ಬಡಗಲಪುರ ನಾಗೇಂದ್ರ  
ಜಿಲ್ಲೆ

ಕೃಷಿ ಬೆಲೆ ಆಯೋಗಕ್ಕೆ ಪರಿಣತರನ್ನು ಪರಿಗಣಿಸಿ: ರಾಜ್ಯ ಸರ್ಕಾರಕ್ಕೆ ರಾಜ್ಯ ರೈತ ಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ್ರ ಆಗ್ರಹ

ಮೈಸೂರು: ಕೃಷಿ ಬೆಲೆ ಆಯೋಗದ ಅಧ್ಯಕ್ಷರ ನೇಮಕ ಸಂದರ್ಭ ಪರಿಣತರನ್ನು ಪರಿಗಣಿಸಬೇಕು ಎಂದು ರಾಜ್ಯ ರೈತ ಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ್ರ ರಾಜ್ಯ ಸರ್ಕಾರವನ್ನು ಆಗ್ರಹಿಸಿದರು.
ರಾಜಕೀಯ ಒತ್ತಡಗಳಿಗಾಗಿ ಆಯೋಗಕ್ಕೆ ಶಾಸಕರು ಅಥವಾ ರಾಜಕೀಯ ಹಿನ್ನೆಲೆ ಹೊಂದಿರುವವರನ್ನು ನೇಮಕ ಮಾಡಿಕೊಂಡರೆ ಏನೂ ಪ್ರಯೋಜನವಾಗುವುದಿಲ್ಲ. ಈ ಸಂಬಂಧ ಈಗಾಗಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆಯಲಾಗಿದೆ. ಕೃಷಿ ವಿಶ್ವ ವಿದ್ಯಾಲಯಗಳಲ್ಲಿ ಕೆಲಸ ಮಾಡುತ್ತಿರುವ ಪರಿಣತರನ್ನು ನೇಮಕ ಸಂದರ್ಭ ಪರಿಗಣಿಸುವಂತೆ ಕೋರಲಾಗಿದೆ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ರಾಜ್ಯದ ಶೇ.90ರಷ್ಟು ಭಾಗ ಬರಪೀಡಿತವಾಗಿದೆ. ರೈತರು ಬೆಲೆ ಮೋಸದಿಂದ ಅತಂತ್ರ ಸ್ಥಿತಿಯಲ್ಲಿದ್ದು, ಆತ್ಮಹತ್ಯೆಯ ದಾರಿ ಹಿಡಿದಿದ್ದಾರೆ. ಹೀಗಾಗಿ, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ರೈತರ ಬೆಳೆ ಸಾಲ ಮನ್ನಾ ಮಾಡಬೇಕು. 60 ವರ್ಷ ತುಂಬಿದ ರೈತರಿಗೆ ಪಿಂಚಣಿ ಇನ್ನಿತರ ಸೂಕ್ತ ಸೌಲಭ್ಯಗಳನ್ನು ಕಲ್ಪಿಸಬೇಕು. ರೈತರಿಗೆ ಆರ್ಥಿಕ ಸ್ಥಿರತೆ, ರೈತ ಕುಟುಂಬದ ಮಕ್ಕಳ ವಿದ್ಯಾಭ್ಯಾಸ, ಆರೋಗ್ಯ ಕುರಿತು ಯೋಜನೆ ರೂಪಿಸುವುದಲ್ಲದೆ, ಕಬ್ಬು ಬೆಳೆಗಾರರಿಗೆ ಹಿಂದಿನ ಸರ್ಕಾರ ಘೋಷಣೆ ಮಾಡಿರುವ ಹೆಚ್ಚುವರಿ 150 ರೂ. ನೀಡಬೇಕು ಎಂದು ಒತ್ತಾಯಿಸಿದರು.
ರೈತರ ಸಮಸ್ಯೆ ಬಗ್ಗೆ ಸರ್ಕಾರದ ಗಮನ ಸೆಳೆಯುವ ಹಿನ್ನೆಲೆಯಲ್ಲಿ ಈ ತಿಂಗಳ ಕೊನೆಯ ವಾರ ಅಥವಾ ಜನವರಿ ಮೊದಲನೇ ವಾರದಲ್ಲಿ ಪಿರಿಯಾಪಟ್ಟಣದಲ್ಲಿ ಸಾಲಗಾರ ರೈತರ ಸಮಾವೇಶ ಆಯೋಜಿಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ರಾಜ್ಯದ ಇತರೆಡೆಯೂ ಸಮಾವೇಶ ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದರು.
ಸಂಘದ ಕಾರ್ಯದರ್ಶಿ ಪಿ.ಗೋಪಾಲ್ ಮಾತನಾಡಿ, ರಾಜ್ಯ ಸರ್ಕಾರದ ಸಮೀಕ್ಷೆಯಂತೆಯೇ ರಾಜ್ಯದ ಶೇ.90 ಭಾಗ ಬರಪೀಡಿತವಾಗಿದ್ದು, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕೂಡಲೇ ರೈತರ ಬೆಳೆಸಾಲವನ್ನು ಸಂಪೂರ್ಣವಾಗಿ ಮನ್ನಾ ಮಾಡಬೇಕು ಎಂದು ಆಗ್ರಹಿಸಿದರು.
ಪದಾಧಿಕಾರಿಗಳಾದ ಹೊಸಕೋಟೆ ಬಸವರಾಜು, ಹೊಸೂರು ಕುಮಾರ್, ಪ್ರಸನ್ನ ಎನ್.ಗೌಡ, ಚಂದ್ರಶೇಖರ್, ವಿಜೇಂದ್ರ, ಪಿ. ಮರಂಕಯ್ಯ, ಮಂಡಕಳ್ಳಿ ಮಹೇಶ್ ಇತರರು ಇದ್ದರು.

