ್ಗೂಡಿ ಎದುರಿಸಬೇಕು. ಸಂವಿಧಾನ ಈಗ ಅಪಾಯದಲ್ಲಿದೆ. ಈ ನಿಟ್ಟಿನಲ್ಲಿ ಚಿಂತನೆ ನಡೆಯಬೇಕಿದೆ. ಹೊಸ ಸಮಾಜ ಕಟ್ಟಲು ಮೌಢ್ಯದಿಂದ ಹೊರಬರಬೇಕಿದೆ ಎಂದರು.


ಮಾಜಿ ಕೇಂದ್ರ ಸಚಿವ ಕೆ.ಎಚ್.ಮುನಿಯಪ್ಪ ಮಾತನಾಡಿ, ಹಿಂದುಳಿದವರನ್ನು ಮೇಲೆತ್ತಲು ಶಿಕ್ಷಣವೇ ದೊಡ್ಡ ಅಸ್ತ್ರ. ಶಿಕ್ಷಣ ವಂಚಿತರ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಿದಾಗ ಮಾತ್ರ ಉತ್ತಮ ಸಮಾಜ ನಿರ್ಮಾಣ ಸಾಧ್ಯ ಎಂದರು.
ಮುಖ್ಯ ಭಾಷಣಕಾರ ಮಹಮ್ಮದ್ ಖಾಸಿಂ ಮಾತನಾಡಿ, ಶೋಷಣೆ, ದೌರ್ಜನ್ಯ ಪ್ರಕರಣಗಳು ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಿದೆ. ಸರ್ಕಾರವನ್ನು ಟೀಕಿಸಿದರೆ ದೇಶದ್ರೋಹಿಗಳು ಎನ್ನುತ್ತಿದ್ದಾರೆ. ಡಾ.ಬಿ.ಆರ್.ಅಂಬೇಡ್ಕರ್ ಅವರ ಹಾದಿಯಲ್ಲಿ ಸಾಗೋಣ, ಅವರ ಶಕ್ತಿ, ಆಲೋಚನೆ ಪ್ರೇರಣೆಯಾಗಲಿ ಎಂದರು.
ಎಬಿಡಿ ಗ್ರೂಪ್ ಅಧ್ಯಕ್ಷ ರಾಜೀವ್ ಗೌಡ, ಎಸ್.ಎಸ್.ಕ್ರಿಯಾ ಟ್ರಸ್ಟ್ ಅಧ್ಯಕ್ಷ ಆಂಜಿನಪ್ಪ ಪುಟ್ಟು ಅವರು ತಮ್ಮ ಟ್ರಸ್ಟ್ ಮೂಲಕ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ಹಾಗೂ ಪ್ರೋತ್ಸಾಹ ನೀಡುವುದಾಗಿ ಭರವಸೆ ನೀಡಿದರು.

ನಗರಸಭೆ ಅಧ್ಯಕ್ಷೆ ಸುಮಿತ್ರಾ ರಮೇಶ್, ಜಿಪಂ ಮಾಜಿ ಸದಸ್ಯ ಬಂಕ್ ಮುನಿಯಪ್ಪ, ಮದೀನಾ ಮಸೀದಿ ಅಧ್ಯಕ್ಷ ಎಚ್.ಎಸ್.ಫಯಾಜ್, ಮುಖಂಡರಾದ ಲಗುನಾಯಕನಹಳ್ಳಿ ಮುನಿಯಪ್ಪ, ಸಲಾಂ, ಎನ್.ವೆಂಕಟೇಶ್, ಕೆ.ಸಿ.ರಾಜಾಕಾಂತ್, ಮೇಲೂರು ಮಂಜುನಾಥ್, ನಾಗನರಸಿಂಹ, ಚಲಪತಿ ಇತರರಿದ್ದರು.