ಸರಗೂರು: ಭಾರತ ಸಂವಿಧಾನದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ರಾಜ್ಯ ಸರ್ಕಾರದಿಂದ ಹಮ್ಮಿಕೊಂಡಿರುವ ಸಂವಿಧಾನ ಜಾಗೃತಿ ರಥವನ್ನು ಬುಧವಾರ ಸರಗೂರಿನಲ್ಲಿ ಸ್ವಾಗತಿಸಲಾಯಿತು.
ಬಿದರಹಳ್ಳಿ, ಸಾಗರೆ, ಹೆಗ್ಗನೂರು, ಹಂಚೀಪುರ, ಬಿ.ಮಟಕೆರೆ, ಎಂ.ಸಿ.ತಳಲು ಹಾಗೂ ಹಾದನೂರು ಗ್ರಾಮ ಪಂಚಾಯಿತಿಗಳಿಗೆ ಆಗಮಿಸಿದ ರಥವನ್ನು ಪೂರ್ಣಕುಂಭ, ವಾದ್ಯಮೇಳ, ವೀರಗಾಸೆ, ಶಾಲಾ ಮಕ್ಕಳ ಜಾಥಾ, ನಗಾರಿಗಳೊಂದಿಗೆ ಗ್ರಾಮ ಪಂಚಾಯಿತಿ ಚುನಾಯಿತ ಪ್ರತಿನಿಧಿಗಳು ಸಂಭ್ರಮದಿಂದ ಸ್ವಾಗತಿಸಿದರು.
ಸಾಗರೆ ಗ್ರಾಮ ಪಂಚಾಯಿತಿ ಕಚೇರಿ ಬಳಿ ಅಂಬೇಡ್ಕರ್ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಮಾತನಾಡಿದ ತಾಪಂ ಕಾರ್ಯನಿರ್ವಹಣಾಧಿಕಾರಿ ಕೆ.ಸುಷ್ಮಾ, ಸಂವಿಧಾನವನ್ನು ಪ್ರತಿಯೊಬ್ಬರೂ ತಿಳಿದುಕೊಳ್ಳುವ ಉದ್ದೇಶದಿಂದ ಸರ್ಕಾರ ಈ ಜಾಗೃತಿ ಜಾಥಾವನ್ನು ಹಮ್ಮಿಕೊಂಡಿದೆ. ಹೀಗಾಗಿ ಎಲ್ಲರೂ ಸಂವಿಧಾನದ ಬಗ್ಗೆ ಅರಿಯಬೇಕು ಎಂದು ತಿಳಿಸಿದರು.
ಆಯಾ ಪಂಚಾಯಿತಿ ವ್ಯಾಪ್ತಿಯ ಶಾಲಾ ಮಕ್ಕಳಿಂದ ಸಂವಿಧಾನ ಪೀಠಿಕೆಯನ್ನು ಓದಿಸಲಾಯಿತು. ಬಿ.ಮಟಕೆರೆ ಗ್ರಾಮ ಪಂಚಾಯಿತಿಯಲ್ಲಿ ಬೈಕ್ ರ‌್ಯಾಲಿ ನಡೆಸಲಾಯಿತು. ಹಾಡಿ ಜನರು ಸಂವಿಧಾನ ಕುರಿತು ಮಾತನಾಡಿದರು. ಮಕ್ಕಳಿಗೆ ವಿವಿಧ ಸ್ಪರ್ಧೆಗಳನ್ನು ಆಯೋಜಿಸಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು.
ತಹಸೀಲ್ದಾರ್ ರುಕಿಯಾ ಬೇಗಂ ಮಾತನಾಡಿದರು. ಗ್ರಾಮ ಪಂಚಾಯಿತಿ ಅಧ್ಯಕ್ಷ ಅಜಿತ್‌ಕುಮಾರ್, ಸುಧೀರ್, ರುಕ್ಷ್ಮಿಣಿ ಪುಟ್ಟಯ್ಯ, ವಸಂತಮ್ಮ ಸಣ್ಣಪ್ಪನಾಯಕ, ಮಂಜುಳಾ ರಾಮಚಂದ್ರ, ಲಕ್ಷ್ಮೀ ಮಾದಪ್ಪ, ತಾಲೂಕು ಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳಾದ ರಾಮಸ್ವಾಮಿ, ಶಶಿಕಲಾ, ರೇವಣ್ಣ, ಚಿಕ್ಕನಾಯಕ, ನಾಗರಾಜು, ಚೆನ್ನಪ್ಪ, ಲೋಕೇಶ್, ಭಾಗ್ಯಮ್ಮ, ಗ್ರಾಮ ಪಂಚಾಯಿತಿ ಸದಸ್ಯರಾದ ಕುರ್ಣೇಗಾಲ ಬೆಟ್ಟಸ್ವಾಮಿ, ಮುತ್ತರಾಜು, ದೇವದಾಸ್, ಮುಖಂಡರಾದ ನಿಂಗರಾಜು, ಚೆನ್ನಿಪುರ ಮಲ್ಲೇಶ್, ಪ್ರಭಾಕರ್ ಹಾಜರಿದ್ದರು.