ಮಾನ್ವಿ: ಧರ್ಮಸ್ಥಳ ಕ್ಷೇತ್ರದ ಬಗ್ಗೆ ಅಪಪ್ರಚಾರ ಮತ್ತು ಹಿಂದು ಧಾರ್ಮಿಕ ಕೇಂದ್ರಗಳ ವಿರುದ್ಧ ಹುನ್ನಾರ ನಡೆಸುವ ಸಮಾಜಘಾತುಕರನ್ನು ಬಂಧಿಸಿ ಕಠಿಣ ಕ್ರಮ ವಹಿಸಬೇಕು ಎಂದು ಬಿಜೆಪಿ ತಾಲೂಕು ಅಧ್ಯಕ್ಷ ವೀರಭದ್ರಗೌಡ ಭೋಗಾವತಿ ಆಗ್ರಹಿಸಿದರು.
ಪಟ್ಟಣದ ಬಸವ ವೃತ್ತದಲ್ಲಿ ಮಂಗಳವಾರ ಕೈಗೊಂಡಿದ್ದ ಪ್ರತಿಭಟನೆ ಉದ್ದೇಶಿಸಿ ಮಾತನಾಡಿದರು. ಧರ್ಮಸ್ಥಳ ಕ್ಷೇತ್ರಕ್ಕೆ ದೇಶಾದ್ಯಂತ ಕೋಟ್ಯಂತರ ಭಕ್ತರಿದ್ದಾರೆ. ಈ ಕ್ಷೇತ್ರಕ್ಕೆ ನಿತ್ಯ ಲಕ್ಷಾಂತರ ಭಕ್ತರು ಆಗಮಿಸುತ್ತಾರೆ.
ಹಿಂದುಗಳಿಗೆ ಇದು ಪ್ರಮುಖ ಧಾರ್ಮಿಕ ಶ್ರದ್ಧೆಯ ಕೇಂದ್ರವಾಗಿದ್ದು, ಧಾರ್ಮಿಕ ಭಾವನೆಯನ್ನು ಅಪಮಾನಿಸುವುದು ಸರಿಯಲ್ಲ. ಅನಾಮಿಕನ ಹಿಂದಿರುವ ವ್ಯಕ್ತಿಗಳು ಯಾರು ಮತ್ತು ಅವರ ಸಂಚು ಏನೆಂಬುದನ್ನು ರಾಜ್ಯದ ಜನತೆಗೆ ಸರ್ಕಾರ ತಿಳಿಸಬೇಕು ಎಂದು ಒತ್ತಾಯಿಸಿದರು. ಗ್ರೇಡ್-2 ತಹಸೀಲ್ದಾರ್ ಅಬ್ದುಲ್ ವಾಹಿದ್‌ಗೆ ಮನವಿ ಸಲ್ಲಿಸಿದರು.
ಪ್ರಮುಖರಾದ ಹನುಮೇಶ ನಾಯಕ ಜೀನೂರು, ವೀರನಗೌಡ ವಕೀಲ, ಶಿವಕುಮಾರಸ್ವಾಮಿ ಜಿ., ಮಲ್ಲಿಕಾರ್ಜುನಗೌಡ ಸಂಗಾಪುರ, ಶಿವನಗೌಡ, ಬುಡ್ಡಪ್ಪ ನಾಯಕ, ಕೆ.ನಾಗಲಿಂಗಸ್ವಾಮಿ, ರುದ್ರಗೌಡ ಮದ್ಲಾಪುರು, ವಕೀಲರಾದ ವಿಶ್ವನಾಥ, ಜಗದೀಶ, ಸುದರ್ಶನ ಇತರರಿದ್ದರು.