ಜಿಲ್ಲೆ

ಗುರಿ ಸಾಧನೆಗೆ ನಿರಂತರ ಪ್ರಯತ್ನ, ಪರಿಶ್ರಮ ಮುಖ್ಯ: ಮಂಡ್ಯ ಜಿಲ್ಲಾಧಿಕಾರಿ ಡಾ.ಕುಮಾರ

ಮೈಸೂರು: ಗುರಿ ಸಾಧನೆಗೆ ನಿರಂತರ ಪ್ರಯತ್ನ, ಪರಿಶ್ರಮ ಬಹಳ ಮುಖ್ಯ ಎಂದು ಮಂಡ್ಯ ಜಿಲ್ಲಾಧಿಕಾರಿ ಡಾ.ಕುಮಾರ ಹೇಳಿದರು.


ಜ್ಞಾನಬುತ್ತಿ ಸಂಸ್ಥೆ ವತಿಯಿಂದ ನಗರದ ಲಕ್ಷ್ಮೀಪುರಂ ಸರ್ಕಾರಿ ಪ್ರೌಢಶಾಲೆ ಮತ್ತು ಪದವಿ ಪೂರ್ವ ಕಾಲೇಜಿನಲ್ಲಿ ಶನಿವಾರ ಗ್ರಾಮ ಆಡಳಿತಾಧಿಕಾರಿ ಹಾಗೂ ಪಿಡಿಒ ಪರೀಕ್ಷೆಗೆ ಉಚಿತ ತರಬೇತಿ ಶಿಬಿರದ ಸಮಾರೋಪ ಕಾರ್ಯಕ್ರಮದಲ್ಲಿ ಮಾತನಾಡಿದರು.


ಸ್ಪರ್ಧಾತ್ಮಕ ಪರೀಕ್ಷೆ ಎದುರಿಸುವ ಅಭ್ಯರ್ಥಿಗಳು ಕೀಳರಿಮೆ ಮೈಗೂಡಿಸಿಕೊಳ್ಳಬಾರದು. ಎರಡು ದೋಣಿ ಮೇಲಿನ ಪಯಣ ಸರಿಯಲ್ಲ. ಹಾಗೆ ಎರಡ್ಮೂರು ಗುರಿ, ಕೆಲಸಗಳನ್ನೂ ಕೈಗೆತ್ತಿಕೊಳ್ಳಬಾರದು, ಒಂದೇ ಮಾರ್ಗದಲ್ಲಿ ಸಾಗಬೇಕು. ನಿರ್ದಿಷ್ಟ ದಾರಿಯಲ್ಲಿ ಒಂದೇ ದೋಣಿಯಲ್ಲಿ ನಿರಂತರವಾಗಿ ಮುಂದಕ್ಕೆ ಸಾಗಿದಾಗ ಗುರಿ ಮುಟ್ಟಲು ಸುಲಭವಾಗುತ್ತದೆ ಎಂದರು.


ಯಾವುದೇ ಪರೀಕ್ಷೆ, ಗುರಿ ಸಾಧನೆಗೆ ಮತ್ತು ಯಶಸ್ಸು ಗಳಿಸಲು ಕಠಿಣ ಅಧ್ಯಯನ ಹಾಗೂ ತಾಳ್ಮೆ ಅಗತ್ಯ. ಎಲ್ಲರಲ್ಲೂ ಕನಸುಗಳು ಇರುತ್ತವೆ. ಆದರಂತೆ ಅದನ್ನು ನನಸು ಮಾಡಿಕೊಳ್ಳುವ ಮನೋಭಾವ, ಆತ್ಮಸ್ಥೈರ್ಯ, ಛಲ ಇರಬೇಕು. ಆಗ ಮಾತ್ರ ಯಶಸ್ಸು ದೊರೆಯಲು ಸಾಧ್ಯ ಎಂದರು.
ಬಡತನ, ಹಳ್ಳಿಯ ಶಾಲೆ, ಕನ್ನಡ ಮಾಧ್ಯಮ, ಅನಕ್ಷರತೆ, ತಂದೆ-ತಾಯಿ ಇವು ಸಾಧನೆಗೆ ಅಡ್ಡಿ ಎಂದು ಬಹುತೇಕರು ಭಾವಿಸಿ ಸಾಧನೆ ಮಾಡಲು ಹಿಂದೇಟು ಹಾಕುತ್ತಾರೆ. ನನ್ನ ಪ್ರಕಾರ ಬಡತನ ವರವೇ ಹೊರತು ಶಾಪವಲ್ಲ. ಸಮಸ್ಯೆಗಳ ಸುಳಿಯಿಂದಲೇ ಸಾಧಕರು ಎದ್ದು ಬರುವುದು. ಲಕ್ಷ್ಮೀ ಇದ್ದ ಕಡೆ ಸರಸ್ವತಿ ಇರಲ್ಲ ಎಂಬ ಮಾತೇ ಇದಕ್ಕೆ ಸಾಕ್ಷಿ ಎಂದು ಹೇಳಿದರು.


