ಮಂಡ್ಯ: ಗಣರಾಜ್ಯೋತ್ಸವದ ಅಂಗವಾಗಿ ಜ.26 ರಿಂದ ಫೆ.23ರವರೆಗೆ ಜಿಲ್ಲೆಯಲ್ಲಿ ಸಂವಿಧಾನ ಜಾಗೃತಿ ಜಾಥಾ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಕುಮಾರ ತಿಳಿಸಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಅಧಿಕಾರಿಗಳೊಂದಿಗೆ ಆಯೋಜಿಸಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಒಂದು ತಿಂಗಳು ನಡೆಯಲಿರುವ ಜಾಗೃತಿ ಜಾಥಾಗೆ 26ರಂದು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಚಾಲನೆ ನೀಡಲಿದ್ದಾರೆ. ಸಂವಿಧಾನದ ಮಹತ್ವ ಹಾಗೂ ಮೌಲ್ಯದ ಕುರಿತು ಅರಿವು ಮೂಡಿಸುವದರ ಜತೆಗೆ ರಾಷ್ಟ್ರೀಯ ಏಕತೆಯನ್ನು ಎತ್ತಿಹಿಡಿಯುವುದು ಕಾರ್ಯಕ್ರಮದ ಉದ್ದೇಶವಾಗಿದೆ. ಜಾಥವು ಎಲ್ಲ ಗ್ರಾಮ ಪಂಚಾಯಿತಿಗಳಲ್ಲಿ ಸಂಚರಿಸಲಿದ್ದು, ಇದಕ್ಕೆ ವ್ಯವಸ್ಥಿತವಾಗಿ ರೂಟ್‌ಮ್ಯಾಪ್ ಸಿದ್ಧಪಡಿಸಬೇಕು ಎಂದು ಸೂಚನೆ ನೀಡಿದರು.
ಕಾರ್ಯಕ್ರಮದಲ್ಲಿ ಯಾವುದೇ ಲೋಪ ಉಂಟಾಗದಂತೆ ನೋಡಿಕೊಳ್ಳಲು ಗ್ರಾಮ ಪಂಚಾಯಿತಿ, ತಾಲೂಕು ಹಾಗೂ ಜಿಲ್ಲಾ ಮಟ್ಟದಲ್ಲಿ ಸಮಿತಿ ರಚಿಸಲಾಗುವುದು. ಜಾಥಾದ ಬಗ್ಗೆ ಜನಪ್ರತಿನಿಧಿಗಳಿಗೆ ಮಾಹಿತಿ ನೀಡಿ ತಾಲೂಕು ಮಟ್ಟದಲ್ಲಿ ಸಭೆ ಆಯೋಜಿಸಿ, ಎಲ್ಲ ಸಂಘಟನೆಗಳ ಮುಖಂಡರನ್ನು ಆಹ್ವಾನಿಸಿ. ಜಾಥಾದಲ್ಲಿ ಎಲ್ಇಡಿ ಡಿಸ್‌ಪ್ಲೇ ವಾಹನದಲ್ಲಿ ಸಂವಿಧಾನ ಜಾಗೃತಿ ಕುರಿತು ವಿಡಿಯೋ ಕ್ಲಿಪ್‌ಗಳನ್ನು ಪ್ರದರ್ಶಿಸಲಾಗುವುದು. ಇದರೊಂದಿಗೆ ಸ್ತಬ್ದಚಿತ್ರ ಹಾಗೂ ಕಲಾತಂಡಗಳು ಭಾಗವಹಿಸಿ ವಿಶೇಷ ಮೆರಗು ನೀಡಲಿದೆ ಎಂದು ವಿವರಿಸಿದರು.
ಪ್ರಮುಖವಾಗಿ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಪ್ರಬಂಧ ಸ್ಪರ್ಧೆ ನಡೆಸಬೇಕು. ಅಂತೆಯೇ ಜಾಥಾ ತಮ್ಮ ಗ್ರಾಮಕ್ಕೆ ಆಗಮಿಸಿದಾಗ ಕಾರ್ಯಕ್ರಮ ಆಯೋಜಿಸಿ ಬಹುಮಾನ ವಿತರಣೆ ಮಾಡಬೇಕು. ಭಾರತದ ಸಂವಿಧಾನ ಪೀಠಿಕೆ, ನ್ಯಾಯ ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ, ಡಾ.ಬಿ.ಆರ್.ಅಂಬೇಡ್ಕರ್ ಅವರ ಪರಿಕಲ್ಪನೆ, ಬಸವಣ್ಣ ಅವರ ವಚನ ಮತ್ತು ಭಾರತದ ಸಂವಿಧಾನದ ಪ್ರಸ್ತುತತೆ ಸೇರಿದಂತೆ ಇನ್ನಿತರ ವಿಷಯಗಳ ಬಗ್ಗೆ ಸಂಪನ್ಮೂಲ ವ್ಯಕ್ತಿಗಳಿಂದ ಉಪನ್ಯಾಸ ಕಾರ್ಯಕ್ರಮ ಆಯೋಜಿಸಬೇಕು. ಕಾರ್ಯಕ್ರಮ ನಡೆಯುವ ಸ್ಥಳಗಳಲ್ಲಿ ಸಾರ್ವಜನಿಕರಿಗೆ ಜಾಗೃತಿ ಮೂಡಿಸುವುದರ ಜತೆಗೆ ಸಹಿ ಆಂದೋಲನವನ್ನು ನಡೆಸಬೇಕು. ಜತೆಗೆ ಕಾರ್ಯಕ್ರಮದ ಭಾವಚಿತ್ರವನ್ನು ವೆಬ್‌ಸೈಟ್‌ನಲ್ಲಿ ಅಪ್‌ಲೋಡ್ ಮಾಡುವಂತೆ ಸೂಚಿಸಿದರು.
ಜಿಲ್ಲಾ ಪಂಚಾಯಿತಿ ಸಿಇಒ ಶೇಖ್ ತನ್ವೀರ್ ಆಸಿಫ್ ಮಾತನಾಡಿ, ಜಿಲ್ಲೆಯಲ್ಲಿ ಒಟ್ಟು 233 ಗ್ರಾಮ ಪಂಚಾಯಿತಿಗಳಿವೆ. ರೂಟ್ ಮ್ಯಾಪ್ ಸಿದ್ಧಪಡಿಸುವ ಸಂದರ್ಭದಲ್ಲಿ ಐತಿಹಾಸಿಕ ಸ್ಥಳಗಳಿರುವ ರಸ್ತೆಗಳನ್ನು ಆಯ್ಕೆ ಮಾಡಿಕೊಳ್ಳಿ ಎಂದು ಸಲಹೆ ನೀಡಿದರು.
ಸಭೆಯಲ್ಲಿ ಡಿವೈಎಸ್ಪಿ ಶಿವಮೂರ್ತಿ, ಸಮಾಜಕಲ್ಯಾಣ ಇಲಾಖೆ ಉಪನಿರ್ದೇಶಕ ಸಿದ್ದಲಿಂಗೇಶ್, ತಹಸೀಲ್ದಾರ್ ಡಾ.ಶಿವಕುಮಾರ್ ಬಿರಾದರ್, ಪೌರಾಯುಕ್ತ ಆರ್.ಮಂಜುನಾಥ್, ಜಿಲ್ಲಾ ವಾರ್ತಾಧಿಕಾರಿ ಎಸ್.ಎಚ್.ನಿರ್ಮಲಾ ಇತರರಿದ್ದರು.