ಜಿಲ್ಲೆ

ಸಸ್ಯ ಸಂಪತ್ತು ಸಂರಕ್ಷಣೆ ಪ್ರತಿಯೊಬ್ಬರ ಜವಾಬ್ದಾರಿ

ಉತ್ತರ ಕನ್ನಡ ಡೆಸ್ಕ್

ಶಿರಸಿ: ಪಶ್ಚಿಮ ಘಟ್ಟವು ಸಸ್ಯ ಹಾಗೂ ಜೀವ ವೈವಿಧ್ಯ ತುಂಬಿದ ಪ್ರದೇಶವಾಗಿದೆ. ಈ ಅತ್ಯಮೂಲ್ಯವಾದ ಸಸ್ಯ ಸಂಪತ್ತು ಸಂರಕ್ಷಣೆಯ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಅರಣ್ಯ ಇಲಾಖೆ ಕಾನೂನು ರೂಪಿಸಿ ತನ್ಮೂಲಕ ಅರಣ್ಯ ರಕ್ಷಣೆಯ ಕಾರ್ಯ ನಿರ್ವಹಿಸುತ್ತದೆ. ಅರಣ್ಯ ರಕ್ಷಣೆ ಕೇವಲ ಇಲಾಖೆಯ ಜವಾಬ್ದಾರಿಯಲ್ಲ, ಜನರ ಸಹಭಾಗಿತ್ವವೂ ಅಷ್ಟೇ ಅಗತ್ಯವಾಗಿದೆ ಎಂದು ಕೆನರಾ ವೃತ್ತದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ವಸಂತ ರೆಡ್ಡಿ ಹೇಳಿದರು.

ಯೂತ್ ಫಾರ್ ಸೇವಾ ಮತ್ತು ಅರಣ್ಯ ಇಲಾಖೆ ಆಶ್ರಯದಲ್ಲಿ ಎಸಳೆಯ ಶ್ರೀ ಮಾರಿಕಾಂಭಾ ವನದಲ್ಲಿ ಭೂಗರ್ಭ ಶಾಸ್ತ್ರಜ್ಞ ಜಿ.ವಿ. ಹೆಗಡೆ ಮತ್ತು ಯೂತ್ ಫಾರ್ ಸೇವಾ ಸಲಹಾ ಸಮಿತಿ ಸದಸ್ಯೆ ಕೋಮಲಾ ಭಟ್ ದಂಪತಿ ಪ್ರಾಯೋಜಕತ್ವದಲ್ಲಿ ನಿರ್ಮಾಣಗೊಂಡ ನಕ್ಷತ್ರ ವನಕ್ಕೆ ಬುಧವಾರ ಚಾಲನೆ ನೀಡಿ ಅವರು ಮತನಾಡಿದರು.

ಜಾಗತಿಕ ತಾಪಮಾನ, ಪ್ರಕೃತಿ ವಿಕೋಪದ ವಿನಾಶ ತಡೆಯಲು ಸಮೃದ್ಧ ಅರಣ್ಯವೊಂದೇ ಪರಿಹಾರ. ಅರಣ್ಯ ನಾಶ ಮಾಡದೆ ಎಚ್ಚೆತ್ತುಕೊಳ್ಳದಿದ್ದರೆ ಮನುಕುಲ ಮುಂದಿನ ದಿನಗಳಲ್ಲಿ ಭಾರಿ ಅನಾಹುತ ಎದುರಿಸಬೇಕಾಗುತ್ತದೆ. ಈ ದಿಸೆಯಲ್ಲಿ ನಕ್ಷತ್ರ ವನ ನಿರ್ಮಾಣ ಮಾಡಿ ಅನೇಕ ಔಷಧ ಸಸ್ಯಗಳನ್ನು ಸಂರಕ್ಷಣೆ ಮಾಡುತ್ತಿರುವ ಜಿ.ವಿ. ಹೆಗಡೆ ಮತ್ತು ಕೋಮಲಾ ಭಟ್ ದಂಪತಿ ಕಾರ್ಯ ಶ್ಲಾಘನಿಯ ಎಂದರು.

ಕೋಮಲಾ ಭಟ್ ಅವರು ವನ ನಿರ್ಮಾಣ ಮಾಡುತ್ತಿರುವ ಉದ್ದೇಶ ತಿಳಿಸಿದರು. ಉಪ ಅರಣ್ಯ ಸಂರಕ್ಷಣಾಧಿಕಾರಿ ಡಾ. ಅಜ್ಜಯ್ಯ, ವಲಯ ಅರಣ್ಯಧಿಕಾರಿ ಶಿವಾನಂದ ನಿಂಗಾಣಿ, ಭೂಗರ್ಭ ಶಾಸ್ತ್ರಜ್ಞ ಜಿ.ವಿ. ಹೆಗಡೆ, ನಿಲೇಕಣಿ ಕಾಲೇಜ್ ಉಪನ್ಯಾಸಕ ಕಾರ್ತಿಕ ಹೆಗಡೆ, ಪ್ಯಾರಾ ಮೆಡಿಕಲ್ ಕಾಲೇಜ್ ಉಪನ್ಯಾಸಕ ಆಕರ್ಷನ್, ನಾಗರತ್ನ, ಸನ್ನಿಧಿ, ಪವಿತ್ರ ಮೂಡಶಾಲಿ, ಅರಣ್ಯ ಇಲಾಖೆ ಸಿಬ್ಬಂದಿ ಉಪಸ್ಥಿತರಿದ್ದರು. ಯೂತ್ ಫಾರ್ ಸೇವಾ ಪರಿಸರ ಸಂಯೋಜಕ ಉಮಾಪತಿ ಭಟ್ ಸ್ವಾಗತಿಸಿದರು. ಶಿರಸಿ ಜಿಲ್ಲಾ ಸಂಯೋಜಕ ವಿಜೇತ ನಾಯ್ಕ ವಂದಿಸಿದರು.