ಸುದ್ದಿಗೋಷ್ಠಿಯಲ್ಲಿ ಎಚ್.ಎಂ.ಚಂದ್ರಶೇಖರಪ್ಪ ಮಾತನಾಡಿದರು. ಕೆ.ಜಿ.ಕುಮಾರಸ್ವಾಮಿ ಉಪಸ್ಥಿತರಿದ್ದರು.  
ಜಿಲ್ಲೆ

ಕಾವೇರಿ ವಿಷಯದಲ್ಲಿ ಒಮ್ಮತ ಅಗತ್ಯ: ಎಚ್‌ಎಂಸಿ

ಅರವಿಂದ ಅಕ್ಲಾಪುರ

ಶಿವಮೊಗ್ಗ: ವಿಧಾನಸಭೆಯ ಮುಂಬರುವ ಕಲಾಪದಲ್ಲಿ ಕಾವೇರಿ ಜಲ ವಿವಾದಕ್ಕೆ ಸಂಬಂಧಿಸಿದಂತೆ ಪಕ್ಷಾತೀತವಾಗಿ ಎಲ್ಲರೂ ಒಮ್ಮತದ ನಿರ್ಣಯ ಕೈಗೊಳ್ಳಬೇಕು. ನಾಡು, ನುಡಿ, ಜಲ, ಗಡಿ ವಿಚಾರದಲ್ಲಿ ಒಂದಾಗಿ ಹೋರಾಟ ಮಾಡಬೇಕು ಎಂದು ಮಾಜಿ ಶಾಸಕರ ವೇದಿಕೆ ರಾಜ್ಯಾಧ್ಯಕ್ಷ ಎಚ್.ಎಂ.ಚಂದ್ರಶೇಖರಪ್ಪ ಅಭಿಪ್ರಾಯಪಟ್ಟರು.

ರಾಜ್ಯವನ್ನು ಪ್ರಮುಖವಾಗಿ ಕಾಡುತ್ತಿರುವುದು ಕಾವೇರಿ ನೀರಿನ ಸಮಸ್ಯೆ. ಈಗಾಗಲೇ ರಾಜ್ಯ ಸರ್ಕಾರ ತಮಿಳುನಾಡಿಗೆ ನೀರು ಹರಿಸುತ್ತಿದೆ. ಹೀಗೆಯೇ ನೀರು ಹರಿಸಿದರೆ ಕೆಲವೇ ದಿನಗಳಲ್ಲಿ ಮೈಸೂರು, ಮಂಡ್ಯ, ಬೆಂಗಳೂರಿನಲ್ಲಿ ಕುಡಿಯುವ ನೀರಿಗೂ ತತ್ವಾರ ಎದುರಾಗಲಿದೆ. ಆ ಭಾಗದ ರೈತರು ಕೃಷಿಗೆ ನೀರಿಲ್ಲದೆ ತೊಂದರೆ ಅನುಭವಿಸಬೇಕಾಗುತ್ತದೆ. ಈ ವೇಳೆ ಪಕ್ಷಾತೀತವಾಗಿ ವರ್ತಿಸಬೇಕಾದ ಅವಶ್ಯಕತೆಯಿದೆ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ನಾಡಿನ ಹಿತಾಸಕ್ತಿ ವಿಷಯದಲ್ಲಿ ರಾಜಕಾರಣ ಮಾಡಬಾರದು. ಅಭಿವೃದ್ಧಿಗೂ ರಾಜಕಾರಣಕ್ಕೂ ವ್ಯತ್ಯಾಸವಿದೆ. ಚುನಾವಣೆಗೂ ಮುನ್ನ ಆಯಾ ಪಕ್ಷದ ಸಿದ್ಧಾಂತಗಳು ಬೇರೆ ಬೇರೆಯಾಗಿಯೇ ಇರುತ್ತವೆ. ಆದರೆ ಹೊಸ ಸರ್ಕಾರ ರಚನೆಯಾದ ಬಳಿಕ ಎಲ್ಲರೂ ಒಗ್ಗೂಡಿ ಅಭಿವೃದ್ಧಿಗೆ ಸಹಕರಿಸಬೇಕು ಎಂದರು.
ಈ ವಿಷಯದಲ್ಲಿ ಮಾಜಿ ಶಾಸಕರೂ ಕೈಕಟ್ಟಿ ಕೂರಬಾರದು. ಮಾಜಿಯಾದರೂ ನಮ್ಮ ಕ್ಷೇತ್ರಗಳಲ್ಲಿರುವ ಸಮಸ್ಯೆಗಳು ಹಾಗೂ ಅದಕ್ಕೆ ಪರಿಹಾರ ಕಂಡುಕೊಳ್ಳಲು ನಿರಂತರ ಪ್ರಯತ್ನ ಮಾಡಬೇಕು. ಈ ನಿಟ್ಟಿನಲ್ಲಿ ಎಲ್ಲ ಮಾಜಿ ಶಾಸಕರು ಹಾಗೂ ಶಾಸಕರ ಸಭೆ ಕರೆದು ಚರ್ಚಿಸಬೇಕು ಎಂದು ಒತ್ತಾಯಿಸಿದರು. ಮಾಜಿ ಶಾಸಕರ ವೇದಿಕೆ ನಿರ್ದೇಶಕ ಕೆ.ಜಿ.ಕುಮಾರಸ್ವಾಮಿ ಇದ್ದರು.