ಜಿಲ್ಲೆ

ಲಕ್ಷ್ಮೇಶ್ವರದಲ್ಲಿ ಸಂವಿಧಾನ ಜಾಗೃತಿ ಜಾಥಾ ಫೆ.13ರಿಂದ

ರವಿ ಎಸ್. ಬಳೂಟಗಿ

ಲಕ್ಷ್ಮೇಶ್ವರ: ಸಂವಿಧಾನ ಜಾಗೃತಿ ಜಾಥಾ ಫೆ.13ರಿಂದ 16ರವರೆಗೆ ತಾಲೂಕು ವ್ಯಾಪ್ತಿಯಲ್ಲಿ ಸಂಚರಿಸಲಿದೆ. ಈ ವೇಳೆ ಆಯಾ ಭಾಗದ ಗ್ರಾಪಂ ಜನಪ್ರತಿನಿಧಿಗಳು, ಮುಖಂಡರು, ಸಂಘ-ಸಂಸ್ಥೆಯವರು ಜಾಥಾವನ್ನು ಸ್ವಾಗತಿಸಬೇಕು ಎಂದು ತಹಸೀಲ್ದಾರ್ ವಾಸುದೇವ ಎಂ. ಸ್ವಾಮಿ ಹೇಳಿದರು.
ಸೋಮವಾರ ಜರುಗಿದ ಪೂರ್ವ ಸಿದ್ಧತಾ ಸಭೆಯಲ್ಲಿ ಮಾತನಾಡಿದ ಅವರು, ಸಂವಿಧಾನ ಪೀಠಿಕೆ, ಶರಣರ ವಚನಗಳು, ನಮ್ಮ ಭಾಗದ ಸಂಸ್ಕೃತಿ ಬಿಂಬಿಸುವ ಸ್ತಬ್ಧಚಿತ್ರಗಳು ಜಾಥಾದಲ್ಲಿ ಇರುತ್ತದೆ. ಸಂವಿಧಾನ ಕುರಿತು ಶಾಲಾ ಮಕ್ಕಳಿಗೆ ಹೆಚ್ಚಿನ ಅರಿವು ಮೂಡಿಸಲು ವಿವಿಧ ಸ್ಪರ್ಧೆ ಏರ್ಪಡಿಸಿ ವಿಜೇತ ಮಕ್ಕಳಿಗೆ ಸಂವಿಧಾನ ಪೀಠಿಕೆ, ಸಂವಿಧಾನ ಓದು ಕಿರು ಪುಸ್ತಕ ಬಹುಮಾನ ನೀಡಲಾಗುವುದು ಎಂದರು.
ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಶರಣಯ್ಯ ಕುಲಕರ್ಣಿ ಮಾತನಾಡಿ, ಸಂವಿಧಾನ ಮತ್ತು ಏಕತೆ ಸಾರುವ ನಿಟ್ಟಿನಲ್ಲಿ ಜಾಥಾ 26ರಂದು ಜಿಲ್ಲಾ ಕೇಂದ್ರದಿಂದ ಹೊರಟಿದೆ. ಫೆ. 13ರಿಂದ 16 ವರೆಗೆ ತಾಲ್ಲೂಕಿನ 14 ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸಂಚರಿಸಲಿದೆ. ಈ ವೇಳೆ ಗ್ರಾಪಂ ಅಧಿಕಾರಿ ಮತ್ತು ಸಿಬ್ಬಂದಿ ಹಾಜರಿರಬೇಕು ಎಂದರು.
ಗ್ರೇಡ್-2 ತಹಸೀಲ್ದಾರ್ ಮಂಜುನಾಥ ಅಮಾಸಿ, ಕಂದಾಯ ನಿರೀಕ್ಷಕ ಬಿ.ಎಂ. ಕಾತರಾಳ, ಮುಖಂಡರಾದ ಗಂಗಾಧರ ಮೆಣಸಿನಕಾಯಿ, ಅನಿಲ ಮುಳಗುಂದ, ಫಕೀರೇಶ ನಂದೆಣ್ಣವರ, ವಿಠಲ ನಾಯಕ, ಶೇಖಪ್ಪ ಲಮಾಣಿ, ಕೇಶವ ಕಟ್ಟಿಮನಿ, ಗಂಗಾಧರ ಕರಿನಿಂಗಣ್ಣವರ, ರಮೇಶ ಹಂಗನಕಟ್ಟಿ, ಅನಿಲ ನಂದೆಣ್ಣವರ, ತಾವರೆಪ್ಪ ಲಮಾಣಿ ಇದ್ದರು.