ಮಂಡ್ಯ: ಸಂವಿಧಾನ ಜಾತಿ, ಧರ್ಮ, ಲಿಂಗ, ಕುಲದ ವ್ಯತ್ಯಾಸವಿಲ್ಲದೆ ಎಲ್ಲರನ್ನೂ ಒಂದೇ ರೀತಿ ಕಾಣುವ ಬೃಹತ್ ಸಂಹಿತೆ ಎಂದು ಅಪರ ಜಿಲ್ಲಾಧಿಕಾರಿ ಡಾ.ಎಚ್.ಎಲ್.ನಾಗರಾಜು ಬಣ್ಣಿಸಿದರು.
ನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಸಮಾಜ ಕಲ್ಯಾಣ ಇಲಾಖೆ ಮತ್ತು ನಗರಸಭೆ ಸಹಯೋಗದಲ್ಲಿ ಆಯೋಜಿಸಿದ್ದ ಸಂವಿಧಾನ ಜಾಗೃತಿ ಜಾಥಾ ಸಮಾರೋಪ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಸಂವಿಧಾನ ಇಡೀ ದೇಶಕ್ಕೆ ದೈವ ಸಂಹಿತೆಯಾಗಿದೆ. ಸರ್ವರನ್ನು ರಾಜಕೀಯ, ಆರ್ಥಿಕ, ಸಾಮಾಜಿಕವಾಗಿ ಸಮನಾಗಿ ಕಾಣುವ ನಮ್ಮ ದೇಶದ ಧರ್ಮ ಗ್ರಂಥವಾದ ಸಂವಿಧಾನವನ್ನು ಎಲ್ಲರೂ ಗೌರವಿಸಬೇಕು. ಸಂವಿಧಾನ ಪೀಠಿಕೆಯನ್ನು ಜನರ ಮನೆ ಮನೆಗೆ ಮುಟ್ಟಿಸುವ ಜತೆಗೆ ಅವರ ಮನವನ್ನು ಮುಟ್ಟಿಸಬೇಕು. ಎಲ್ಲ ರಾಷ್ಟ್ರಗಳ ಸಂವಿಧಾನಕ್ಕೆ ಮಾತೃ ಭಾರತ ಸಂವಿಧಾನ ಎಂದರು.
ಸಮ ಸಮಾಜದ ಪರಿಕಲ್ಪನೆಯನ್ನು ಹೊಂದಿರುವ ಹಾಗೂ ದೇಶದ ಪ್ರತಿಯೊಬ್ಬರಿಗೂ ಸಮಾನತೆಯಿಂದ ಸ್ವತಂತ್ರವಾಗಿ ಜೀವಿಸಲು ಅವಕಾಶ ಮಾಡಿಕೊಟ್ಟಂತಹ ಶ್ರೇಷ್ಠ ಗ್ರಂಥ ಸಂವಿಧಾನ. ಕಾನೂನಿನ ಮೂಲಕ ಪ್ರತಿಯೊಬ್ಬರನ್ನು ಸಂರಕ್ಷಿಸುವಂತಹ ನಿಯಮಗಳನ್ನೊಳಗೊಂಡ ಧರ್ಮಶಾಸ್ತ್ರವಾಗಿದೆ. ಅಂಬೇಡ್ಕರ್ ಅವರು ಶತ-ಶತಮಾನಗಳಿಗೂ ಅನ್ವಯಿಸುವ ಸಂವಿಧಾನವನ್ನು ಅದ್ಭುತ ರಚನೆಯ ಮೂಲಕ ದೇಶಕ್ಕೆ ಭದ್ರಬುನಾದಿಯನ್ನು ಹಾಕಿಕೊಟ್ಟಿದ್ದಾರೆ. ಪ್ರತಿಯೊಬ್ಬ ಜನಸಾಮಾನ್ಯರು ಕೂಡ ಸಂವಿಧಾನದ ಮಹತ್ವವನ್ನು ಅರಿಯಬೇಕು ಎಂದರು.
