ವಿಜಯಪುರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲಾಧಿಕಾರಿ ಟಿ.ಭೂಬಾಲನ್ ಅಧ್ಯಕ್ಷತೆಯಲ್ಲಿ ಜಿಲ್ಲಾ ಬಾಲ ಕಾರ್ಮಿಕ ಯೋಜನಾ ಸಂಘದ ಜಿಲ್ಲಾ ಮಟ್ಟದ ಕಾರ್ಯಕಾರಿ ಸಮಿತಿ ಸಭೆ ನಡೆಯಿತು. ಜಿಪಂ ಸಿಇಒ ರಾಹುಲ್ ಶಿಂಧೆ, ಕಾರ್ಮಿಕ ಅಧಿಕಾರಿ ಎಸ್.ಜಿ.ಖೈನೂರ, ಅಪರ ಜಿಲ್ಲಾಧಿಕಾರಿ ಮಹಾದೇವ ಮುರಗಿ ಮತ್ತಿತರರಿದ್ದಾರೆ.  
ಜಿಲ್ಲೆ

ಬಾಲ ಕಾರ್ಮಿಕ ಪ್ರಕರಣ ಗಂಭೀರವಾಗಿ ಪರಿಗಣಿಸಿ; ಡಿಸಿ ಟಿ.ಭೂಬಾಲನ್ ಸೂಚನೆ

ವಿಜಯಪುರ: ಜಿಲ್ಲೆಯಲ್ಲಿ ಬಾಲ ಕಾರ್ಮಿಕರ ಪತ್ತೆಗಾಗಿ ವಿಚಕ್ಷಣ ದಳಗಳನ್ನು ರಚಿಸಿಕೊಂಡು ಇನ್ನಷ್ಟು ಕ್ರಿಯಾಶೀಲವಾಗಿ ಎಲ್ಲ ಇಲಾಖಾ ಅಧಿಕಾರಿಗಳು ಸಮನ್ವಯತೆಯಿಂದ ಕಾರ್ಯ ನಿರ್ವಹಿಸಿ, ಜಿಲ್ಲೆಯಲ್ಲಿ ಬಾಲ ಕಾರ್ಮಿಕ ಪ್ರಕರಣಗಳು ಘಟಿಸದಂತೆ ನಿಗಾ ವಹಿಸಬೇಕು. ಬಾಲಕಾರ್ಮಿಕರು ಕಂಡು ಬಂದಲ್ಲಿ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಎಂದು ಜಿಲ್ಲಾ ಬಾಲ ಕಾರ್ಮಿಕ ಯೋಜನಾ ಸಂಘದ ಅಧ್ಯಕ್ಷರೂ ಆಗಿರುವ ಜಿಲ್ಲಾಧಿಕಾರಿ ಟಿ.ಭೂಬಾಲನ್ ಹೇಳಿದರು.

ಬುಧವಾರ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜರುಗಿದ ವಿಜಯಪುರ ಜಿಲ್ಲಾ ಬಾಲ ಕಾರ್ಮಿಕ ಯೋಜನಾ ಸಂಘದ ಜಿಲ್ಲಾ ಮಟ್ಟದ ಕಾರ್ಯಕಾರಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಕಳೆದ ಐದು ವರ್ಷಗಳ ಅವಧಿಯಲ್ಲಿ ಜಿಲ್ಲೆಯಲ್ಲಿ ಈಗಾಗಲೇ ಪತ್ತೆ ಆಗಿರುವ ಬಾಲ ಕಾರ್ಮಿಕ ಪ್ರಕರಣ ಮಾಹಿತಿ, ವ್ಯಾಸಂಗ ಮಾಡುತ್ತಿರುವ ಶಾಲಾ ವಿವರ ಕುರಿತ ವಿಸ್ತೃತ ವರದಿಯನ್ನು ಎಲ್ಲಾ ತಾಲೂಕಿನಿಂದ ಕ್ರೋಢಿಕರಿಸಿ ಶೀಘ್ರ ಸಲ್ಲಿಸಬೇಕು. ಶಾಲೆಯಿಂದ ಹೊರಗುಳಿದ ಮಕ್ಕಳ ಸಮೀಕ್ಷೆ ಮಾಡಬೇಕು. ಸಮೀಕ್ಷೆಯಲ್ಲಿ ಕಂಡು ಬಂದ ಮಕ್ಕಳ ಬಗ್ಗೆ ಪರಿಶೀಲನೆ ಮಾಡಿ, ಅವರನ್ನು ಶಾಲೆಗೆ ಕಳುಹಿಸುವಂತೆ ಪಾಲಕರಿಗೆ ತಿಳಿವಳಿಕೆ ನೀಡಬೇಕು ಎಂದು ಸಂಬಂಧಿಸಿದ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.

