ಹನೂರು: ಹನೂರು ತಾಲೂಕಿನ ಮಂಗಲ ಗ್ರಾಮದಲ್ಲಿ ಶನಿವಾರ ಸಂವಿಧಾನ ಜಾಗೃತಿ ಮೂಡಿಸುವ ಸ್ತಬ್ಧಚಿತ್ರ ಜಾಥಾ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಕಾಮಗೆರೆ ಕಡೆಯಿಂದ ಬಂದ ಸಂವಿಧಾನ ಜಾಗೃತಿ ಸ್ತಬ್ಧಚಿತ್ರವನ್ನು ತಹಸೀಲ್ದಾರ್ ವೈ.ಕೆ. ಗುರುಪ್ರಸಾದ್, ಮಂಗಲ ಗ್ರಾಮ ಪಂಚಾಯಿತಿ ಸದಸ್ಯರು ಹಾಗೂ ಗ್ರಾಮಸ್ಥರು, ಮುಖಂಡರು ಮತ್ತು ಅಧಿಕಾರಿಗಳು ಆತ್ಮೀಯವಾಗಿ ಬರಮಾಡಿಕೊಂಡು ಪುಷ್ಪಾರ್ಚನೆ ಸಲ್ಲಿಸಿದರು. ನಂತರ ಮಂಗಲ ಗ್ರಾಪಂ ವ್ಯಾಪ್ತಿಯ ಗ್ರಾಮಗಳಲ್ಲಿ ಜಾಗೃತಿ ಜಾಥಾದ ಮೆರವಣಿಗೆ ತೆರಳಿತು.
ವೈ.ಕೆ.ಗುರುಪ್ರಸಾದ್ ಮಾತನಾಡಿ, ಜಗ್ಗತ್ತಿನ ಶ್ರೇಷ್ಠ ಸಂವಿಧಾನವೆಂದರೆ ಅದು ನಮ್ಮ ಭಾರತ ಸಂವಿಧಾನವಾಗಿದೆ. ಡಾ.ಬಿ.ಆರ್.ಅಂಬೇಡ್ಕರ್ ನೀಡಿದ ಸಂವಿಧಾನದ ನೆರಳಲ್ಲಿ ನಾವೆಲ್ಲರೂ ಆಶ್ರಯ ಪಡೆದಿದ್ದೇವೆ. ಇಂದು ನಮಗೆಲ್ಲ ಮಾತನಾಡುವ ಸ್ವಾತಂತ್ರೃ, ಜೀವಿಸುವ ಹಕ್ಕು ಎಲ್ಲವನ್ನೂ ಸಂವಿಧಾನ ನೀಡಿದೆ. ಮಹಿಳೆಯರಿಗೆ ವಿಶೇಷವಾಗಿ ಹೆಚ್ಚಿನ ಆದ್ಯತೆ ದೊರೆತಿದೆ. ಸಂವಿಧಾನದ ಆಶಯಗಳು ಸಮಾನತೆ, ಭ್ರಾತೃತ್ವ, ಸಹಬಾಳ್ವೆ, ಐಕ್ಯತೆ ಪ್ರತಿಪಾದಿಸುತ್ತದೆ. ಈ ಹಿನ್ನೆಲೆಯಲ್ಲಿ ಸಂವಿಧಾನದ ಬಗ್ಗೆ ಹೆಚ್ಚು ಜಾಗೃತರಾಗಬೇಕಿದೆ. ಮಕ್ಕಳಿಗೆ ಸಂವಿಧಾನ ಓದಿಸುವ ಕೆಲಸವಾಗಬೇಕಿದೆ ಎಂದರು.
ತಾಲೂಕು ಪಂಚಾಯಿತಿ ಸಹಾಯಕ ನಿರ್ದೇಶಕ ರವೀಂದ್ರ, ಸಮಾಜ ಕಲ್ಯಾಣ ಇಲಾಖೆಯ ಪ್ರಭಾರ ಸಹಾಯಕ ನಿರ್ದೇಶಕ ಕೇಶವಮೂರ್ತಿ, ಮಂಗಲ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಉಮಾ, ಪಿಡಿಒ ದೊರೆಯಾ ಇತರರು ಇದ್ದರು.