ಶೃಂಗೇರಿ: ಪ್ರತಿದಿನ ಠಾಣೆಗೆ ಬರುವ ದೂರುಗಳು, ಕೇಸ್ ಕುರಿತು ಮಾಹಿತಿ ಸಂಗ್ರಹ, ಆರೋಪಿ ಸಿಕ್ಕರೆ ಮತ್ತಷ್ಟು ವಿಚಾರಣೆಯಲ್ಲಿ ನಿರತರರಾಗಿರುವ ಪೊಲೀಸ್ ಇಲಾಖೆಯಲ್ಲಿ ವರಲಕ್ಷ್ಮೀ ಹಬ್ಬದ ಶುಕ್ರವಾರ ಸಂಜೆ ವಿಶೇಷ ಸಂಭ್ರಮದ ವಾತಾವರಣವಿತ್ತು.
ಕರ್ತವ್ಯದಿಂದಾಗಿ ಕುಟುಂಬದಿಂದ ದೂರದಲ್ಲಿರುವ ಪೊಲೀಸ್ ಪೇದೆ ರುಬೀನಾ ಬಾನು ಅವರಿಗೆ ಸಹೋದ್ಯೋಗಿಗಳೇ ಸಹೋದರರಾದರು. ಠಾಣೆಯಲ್ಲಿ ಸೀಮಂತ ಏರ್ಪಡಿಸಿ ಸೀರೆ, ಬಳೆ, ಹೂವು, ಅರಿಶಿಣ, ಕುಂಕುಮದ ಬಾಗಿನ ನೀಡಿ ಹೆರಿಗೆ ಸುಖಕರವಾಗಲಿ ಎಂದು ಶುಭ ಹಾರೈಸಿದರು.
ಪಟ್ಟಣ ಠಾಣೆಯಲ್ಲಿ ಪೇದೆಯಾಗಿ ಸುಮಾರು ನಾಲ್ಕು ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ರುಬೀನಾ ಬಾನು, ಅವರ ಪತಿ ವಿನಾಯಕ್ ಕೆರೆಕಟ್ಟೆ ಎಎನ್‌ಎ್ ಕ್ಯಾಂಪಿನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಪಿಎಸ್‌ಐ ಭರಮಪ್ಪ ಬೆಳಗಲಿ, ಎಎಸ್‌ಐ ಪ್ರಸನ್ನಕುಮಾರ್, ಸಿಬ್ಬಂದಿ ಅಕ್ಷತಾ, ಎಚ್.ಸಿ.ಸದಾಶಿವ, ಕಾಂತರಾಜು ಅವರು ಗರ್ಭಿಣಿಗೆ ಶುಭ ಹಾರೈಸಿದರು.
ಯಾವಾಗಲೂ ಕರ್ತವ್ಯದಲ್ಲಿ ನಿರತರಾಗಿರುವ ಪೊಲೀಸರಿಗೆ ಇಲಾಖೆ ತವರುಮನೆ. ಇಲ್ಲಿರುವ ಸಿಬ್ಬಂದಿ ಕುಟುಂಬದ ಸದಸ್ಯರು. ಠಾಣೆಯಲ್ಲಿ ಮಾಡಿದ ಸೀಮಂತ ನನ್ನ ತವರು ಮನೆಯಲ್ಲಿ ಮಾಡಿದಷ್ಟು ಖುಷಿ ನೀಡಿದೆ. ಭಾವನಾತ್ಮಕ ಕ್ಷಣಗಳಿಗೆ ಸಾಕ್ಷಿಯಾದ ಪೊಲೀಸ್ ಇಲಾಖೆ ಅಧಿಕಾರಿಗಳಿಗೆ ಹಾಗೂ ಸಿಬ್ಬಂದಿಗೆ ನಾನು ಚಿರಋಣಿ ಎಂದು ರುಬೀನಾ ಬಾನು ಹೇಳಿದರು.