ಬೋರಗಾಂವ: ನಿಪ್ಪಾಣಿ ತಾಲೂಕು ಸೇರಿ ಗಡಿಭಾಗದಲ್ಲಿ ವೃತ್ತಿಪರ ನೇಕಾರರಿದ್ದಾರೆ. ಈ ನೇಕಾರರನ್ನು ಕಾರ್ಮಿಕರೆಂದು ಪರಿಗಣಿಸಿ ಕಟ್ಟಡ ಕಾರ್ಮಿಕರಿಗಿರುವ ಎಲ್ಲ ಸೌಲಭ್ಯಗಳನ್ನು ಒದಗಿಸಬೇಕು. ರಾಜ್ಯದಲ್ಲಿ ಈಗಾಗಲೇ 11 ನೇಕಾರರು ಸಾಲ ತೀರಿಸಲಾಗದೆ ಆತ್ಮಹತ್ಯೆಗೆ ಶರಣಾಗಿದ್ದು, ಅವರ ಕುಟುಂಬಕ್ಕೆ ಸೂಕ್ತ ನ್ಯಾಯ ಒದಗಿಸಬೇಕು ಎಂದು ರಾಜ್ಯ ನೇಕಾರರ ಸೇವಾ ಸಂಘದ ವತಿಯಿಂದ ಶುಕ್ರವಾರ ಮನವಿ ಸಲ್ಲಿಸಲಾಯಿತು.
ಸಮೀಪದ ಮಾಣಕಾಪುರ ಗ್ರಾಮದಲ್ಲಿ ಕಂದಾಯ ಇಲಾಖೆ ಹಾಗೂ ಗ್ರಾಪಂಗೆ ಮನವಿ ಸಲ್ಲಿಸಿದ ಸಂಘದ ಪದಾಧಿಕಾರಿಗಳು, ನೇಕಾರರು ಶೈಕ್ಷಣಿಕ, ಔದ್ಯೋಗಿಕ, ಆರ್ಥಿಕ ಮತ್ತು ರಾಜಕೀಯವಾಗಿ ಹಿಂದುಳಿದಿದ್ದು, ಯಾವುದೇ ಶಾಶ್ವತ ಪರಿಹಾರ ಅಥವಾ ಸೌಲಭ್ಯಗಳನ್ನು ಪಡೆದಿಲ್ಲ. ಅದಕ್ಕಾಗಿ ವೃತ್ತಿಪರ ನೇಕಾರರಿಗೆ ಕಟ್ಟಡ ಕಾರ್ಮಿಕರಂತೆ ಕಾರ್ಮಿಕ ಸೌಲಭ್ಯ ಒದಗಿಸಬೇಕು ಎಂದು ಒತ್ತಾಯಿಸಿದರು.
55 ವರ್ಷದ ನೇಕಾರರಿಗೆ 5 ಸಾವಿರ ರೂ. ಮಾಸಾಶನ ಜಾರಿ ಮಾಡಬೇಕು. ರಾಷ್ಟ್ರೀಕೃತ ಬ್ಯಾಂಕ್ ಹಾಗೂ ಸಹಕಾರಿ ಸಂಘಗಳಲ್ಲಿ ನೇಕಾರರು ಪಡೆದ ಸಂಪೂರ್ಣ ಸಾಲ ಮನ್ನಾ ಮಾಡಬೇಕು. ಜವಳಿ ಇಲಾಖೆಯ ನಿಗಮ, ಮಂಡಳಿಗಳಲ್ಲಿ ನೇಕಾರರನ್ನೇ ಸದಸ್ಯರನ್ನಾಗಿ ನೇಮಕ ಮಾಡಬೇಕು.ರಾಜ್ಯ ಸರ್ಕಾರದಲ್ಲಿ ಈಗಿರುವ 425.31 ಕೋಟಿ ರೂ.ಪ್ರಸ್ತಾವನೆ ಜಾರಿಗೆ ಮಾಡಬೇಕು. ಆತ್ಮಹತ್ಯೆಗೆ ಶರಣಾದ ನೇಕಾರರ ಕುಟುಂಬಕ್ಕೆ ತಲಾ 10 ಲಕ್ಷ ರೂ. ಪರಿಹಾರ ನೀಡಬೇಕೆಂದು ಮನವಿ ಮೂಲಕ ಒತ್ತಾಯಿಸಲಾಯಿತು. ಗ್ರಾಮ ಪಂಚಾಯಿತಿ ಅಧ್ಯಕ್ಷ ಉತ್ತಮ ಬನ್ನೆ ಹಾಗೂ ಗ್ರಾಮ ಲೆಕ್ಕಾಧಿಕಾರಿ ಮೋಬಿನ್ ಸನದಿ ಅವರಿಗೆ ಮನವಿ ಸಲ್ಲಿಸಲಾಯಿತು. ಅರ್ಜುನ ಕುಂಬಾರ, ಶಾಹೀರ್ ಕುಂಬಾರ, ಅವಧೂತ ಕುಂಬಾರ, ಸುನೀಲ ಕುಂಬಾರ, ಶ್ರೀಕಾಂತ ಕುಂಬಾರ, ಅಶೋಕ ಕುಂಬಾರ, ಸತೀಶ ಕುಂಬಾರ, ಸಚಿನ ಕುಂಬಾರ, ಬಾಳಾಸೋ ಧನಗರ, ಶ್ರೀರಂಗ ಸಾಳುಂಖೆ ಇತರರು ಇದ್ದರು.