ಬಡತನ ಮತ್ತು ಗ್ರಾಮೀಣ ಹಿನ್ನೆಲೆಯಿಂದ ಬಂದ ನಾನು ದಿನಪತ್ರಿಕೆ ಮತ್ತು ವಾರಪತ್ರಿಕೆಗಳನ್ನು ಓದಲೆಂದೇ ನನ್ನೂರಿನಿಂದ ನಾಲ್ಕು ಕಿ.ಮೀ.ನಡೆದುಕೊಂಡು ಹೋಗುತ್ತಿದ್ದೆ. ಈ ಸ್ಫೂರ್ತಿ ಪಡೆದೇ ನಾನು ಮಂಗಳೂರು ಜಿಲ್ಲಾ ಪಂಚಾಯಿತಿ ಸಿಇಒ ಆಗಿದ್ದಾಗ ಗ್ರಾಮೀಣ ಮತ್ತು ನಗರ ಬಸ್ ನಿಲ್ದಾಣಗಳಲ್ಲಿ ಪುಸ್ತಕ ಗೂಡು ಆರಂಭಿಸಿದ್ದೆ.

ಅಲ್ಲಿ ದಿನಪತ್ರಿಕೆ, ವಾರಪತ್ರಿಕೆ ಮತ್ತು ಪುಸ್ತಕಗಳನ್ನು ಇಡುತ್ತಿದ್ದೆವು. ಜತೆಗೆ ಪುಸ್ತಕ ಜೋಳಿಗೆ ಎಂಬ ಕಾರ್ಯಕ್ರಮದ ಮೂಲಕ ಪೌರಕಾರ್ಮಿಕರು ಮನೆಮನೆಗೆ ತೆರಳಿ ಕಸದೊಂದಿಗೆ ಪುಸ್ತಕವನ್ನು ಪಡೆದು ತಂದು ಪುಸ್ತಕ ಗೂಡಿಗೆ ಸೇರಿಸುತ್ತಿದ್ದವು. ಆರಂಭದಲ್ಲಿ ಈ ಯೋಜನೆಯ ಬಗ್ಗೆ ಹಾಸ್ಯ ಮಾಡುತ್ತಿದ್ದವರು ನಿಬ್ಬೆರಗಾಗುವಂತೆ 267 ಪುಸ್ತಕ ಗೂಡು ಮತ್ತು 45 ಸಾವಿರ ಪುಸ್ತಕ ಸಂಗ್ರಹಿಸಿದ್ದೆ. ಪುಸ್ತಕ ಕದ್ದು ಓದಿದರೂ ನಮ್ಮ ಉದ್ದೇಶ ಈಡೇರಿದ ಹಾಗೆ ಎಂದರು.


ಅಡ್ಡದಾರಿಯಿಂದ ಸಾಧನೆ ಅಸಾಧ್ಯ. ದೇವರ ಮೇಲಿನ ನಂಬಿಕೆಗಿಂತಲೂ ನಿಮ್ಮ ಮೇಲೆ ನೀವು ಅತಿ ಹೆಚ್ಚಿನದಾಗಿ ಆತ್ಮವಿಶ್ವಾಸ ಮತ್ತು ನಂಬಿಕೆಯಿಟ್ಟುಕೊಳ್ಳಬೇಕು. ಪುಸ್ತಕ ಹಿಡಿದರೆ ಸಮಾಜದಲ್ಲಿ ತಲೆ ಎತ್ತುವಂತೆ ಆಗುತ್ತದೆ. ಫೇಸ್‌ಬುಕ್ ನೋಡುವ ಬದಲು ಫೇಸ್‌ನ ಬುಕ್ ಕಡೆ ತಿರುಗಿಸಿದರೆ ಅದೇ ಯಶಸ್ಸು ಎಂದು ಅಭ್ಯರ್ಥಿಗಳಿಗೆ ಕಿವಿಮಾತು ಹೇಳಿದರು.


ಭಾವನೆಗಳ ಬಾಗಿಲು ಮುಚ್ಚಿ, ನಂಬಿಕೆಯ ಬಾಗಿಲು ತೆರೆದರೆ ಅದೇ ಸಾಧನೆಯೆಡೆಗೆ ಕರೆದುಕೊಂಡು ಹೋಗುತ್ತದೆ. ಅವಕಾಶಗಳ ಸದ್ಬಳಕೆ ಮಾಡಿಕೊಂಡವನೇ ಜಾಣ ಎಂದರು.


ವಿಶ್ರಾಂತ ಕುಲಪತಿ ಡಾ.ಸಯ್ಯದ್ ಅಖಿಲ್ ಅಹಮದ್, ಸಂಸ್ಥೆಯ ಜೈನಹಳ್ಳಿ ಸತ್ಯನಾರಾಯಣಗೌಡ, ಎಚ್.ಬಾಲಕೃಷ್ಣ, ಪ್ರೊ.ಕೃ.ಪ. ಗಣೇಶ, ಡಾ. ನಾಗಾಚಾರ್, ಡಾ.ಸುದರ್ಶನ್, ಎಸ್.ಗಣೇಶ್, ಕಿರಣ್ ಕೌಶಿಕ್, ಕೆ.ವೈ.ನಾಗೇಂದ್ರ, ಡಾ.ಎಸ್.ಬಿ.ಎಂ.ಪ್ರಸನ್ನ ಇದ್ದರು. ಡಾ.ಹೊನ್ನಯ್ಯ, ರೋಹನ್ ರವಿಕುಮಾರ್, ವಿ.ಜಯಪ್ರಕಾಶ್, ಯು.ಎಂ.ಶರದ್ ರಾವ್, ರಾಜೀವ್ ಶರ್ಮ, ಡಾ.ಎಂ.ಎಚ್.ಕೃಷ್ಣ, ಡಾ.ಮೋಹನ್ ಸಂಪನ್ಮೂಲ ವ್ಯಕ್ತಿಗಳಾಗಿದ್ದರು.