ಬಾಲಕಾರ್ಮಿಕರ ಸ್ಥಿತಿಗತಿ ಪರಿಶೀಲಿಸಿ

ಬಾಲ ಕಾರ್ಮಿಕರ ವಿವರ ಹಿಂದಿನ ಹಾಗೂ ಇಂದಿನ ಸ್ಥಿತಿ-ಗತಿ ದತ್ತಾಂಶಗಳಲ್ಲಿ ನಮೂದಿಸಬೇಕು. ಪಾಲಕರ ರಕ್ಷಣೆಯಲ್ಲಿದ್ದರೆ ಆ ಮಗು ಮತ್ತೆ ಬಾಲ ಕಾರ್ಮಿಕರಾಗದೇ ಇರುವ ಬಗ್ಗೆ ಖಚಿತಪಡಿಸಿ, ನಿಖರ ಮಾಹಿತಿ ಒದಗಿಸಬೇಕು. ಉತ್ತಮ ಶಿಕ್ಷಣ ಪಡೆದುಕೊಳ್ಳುವುದನ್ನು ಖಚಿತಪಡಿಸಿಕೊಳ್ಳಬೇಕು. ಅಂಥ ಮಗು ಶಾಲೆಯಿಂದ ಹೊರಗುಳಿಯದಂತೆ ಎಲ್ಲ ಮುಖ್ಯೋಪಾಧ್ಯಾಯರಿಗೆ ಮನವರಿಕೆ ಮಾಡಿಕೊಡಬೇಕು. ಮಗು ಶಾಲೆಯಿಂದ ಹೊರಗುಳಿದ ಮಾಹಿತಿ ಜಿಪಂ ಸಿಇಒ ಅವರಿಗೆ ನೀಡಬೇಕು ಎಂದರು.

ಅನ್ಯ ರಾಜ್ಯ ಹಾಗೂ ಬೇರೆ ಜಿಲ್ಲೆಯಲ್ಲಿ ರಕ್ಷಿಸಲ್ಪಟ್ಟ ಜಿಲ್ಲಾ ವ್ಯಾಪ್ತಿಯ ಬಾಲ ಕಾರ್ಮಿಕರಿಗೆ ಪುನರ್ ವಸತಿ ಒದಗಿಸಲು ಅಲ್ಲಿನ ಆಡಳಿತದೊಂದಿಗೆ ಸಂಪರ್ಕ ಸಾಧಿಸಿ, ಬಾಲ ಕಾರ್ಮಿಕರಿಗೆ ಸೂಕ್ತ ರಕ್ಷಣೆ ಒದಗಿಸಬೇಕು. ಪೊಲೀಸ್ ಇಲಾಖೆಯ ನೆರವು ಪಡೆದುಕೊಂಡು ಹೊಟೇಲ್, ಇಟ್ಟಂಗಿ ಭಟ್ಟಿ ಸೇರಿದಂತೆ ಬಾಲ ಕಾರ್ಮಿಕರಿರುವ ಮಾಹಿತಿ ಪಡೆದು ನಿರಂತರವಾಗಿ ಪರಿಶೀಲನೆ ಮಾಡಿ ಬಾಲಕಾರ್ಮಿಕರ ಪತ್ತೆ ಮಾಡಬೇಕು. ಬಾಲಕಾರ್ಮಿಕರನ್ನು ನೇಮಿಸಿಕೊಂಡ ಮಾಲೀಕರಿಗೆ ಎಚ್ಚರಿಕೆ ನೀಡಬೇಕು. ನಿಯಮ ಉಲ್ಲಂಘನೆ ಕಂಡು ಬಂದಲ್ಲಿ ತಕ್ಷಣ ಪೊಲೀಸ್ ಠಾಣೆಯಲ್ಲಿ ಅವರ ವಿರುದ್ಧ ಪ್ರಕರಣ ದಾಖಲಿಸಲು ಕ್ರಮ ವಹಿಸುವಂತೆ ಅವರು ಸೂಚಿಸಿದರು.

