ಉಳ್ಳಾಲ: ಪ್ರತಿದಿನ ಸಾವಿರಾರು ಜನ ನಡೆದಾಡುವ ರೈಲು ಹಳಿಗೆ ಗೇಟ್ ಹಾಕಿ ನಾಲ್ಕು ವರ್ಷಗಳಾಗುತ್ತಿವೆ. ಹಳಿ ದಾಟಲು ಸರ್ಕಸ್ ನಡೆಸುತ್ತಿರುವ ಸಾರ್ವಜನಿಕರು ಹಿಡಿಶಾಪ ಹಾಕುತ್ತಿದ್ದರೆ, ಕೊನೆಗೂ ಸಾರ್ವಜನಿಕರ ಹೋರಾಟಕ್ಕೆ ಮಣಿದ ರೈಲ್ವೆ ಇಲಾಖೆ ಕ್ರಾಸಿಂಗ್ ವ್ಯವಸ್ಥೆ ಕಲ್ಪಿಸಲು ಮನಸ್ಸು ಮಾಡಿ ಖರ್ಚಿನಲ್ಲಿ ನಗರಸಭೆಯ ಪಾಲಿನ ಬೇಡಿಕೆ ಸಲ್ಲಿಸಿದೆ. ಆದರೆ ಈ ಬಗ್ಗೆ ತೀರ್ಮಾನ ಕೈಗೊಳ್ಳಲು ನಗರಸಭೆ ಮೀನಾಮೇಷ ಎಣಿಸುತ್ತಿದೆ. ಪ್ರತಿದಿನ ತೊಕ್ಕೊಟ್ಟು ಜಂಕ್ಷನ್‌ನಷ್ಟೇ ಸಾರ್ವಜನಿಕರು ಒಳಪೇಟೆಯಲ್ಲೂ ಇರುತ್ತಾರೆ. ಒಳಪೇಟೆಯಾಗಿ ಖಾಸಗಿ, ಅನುದಾನಿತ ಶಾಲೆ, ಕಾಲೇಜು, ಮಂದಿರ, ಚರ್ಚ್, ಮಸೀದಿಗಳಿವೆ. ಉಳ್ಳಾಲ ದರ್ಗಾ, ಭಗವತೀ ದೇವಸ್ಥಾನಕ್ಕೆ ಕಾಲ್ನಡಿಗೆಯಲ್ಲೂ, ಆಟೋ ಮೂಲಕವೂ ಸಾಗುತ್ತಾರೆ. ಅಲ್ಲದೆ ಇಲ್ಲೇ ಅಂಬೇಡ್ಕರ್ ರಂಗಮಂದಿರ, ಮಾರುಕಟ್ಟೆ, ವ್ಯಾಪಾರಿ ಮಳಿಗೆ, ವಸತಿ ನಿಲಯಗಳೂ ಇವೆ. ತೊಕ್ಕೊಟ್ಟಿನಿಂದ ರೈಲ್ವೆ ಹಳಿಯವರೆಗೆ ಸಾಗುವ ಕಾಲು ದಾರಿಯುದ್ದಕ್ಕೂ ಪೆಟ್ಟಿಗೆ ಅಂಗಡಿಗಳ ಸಾಲಿದ್ದು ಜನ ಹೆಚ್ಚಿನ ಸಂಖ್ಯೆಯಲ್ಲಿರುತ್ತಾರೆ. ಪ್ರತಿದಿನ ವಿದ್ಯಾರ್ಥಿಗಳು, ಸಾರ್ವಜನಿಕರು ರೈಲು ಹಳಿ ದಾಟಿಯೇ ಇಲ್ಲಿಂದ ಹೋಗಬೇಕು. ಹಿಂದೆ ಒಂದು ಹಳಿ ಇದ್ದಾಗಲೇ ಸಾಕಷ್ಟು ಜೀವ ಬಲಿಯಾಗಿತ್ತು. ಎರಡು ಹಳಿ ಆದ ಬಳಿಕವಂತೂ ಜೀವಬಲಿ ಪ್ರಮಾಣ ಹೆಚ್ಚಾಗಿದೆ. ಯಾವ ಹಳಿಯಿಂದ ರೈಲು ಬರುತ್ತಿದೆ ಎನ್ನುವ ಗೊಂದಲ ಜೀವಹರಣಕ್ಕೆ ಕಾರಣವಾಗುತ್ತಿದೆ. ನಗರಸಭೆಯಿಂದ ಪರ್ಯಾಯ ವ್ಯವಸ್ಥೆ ಅಸಾಧ್ಯ ಎನಿಸಿದ್ದರಿಂದ ಮೂರುವರೆ ವರ್ಷ ಕಾದ ರೈಲ್ವೆ ಇಲಾಖಾಧಿಕಾರಿಗಳು ಕಳೆದ ವರ್ಷ ಫೆಬ್ರವರಿಯಲ್ಲಿ ಪೂರ್ಣ ಪ್ರಮಾಣ ಗೇಟ್ ಅಳವಡಿಸಿತು. ಇದಾದ ಬಳಿಕ ಯುವಕರು ಗೇಟ್ ಮೇಲಿಂದ ಹಾರಿ ಹಳಿ ದಾಟಿದರೆ, ಮಕ್ಕಳು ಮತ್ತು ಮಹಿಳೆಯರು ಅಡಿಭಾಗದಿಂದ, ಗೇಟ್ ಪಕ್ಕ ಇರುವ ಸಣ್ಣ ಜಾಗದಿಂದ ನುಸುಳಿ ಹೋಗುವ ಪರಿಸ್ಥಿತಿ ಸೃಷ್ಟಿಯಾಗಿತ್ತು. ಆದರೆ ವಯಸ್ಕರ ಸಂಕಷ್ಟ ಕೇಳುವವರೇ ಇರಲಿಲ್ಲ. ನಗರಸಭೆ ಸ್ಥಳೀಯ ಸದಸ್ಯ ಅಯೂಬ್ ಮಂಚಿಲ ಅವರ ಮನವಿ ಮೇರೆಗೆ ಸ್ಪೀಕರ್ ಯು.ಟಿ.ಖಾದರ್ ಸೂಚನೆ ಮೇರೆಗೆ ರೈಲ್ವೆ ಇಲಾಖೆ ಕ್ರಾಸಿಂಗ್ ವ್ಯವಸ್ಥೆಗೆ ಒಪ್ಪಿ ಕಳೆದ ವರ್ಷ ನವೆಂಬರ್‌ನಲ್ಲಿ ಸ್ಥಳಕ್ಕೆ ಅಧಿಕಾರಿಗಳನ್ನು ಕಳುಹಿಸಿದೆ. ಮೇಲ್ಸೇತುವೆ ಬದಲು ಕೆಳ ಸೇತುವೆಗೆ ಖರ್ಚು ಕಡಿಮೆಯಾಗುವುದರಿಂದ ರೂಪುರೇಶೆ ಸಿದ್ಧಪಡಿಸಿದ ಅಧಿಕಾರಿಗಳು ಖರ್ಚು ಹೊಂದಿಸಲು 60-40 ಪ್ರಸ್ತಾಪ ಮುಂದಿಟ್ಟು ಪತ್ರ ನೀಡಿದೆ. ಈ ಪತ್ರವನ್ನು ಅಯೂಬ್ ನಗರಸಭೆ ಅಧಿಕಾರಿಗಳ ಮುಂದಿಟ್ಟಿದ್ದಾರೆ. ಅನುಮೋದನೆ ಸಿಗದ ಕಾರಣ ಕೆಲಸ ಆರಂಭ ವಿಳಂಬವಾಗಿದೆ. ಪಾಳುಬಿದ್ದ ಕೆಳಸೇತುವೆ ಕೆಳ ಸೇತುವೆ ಇದೆ, ಆದರೆ ತೊಕ್ಕೊಟ್ಟು ಜಂಕ್ಷನ್‌ನಲ್ಲಿ ಪೆಟ್ರೋಲ್ ಪಂಪ್ ಇದ್ದ ಸಂದರ್ಭ ಅದರ ಹಿಂದಿನ ಭಾಗದಿಂದ ಒಳಪೇಟೆಗೆ ಸಾರ್ವಜನಿಕರು ಸಂಪರ್ಕಿಸುವ ನಿಟ್ಟಿನಲ್ಲಿ ರೈಲು ಹಳಿ ಅಡಿಭಾಗದಿಂದ ಹೋಗಲು ಕಿರು ಸೇತುವೆ ನಿರ್ಮಿಸಲಾಗಿತ್ತು. ಕ್ರಮೇಣ ಪೆಟ್ರೋಲ್ ಪಂಪ್ ಹಿಂಬದಿಯಿದ್ದ ರಸ್ತೆ ಮುಚ್ಚಲ್ಪಟ್ಟಿತು. ಈಗ ರಸ್ತೆಯುದ್ದಕ್ಕೂ ಪೆಟ್ಟಿಗೆ ಅಂಗಡಿ ತಲೆ ಎತ್ತಿದ್ದರಿಂದ ಸಾರ್ವಜನಿಕರು ಇದೇ ರಸ್ತೆ ಬಳಸಲು ಆರಂಭಿಸಿದರು. ಇದರ ಪರಿಣಾಮ ಕೆಳ ಸೇತುವೆ ಪಾಳು ಬಿದ್ದು ನೀರು ಹರಿದಾಡುವ ಕಾಲುವೆಯಾಯಿತು. ಕೆಲವು ವರ್ಷಗಳ ಬಳಿಕ ಕೆಳಸೇತುವೆಯನ್ನು ರಸ್ತೆಯಾಗಿ ಬಳಸಲು ಆರಂಭಿಸಿದ್ದರಿಂದ ದ್ವಿಚಕ್ರ ಮತ್ತು ತ್ರಿಚಕ್ರ ವಾಹನಗಳ ಸಂಚಾರ ಆರಂಭವಾಯಿತು. ಪ್ರಸ್ತುತ ಕೆಳಸೇತುವೆಯಲ್ಲಿ ಕಬ್ಬಿಣದ ಆಂಗ್ ಲರ್ ಅಡ್ಡಲಾಗಿ ಇಟ್ಟು ವಾಹನ ಸಂಚಾರಕ್ಕೆ ನಿರ್ಬಂಧ ಹೇರಲಾಗಿದೆ. ಬೇಕಿದೆ ಅನುಮೋದನೆ ಸಾರ್ವಜನಿಕರಿಗೆ ಕ್ರಾಸಿಂಗ್ ವ್ಯವಸ್ಥೆ ಕಲ್ಪಿಸಲು ಲಕ್ಷಾಂತರ ರೂಪಾಯಿ ಅವಶ್ಯಕತೆ ಇದೆ. ಈ ವಿಚಾರ ರೈಲ್ವೆ ಸಲಹಾ ಸಮಿತಿ ಸಭೆಯಲ್ಲಿ ಪ್ರಸ್ತಾಪ ಆಗಿ ವಿಭಾಗ ಅಧಿಕಾರಿಗಳಿಗೆ ಪತ್ರವೂ ಹೋಗಿತ್ತು. ಸೋಮೇಶ್ವರದಲ್ಲಿ ರೈಲ್ವೆ ಮೇಲ್ಸೇತುವೆ ನಿರ್ಮಿಸುವುದಾದರೆ ಶೇ.50ರಷ್ಟು ಹಣ ರೈಲ್ವೆ ಇಲಾಖೆ, ಶೇ.50 ಸ್ಥಳೀಯಾಡಳಿತ ನೀಡಬೇಕು. ತೊಕ್ಕೊಟ್ಟಿನಲ್ಲಿ ಮೇಲ್ಸೇತುವೆ ನಿರ್ಮಿಸಲು ಬೇಕಾದ ಖರ್ಚು ನಗರಸಭೆ ಭರಿಸಬೇಕು ಎಂದು ರೈಲ್ವೆ ಇಲಾಖಾಧಿಕಾರಿಗಳ ವಾದಿಸಿದ್ದರು. ಇಲಾಖೆಯಿಂದ ಗೇಟ್! ಪ್ರತಿದಿನ ಕೇರಳ, ತಮಿಳುನಾಡಿಗೆ ಪ್ಯಾಸೆಂಜರ್, ಎಕ್ಸ್‌ಪ್ರೆಸ್, ಸೂಪರ್ ಎಕ್ಸ್‌ಪ್ರೆಸ್ ಹೀಗೆ ಹಲವು ರೈಲುಗಳು ಇಲ್ಲಿಂದ ಚಲಿಸುತ್ತವೆ. ಹಳಿ ದಾಟುವ ಸಂದರ್ಭ ಉಂಟಾದ ಜೀವಹಾನಿಯ ಹಿನ್ನೆಲೆಯಲ್ಲಿ ರೈಲ್ವೆ ಇಲಾಖೆ 2021ರ ಸೆಪ್ಟೆಂಬರ್‌ನಲ್ಲಿ ಹಳಿಗೆ ಅಡ್ಡಲಾಗಿ ಕಬ್ಬಿಣದ ಪಟ್ಟಿ ಅಳವಡಿಸಿ ರಸ್ತೆ ಬಂದ್ ಮಾಡಿದೆ. ಈ ಸಂದರ್ಭ ಸಾರ್ವಜನಿಕರಿಂದ ತೀವ್ರ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಹಳಿ ದಾಟಲು ಪರ್ಯಾಯ ವ್ಯವಸ್ಥೆ ಕಲ್ಪಿಸುವಂತೆ ನಗರಸಭೆ ಮೇಲೆ ಅಧಿಕಾರಿಗಳು ಭಾರ ಹಾಕಿದರು.
ನಗರಸಭಾ ವ್ಯಾಪ್ತಿಯಲ್ಲಿ ಪ್ರಮುಖ ವ್ಯಾಪಾರಿ ಕೇಂದ್ರ ತೊಕ್ಕೊಟ್ಟು ಒಳಪೇಟೆಯಲ್ಲಿದೆ. ಆದರೆ ರೈಲ್ವೆ ಹಳಿ ದಾಟುವ ಸಮಸ್ಯೆ ಗಂಭೀರವಾಗಿದ್ದು, ಈ ಬಗ್ಗೆ ಶಾಸಕ ಯು.ಟಿ.ಖಾದರ್ ಪ್ರಯತ್ನದ ಮೇರೆಗೆ ರೈಲ್ವೆ ಇಲಾಖೆ ಕೆಳಸೇತುವೆ ನಿರ್ಮಾಣಕ್ಕೆ ಒಪ್ಪಿದೆ. ಆದರೆ ಇಲಾಖೆ ಸಲ್ಲಿಸಿರುವ 60-40 ಪ್ರಸ್ತಾಪಕ್ಕೆ ನಗರಸಭೆಯಿಂದ ಅನುಮೋದನೆ ನೀಡಬೇಕಿದೆ. - ಯು.ಪಿ.ಅಯೂಬ್ ಮಂಚಿಲ, ಉಳ್ಳಾಲ ನಗರಸಭೆ ಸ್ಥಳೀಯ ಸದಸ್ಯ ಈ ಭಾಗದಲ್ಲಿ ಪ್ರಾಥಮಿಕ, ಪ್ರೌಢಶಾಲೆ, ಕಾಲೇಜು, ಚರ್ಚ್, ಮಂದಿರ, ಮಾರುಕಟ್ಟೆ ಇದೆ. ಉಳ್ಳಾಲ ದರ್ಗಾಕ್ಕೂ ಇಲ್ಲಿಂದ ಹೋಗುತ್ತಾರೆ. ಪ್ರತಿದಿನ ಸಾವಿರಾರು ವಿದ್ಯಾರ್ಥಿಗಳು ಹೋಗುವ ದಾರಿ. ರೈಲು ಹಳಿ ಮುಚ್ಚಿರುವುದರಿಂದ ವಿದ್ಯಾರ್ಥಿಗಳು, ಸಾರ್ವಜನಿಕರು ತೊಂದರೆ ಅನುಭವಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ರೈಲು ಹಳಿ ದಾಟಲು ಮೇಲ್ಸೇತುವೆ ಅಥವಾ ಕೆಳಸೇತುವೆ ನಿರ್ಮಾಣ ಅಗತ್ಯ. - ಅರುಣ್ ಡಿಸೋಜ, ಸಂತ ಸೆಬಾಸ್ಟಿಯನ್ ಚರ್ಚ್ ಉಪಾಧ್ಯಕ್ಷ, ತೊಕ್ಕೊಟ್ಟು