ವಿಜಯವಾಣಿ ಸುದ್ದಿಜಾಲ ಧಾರವಾಡ
ಪುಟಾಣಿ ಮಕ್ಕಳು ನಗರದಲ್ಲಿ ಭಾನುವಾರ ಸ್ಕೇಟಿಂಗ್ ರ್ಯಾಲಿ ಮೂಲಕ ಸಂವಿಧಾನ ಜಾಗೃತಿ ಜಾಥಾ ನಡೆಸಿ ಜನರಲ್ಲಿ ಸಂವಿಧಾನದ ಜಾಗೃತಿ ಮೂಡಿಸಿದ್ದು ವಿಶೇಷವಾಗಿತ್ತು.
ಸ್ಕೇಟಿಂಗ್ ತರಬೇತುದಾರ ಶಶಿಧರ ಪಾಟೀಲ ನೇತೃತ್ವದಲ್ಲಿ ಧಾರವಾಡದ ರೋಲರ್ ಸ್ಕೇಟಿಂಗ್ ಅಕಾಡೆಮಿಯ 4 ರಿಂದ 12 ವರ್ಷದ 25ಕ್ಕೂ ಹೆಚ್ಚು ಸ್ಕೇರ್ಟಸ್ಗಳು ಇಲ್ಲಿನ ಕರ್ನಾಟಕ ಕಾಲೇಜು ವೃತ್ತದಿಂದ ಜುಬಿಲಿ ವೃತ್ತದ ಡಾ. ಬಿ.ಆರ್. ಅಂಬೇಡ್ಕರ್ ಪುತ್ಥಳಿ ವರೆಗೂ ಸಂವಿಧಾನ ಜಾಗೃತಿ ಫಲಕಗಳನ್ನು ಹಿಡಿದು ಸ್ಕೇಟಿಂಗ್ ಮೂಲಕ ಜಾಗೃತಿ ಮೂಡಿಸಿದರು. ಬಳಿಕ ಅಂಬೇಡ್ಕರ್ ಪುತ್ಥಳಿ ಎದುರು ಮಕ್ಕಳು ಸಂವಿಧಾನ ಪೀಠಿಕೆ ಓದಿದರು.
ಕೆಸಿಡಿ ವೃತ್ತ ಬಳಿ ರ್ಯಾಲಿಗೆ ಚಾಲನೆ ನೀಡಿದ ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕ ಅಲ್ಲಾಭಕ್ಷ ಎಂ.ಎಸ್. ಮಾತನಾಡಿ, ಭಾರತದ ಸಂವಿಧಾನ ರಚನೆಯಾಗಿ 75ವರ್ಷಗಳಾಗಿರುವ ಹಿನ್ನೆಲೆಯಲ್ಲಿ ಇಡೀ ರಾಜ್ಯದಲ್ಲಿ ಸಂವಿಧಾನದ ಜಾಗೃತಿ ಮಾಡಲಾಗುತ್ತಿದೆ. ಈಗಾಗಲೇ ಧಾರವಾಡದಲ್ಲಿ ವಿವಿಧ ಬಗೆಯ ಜಾಥಾಗಳು ನಡೆಸಲಾಗಿದೆ. ಆದರೆ ರಾಜ್ಯದಲ್ಲೇ ಮೊದಲ ಬಾರಿಗೆ ಸ್ಕೇಟಿಂಗ್ ಮೂಲಕ ಮಕ್ಕಳು ಜಾಗೃತಿ ಮೂಡಿಸಿದ್ದು ವಿಶೇಷ ಎಂದರು.
ಪಾಲಿಕೆ ಸದಸ್ಯ ಸುರೇಶ ಬೇದರೆ, ವಿದ್ಯಾಥಿರ್ಗಳು, ಪಾಲಕರು, ಇತರರು ಇದ್ದರು.