ದಾಳಿ ನಡೆಸಿ ವರದಿ ನೀಡಿ

ರಾಷ್ಟ್ರೀಯ ಬಾಲ ಕಾರ್ಮಿಕ ಸಂಘದ ಕಾರ್ಯ ಚಟುವಟಿಕೆಗಳ ಕುರಿತು ವರದಿ ಸಲ್ಲಿಸುವಂತೆ ಕಾರ್ಮಿಕ ಇಲಾಖಾಧಿಕಾರಿಗಳಿಗೆ ತಿಳಿಸಿದ ಜಿಲ್ಲಾಧಿಕಾರಿಗಳು, ಜಿಲ್ಲೆಯಲ್ಲಿರುವ ಬಾಲಕಾರ್ಮಿಕರ ರಕ್ಷಣೆಗೆ ನಿಯಮಿತವಾಗಿ ಸಂಬಂಧಿಸಿದ ಇಲಾಖೆಗಳ ತಂಡಗಳನ್ನು ರಚಿಸಿಕೊಂಡು ಪ್ರತಿ ತಿಂಗಳು ತಾಲೂಕಾ ಮಟ್ಟದಲ್ಲಿ ತಹಸೀಲ್ದಾರ್ ನೇತೃತ್ವದಲ್ಲಿ ನಿಯಮಾನುಸಾರ ನೇಮಕಗೊಂಡ ಎಲ್ಲಾ ಇಲಾಖೆಯ ಅಧಿಕಾರಿಗಳು ಅನಿರೀಕ್ಷಿತ ದಾಳಿ ಮಾಡಿ ರಕ್ಷಣೆ ಮಾಡಬೇಕು. ಪ್ರತಿ ತಿಂಗಳು ನಡೆಯುವ ದಾಳಿಯಲ್ಲಿ ತಾಲೂಕು ಅಧಿಕಾರಿಗಳು ದಾಳಿ ನಡೆಸಿ ವರದಿ ನೀಡಬೇಕು ಎಂದು ಹೇಳಿದರು.

ಕಿಟ್ ವಿತರಣೆ

ಜಾ/ಪಪಂ ಬಾಲ ಕಾರ್ಮಿಕರು ರಕ್ಷಣೆಯಾದಲ್ಲಿ ಎಸ್‌ಸಿಪಿ-ಟಿಎಸ್‌ಪಿ ಅನುದಾನದಡಿ ಶೇ.50ರಷ್ಟು ಅನುದಾನ ಬಳಸಿಕೊಂಡು, ಆಹಾರ ಧಾನ್ಯ ಹಾಗೂ ಲೇಖನ ಸಾಮಗ್ರಿಯುಳ್ಳ ಕಿಟ್ ವಿತರಣೆ ಹಾಗೂ ಅರಿವು ಕಾರ್ಯಕ್ರಮಕ್ಕಾಗಿ ಅನುದಾನ ಬಳಸಿಕೊಳ್ಳಬೇಕು. ರಕ್ಷಣೆ ಮಾಡಿದ ಬಾಲ ಕಾರ್ಮಿಕರ ಪುನರ್ ವಸತಿಗಾಗಿ 20,000 ರೂ. ಮಾಲೀಕರಿಂದ ವಸೂಲಿ ಮಾಡಿ, ಸರ್ಕಾರದಿಂದ 15 ಸಾವಿರ ರೂ.ಸೇರಿದಂತೆ 35 ಸಾವಿರ ಸ್ಥಿರ ಠೇವಣಿ ಇರಿಸಿ, 18 ವರ್ಷದ ನಂತರ ಹಣ ಹಿಂದಿರುಗಿಸಲು ಕ್ರಮ ವಹಿಸಬೇಕು ಎಂದು ಹೇಳಿದರು.

