ಜಿಲ್ಲೆ

ಕೃಷಿ ಕ್ಷೇತ್ರದಲ್ಲಿ ಗಣನೀಯ ಸಾಧನೆಯಾಗಲಿ: ಸಿಎಫ್‌ಟಿಆರ್‌ಐ ಮಾಜಿ ನಿರ್ದೇಶಕ ಡಾ.ವಿ.ಪ್ರಕಾಶ್ ಸಲಹೆ

ಮೈಸೂರು: ಭಾರತ ಬಲಿಷ್ಠವಾಗಿ ಮುಂದುವರೆಯಬೇಕಾದರೆ ಕೃಷಿ ಕ್ಷೇತ್ರದಲ್ಲಿ ಗಣನೀಯ ಸಾಧನೆ ಮಾಡಬೇಕು ಎಂದು ಸಿಎಫ್‌ಟಿಆರ್‌ಐ ಮಾಜಿ ನಿರ್ದೇಶಕ ಹಾಗೂ ಪದ್ಮಶ್ರೀ ಪುರಸ್ಕೃತ ಡಾ.ವಿ.ಪ್ರಕಾಶ್ ಅಭಿಪ್ರಾಯಪಟ್ಟರು.
ಕೃಷ್ಣಮೂರ್ತಿಪುರಂನಲ್ಲಿರುವ ಶಾರದಾವಿಲಾಸ ಶಿಕ್ಷಣ ಸಂಸ್ಥೆಯ ಆವರಣದಲ್ಲಿ ಶುಕ್ರವಾರ ಆಯೋಜಿಸಿದ್ದ 75ನೇ ಗಣರಾಜ್ಯೋತ್ಸವದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು.
ದೇಶ 2030ರ ವೇಳೆಗೆ ಎಲ್ಲ ರಂಗಗಳಲ್ಲೂ ಮುಂಚೂಣಿಯಲ್ಲಿರಬೇಕು. ಇದಕ್ಕಾಗಿ ಕೃಷಿ ಕ್ಷೇತ್ರವನ್ನು ಪರಿಗಣನೆಗೆ ತೆಗೆದುಕೊಳ್ಳಬೇಕು. ಯುವಶಕ್ತಿ ಒಗ್ಗೂಡಿದರೆ ದೇಶ ಮತ್ತಷ್ಟು ಅಭಿವೃದ್ಧಿ ಹೊಂದಲು ಸಾಧ್ಯ. ಯುವಕರು ಶಿಕ್ಷಣವನ್ನು ಪಡೆಯುವುದರ ಜತೆಗೆ ಆರೋಗ್ಯವನ್ನೂ ಕಾಪಾಡಿಕೊಳ್ಳಬೇಕಿದೆ ಎಂದರು.
ಭಾರತ ದೇಶ ಸರ್ವ ಸ್ವತಂತ್ರವಾದ ದೇಶವಾಗಿದ್ದು, ವೈವಿಧ್ಯತೆಯಲ್ಲಿ ಏಕತೆಯನ್ನು ಹೊಂದಿದೆ. ಇಂತಹ ಭರತ ಭೂಮಿಯಲ್ಲಿ ವಿಶೇಷವಾದ ಸಂವಿಧಾನವನ್ನು ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ನೀಡಿದ್ದು, ಇದನ್ನು ಪ್ರತಿಯೊಬ್ಬರೂ ಅರ್ಥ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಸಂಸ್ಥೆಯ ಆಡಳಿತ ಮಂಡಳಿಯ ಹಿರಿಯ ಸದಸ್ಯ ಎಸ್.ಎಲ್.ರಾಮಚಂದ್ರ ಧ್ವಜಾರೋಹಣ ನೆರೆವೇರಿಸಿ ಮಾತನಾಡಿ, ದೇಶದ ಏಳಿಗೆಗೆ ಸಮರ್ಪಣಾ ಮನೋಭಾವ, ತ್ಯಾಗ ಬಲಿದಾನಕ್ಕೆ ಒಳಗಾದ ಹುತಾತ್ಮರನ್ನು ಸ್ಮರಿಸಿದರು.
ಸಂಸ್ಥೆಯ ಗೌರವ ಕಾರ್ಯದರ್ಶಿ ಎನ್.ಚಂದ್ರಶೇಖರ್, ಆಡಳಿತ ಮಂಡಳಿಯ ಹಿರಿಯ ಸದಸ್ಯರಾದ ಆರ್.ನರಸಿಂಹ, ಆರ್.ಎಸ್.ಮೋಹನ್ ಮೂರ್ತಿ, ಎಸ್.ಅಚ್ಯುತ ಇದ್ದರು. ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು.
ಪ್ರಾಂಶುಪಾಲೆ ಡಾ.ಎಂ.ದೇವಿಕಾ, ಡಾ.ಹನುಮಂತಚಾರ್ ಜೋಶಿ, ನಿವೃತ್ತ ಶಿಕ್ಷಕ ವೆಂಕಟರಮಣ ಭಟ್ ಇತರರು ಇದ್ದರು.