ಜ.26ರ ಗಣರಾಜ್ಯೋತ್ಸವ ದಿನದಿಂದ ಪ್ರಾರಂಭವಾದ ಸಂವಿಧಾನ ಜಾಗೃತಿ ಜಾಥಾ ಜಿಲ್ಲೆಯ 233 ಗ್ರಾಮ ಪಂಚಾಯಿತಿ ವ್ಯಾಪ್ತಿಯ 1,485ಕ್ಕೂ ಹೆಚ್ಚು ಗ್ರಾಮಗಳಲ್ಲಿ 1 ತಿಂಗಳ ಕಾಲ ಸಂಚರಿಸಿದೆ. ಸಂವಿಧಾನದ ಮಹತ್ವವನ್ನು ಪ್ರತಿಯೊಬ್ಬರಿಗೂ ತಿಳಿಸುವುದು ಸಂವಿಧಾನ ಇದರ ಉದ್ದೇಶವಾಗಿದೆ ಎಂದು ಹೇಳಿದರು.
ಮುಖ್ಯ ಭಾಷಣಕಾರ ವಿಚಾರವಾದಿ ಡಾ.ಕೃಷ್ಣಮೂರ್ತಿ ಚಮರಂ ಮಾತನಾಡಿ, ಭಾರತ ಅನೇಕ ವರ್ಷಗಳ ಹಿಂದೆ ಪರಕೀಯರ ಆಳ್ವಿಕೆಗೆ ಒಳಪಟ್ಟಿತ್ತು. ಅದ್ಕಕಿಂತ ಮುಂಚೆ ರಾಜ-ಮಹಾರಾಜರ ಆಳ್ವಿಕೆ ಇತ್ತು. ದೇಶವನ್ನು ಆಳಲು ಪ್ರತಿಯೊಬ್ಬರಿಗೂ ಸಮಾನ ಅವಕಾಶ ಕಲ್ಪಿಸುವುದರ ಜತೆಗೆ ಸಾಮಾಜಿಕ, ಆರ್ಥಿಕ, ರಾಜಕೀಯವಾಗಿ ಅವಕಾಶ ನೀಡಿದ್ದು ಅಂಬೇಡ್ಕರ್ ಅವರು ರಚಿಸಿದ ಸಂವಿಧಾನವಾಗಿದೆ. ಈ ಮೂಲಕ ಎಲ್ಲ ವಯಸ್ಕರಿಗೂ ಮತದಾನದ ಅವಕಾಶವನ್ನು ನೀಡಿದ್ದು, ದೇಶವನ್ನು ಆಳುವ ಹಾಗೂ ಜನಪ್ರತಿನಿಧಿಯನ್ನು ಆಯ್ಕೆ ಮಾಡುವ ಸ್ವಾತಂತ್ರೃವನ್ನು ಪ್ರತಿಯೊಬ್ಬರಿಗೂ ನೀಡಲಾಗಿದೆ ಎಂದರು.
ಮೈಷುಗರ್ ಅಧ್ಯಕ್ಷ ಸಿ.ಡಿ.ಗಂಗಾಧರ್, ಅಪರ ಪೊಲೀಸ್ ವರಿಷ್ಠಾಧಿಕಾರಿ ತಿಮ್ಮಯ್ಯ, ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ಸಿದ್ದಲಿಂಗೇಶ್, ನಗರಸಭೆ ಆಯುಕ್ತ ಮಂಜುನಾಥ್, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಅಧಿಕಾರಿ ಶ್ರೀನಿವಾಸ್, ಚಂದ್ರಶೇಖರ್ ಇತರರಿದ್ದರು.
ಇದೇ ಸಂದರ್ಭದಲ್ಲಿ ಸಂವಿಧಾನದ ಪೀಠಿಕೆಯನ್ನು ಬೋಧಿಸಲಾಯಿತು. ಚರಿತಾ ಎಂಬ ಬಾಲಕಿ ಸಂವಿಧಾನದ ಪೀಠಿಕೆಯನ್ನು ಗೀತೆಯ ರೂಪದಲ್ಲಿ ಪ್ರಸ್ತುತ ಪಡಿಸಿ ಗಮನಸೆಳೆದರು.