ಜಿಪಂ ಸಿಇಒ ರಾಹುಲ್ ಶಿಂಧೆ ಅವರು ಮಾತನಾಡಿ, ಮಕ್ಕಳಿಗೆ ಹಾಗೂ ಪೋಷಕರಿಗೆ ಶಿಕ್ಷಣದ ಮಹತ್ವದ ಬಗ್ಗೆ ಜಾಗೃತಿ ಮೂಡಿಸಬೇಕು. ಗ್ರಾಮೀಣ ಮಕ್ಕಳಲ್ಲಿ ಅವರ ಹಕ್ಕು, ಬೇಡಿಕೆಗಳ ಬಗ್ಗೆ ಅರಿವು ಮೂಡಿಸಬೇಕು ಎಂದರು.

ಕಾರ್ಮಿಕ ಅಧಿಕಾರಿ ಎಸ್.ಜಿ.ಖೈನೂರ ಅವರು ಮಾತನಾಡಿ, ಕಾರ್ಮಿಕ ಇಲಾಖೆಯಿಂದ 1986ರ ಬಾಲಕಾರ್ಮಿಕ ಕಾಯ್ದೆ ಮತ್ತು 1961ರ ಕರ್ನಾಟಕ ಅಂಗಡಿ ಮತ್ತು ವಾಣಿಜ್ಯ ಸಂಸ್ಥೆಗಳ ಕಾಯ್ದೆಯನ್ವಯ 2023ರ ಜ. 1 ರಿಂದ ಜು. 31ರವರೆಗೆ ಜಿಲ್ಲೆಯಲ್ಲಿ 305 ಕಡೆಗಳಲ್ಲಿ ತಪಾಸಣೆ ನಡೆಸಲಾಗಿದ್ದು, 3 ಬಾಲಕಾರ್ಮಿಕರನ್ನು ಪತ್ತೆ ಹಚ್ಚಲಾಗಿದೆ. ಬಾಲಕಾರ್ಮಿಕ ಸಮಸ್ಯೆ ಬಗ್ಗೆ ಅರಿವು ಮೂಡಿಸಲು ಬಾಲಕಾರ್ಮಿಕ ವಿರೋಧಿ ಆಚರಣೆ, ಅಭಿಯಾನ, ಆಟೋ ಪ್ರಚಾರ, ತಪಾಸಣೆ ಸೇರಿದಂತೆ ವಿವಿಧ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಸಭೆಗೆ ಮಾಹಿತಿ ನೀಡಿದರು.

ಎಎಸ್‌ಪಿ ಶಂಕರ ಮಾರಿಹಾಳ, ಅಪರ ಜಿಲ್ಲಾಧಿಕಾರಿ ಮಹಾದೇವ ಮುರಗಿ, ಇಂಡಿ ಉಪವಿಭಾಗಾಧಿಕಾರಿ ಅಬೀದ್ ಗದ್ಯಾಳ, ಜಿಪಂ ಯೋಜನಾ ನಿರ್ದೇಶಕ ಸಿ.ಬಿ. ದೇವರಮನಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕ ಕೆ.ಕೆ. ಚವ್ಹಾಣ, ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆಯ ಉಪ ನಿರ್ದೇಶಕ ಎನ್.ಎಚ್. ನಾಗೂರ, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಜಿ.ಎಂ. ಕೋಲೂರ ಮತ್ತಿತರರಿದ್ದರು.