ನೆನಪಿನ ಕಾರ್ಯಕ್ರಮ:
ಡಿ. 21ರಂದು ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ರಾಜ್ಯ ರೈತ ಸಂಘದಿಂದ ಎನ್.ಡಿ.ಸುಂದರೇಶ್ ನೆನಪಿನ ಕಾರ್ಯಕ್ರಮ, ಡಿ.23ರಂದು ರಾಯಚೂರಿನಲ್ಲಿ ಕೆ.ಎಸ್.ಪುಟ್ಟಣ್ಣಯ್ಯ ಹಾಗೂ ಚೌದರಿ ಚರಣ್‌ಸಿಂಗ್ ಜನ್ಮದಿನದ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ ಎಂದು ಬಡಗಲಪುರ ನಾಗೇಂದ್ರ ತಿಳಿಸಿದರು.

ಸಾಲ ಮುಕ್ತಾಯಗೊಳಿಸಿ
ಪಿರಿಯಾಪಟ್ಟಣ ಹಾಗೂ ಎಚ್.ಡಿ.ಕೋಟೆ ತಾಲೂಕಿನಲ್ಲಿ ಕೆಲ ಬ್ಯಾಂಕ್‌ಗಳು ಸುಮಾರು 600 ರೈತರಿಗೆ ಸಾಲ ನೀಡಿವೆ. ಆದರೆ ಸಾಲ ಮಂಜೂರು ಮಾಡಿದಷ್ಟು ಹಣ ನೀಡದೆ, ಅಧಿಕಾರಿಗಳು ಹಾಗೂ ಮಧ್ಯವರ್ತಿಗಳು ಅರ್ಧದಷ್ಟು ಹಣ ಲೂಟಿ ಮಾಡಿದ್ದಾರೆ. ಆದ್ದರಿಂದ ಬ್ಯಾಂಕ್‌ನ ತಪ್ಪಿತಸ್ಥ ಅಧಿಕಾರಿಗಳು ಹಾಗೂ ಮಧ್ಯವರ್ತಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು. ರೈತರಿಗೆ ನೀಡಿದಷ್ಟೇ ಹಣ ಕಟ್ಟಿಸಿಕೊಂಡು ಸಾಲ ಮುಕ್ತಾಯಗೊಳಿಸಬೇಕು. ಇಲ್ಲದಿದ್ದರೆ ರೈತ ಸಂಘ ಹೋರಾಟ ನಡೆಸಲಿದೆ.
ಬಡಗಲಪುರ ನಾಗೇಂದ್ರ, ರಾಜ್ಯ ರೈತ ಸಂಘದ ಅಧ್ಯಕ್ಷ