ಜಿಲ್ಲೆ

ಆತ್ಮಸಾಕ್ಷಿಯೇ ನಿಜವಾದ ದೇವರು : ಸಾಹಿತಿ ಸತೀಶ್ ಟಿ.ಜವರೇಗೌಡ

ಆರ್.ಕೃಷ್ಣ

ಮೈಸೂರು: ಜಾತೀಯತೆ ವಿರುದ್ಧ ದನಿಯೆತ್ತಿದ ಸಂತ ಶ್ರೇಷ್ಠ ಕನಕಸಾದಸರ ಜೀವನ ಮೌಲ್ಯ, ಮಾನವತೆ-ಸಮತೆಯನ್ನು ವಿದ್ಯಾರ್ಥಿಗಳು ತಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು ಎಂದು ಸಾಹಿತಿ ಸತೀಶ್ ಟಿ.ಜವರೇಗೌಡ ಹೇಳಿದರು.

ಮೈಸೂರು ತಾಲೂಕು ಮೆಲ್ಲಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸೋಮವಾರ ಆಯೋಜಿಸಿದ್ದ ‘ಸಂತ ಶ್ರೇಷ್ಠ ಕನಕದಾಸರ ಜಯಂತಿ’ಯಲ್ಲಿ ಮಾತನಾಡಿದರು.

ಕನಕದಾಸರು ಜಾತಿ, ಕುಲಗಳ ಬದಲಿಗೆ ಇಡೀ ಮಾನವ ಕುಲದ ಐಕ್ಯತೆಗೆ ಶ್ರಮಿಸಿದ ಮಾನವತಾವಾದಿ. ಆತ್ಮಸಾಕ್ಷಿಯೇ ನಿಜವಾದ ದೇವರು. ನಾವು ಮಾಡುವ ಕೆಲಸವನ್ನು ಆತ್ಮಸಾಕ್ಷಿಗೆ ಅನುಗುಣವಾಗಿ ಮಾಡಬೇಕು. ಶುದ್ಧ ಮನಸ್ಸಿನಿಂದ ಸಾಮಾಜಿಕ ಒಳಿತು ಬಯಸುವ ಕೆಲಸಗಳನ್ನು ಕೈಗೊಳ್ಳಬೇಕು. ಈ ದಿಕ್ಕಿನಲ್ಲಿ ಕನಕದಾಸರ ವಿಚಾರಗಳು ನಮಗೆ ಪೂರಕವಾಗಿವೆ ಎಂದರು.

ಮುಖ್ಯ ಶಿಕ್ಷಕಿ ಪಿ.ಎನ್.ವೀಣಾ ಮಾತನಾಡಿ, ಸಂಗೀತ ಕ್ಷೇತ್ರಕ್ಕೆ ಕನಕದಾಸರ ಕೊಡುಗೆ ಅಪಾರ. ಅವರು ರಚಿಸಿರುವ ಕೀರ್ತನೆಗಳು ಮತ್ತು ಹಾಡುಗಳನ್ನು ಮಕ್ಕಳು ಆಲಿಸಬೇಕು ಜತೆಗೆ ಓದಬೇಕು. ಅಲ್ಲಿರುವ ಸಂದೇಶಗಳನ್ನು ಅರಿಯಬೇಕು. ಸಂಗೀತ ಮನಸ್ಸಿಗೆ ಉಲ್ಲಾಸ ಕೊಡುವ ಗುಣ ಹೊಂದಿದೆ ಎಂದು ಹೇಳಿದರು.

ಸಂಗೀತ ಶಿಕ್ಷಕಿ ಶ್ರೀದೇವಿ ಮಾತನಾಡಿ, ಅಂತರಂಗವನ್ನು ಶುದ್ಧಿಯಾಗಿಟ್ಟುಕೊಂಡು ಭಕ್ತಿಯಿಂದ ಕೀರ್ತನೆಗಳ ರಚಿಸಿ, ಆ ಮೂಲಕ ಜಾತಿಯ ತಾರತಮ್ಯದ ವಿರುದ್ಧ ಹೋರಾಡಿದ ಕನಕದಾಸರು ದಾಸ ಸಾಹಿತ್ಯದ ಶ್ರೇಷ್ಠ ಸಂತರು ಎಂದು ಬಣ್ಣಿಸಿದರು.

ಶಿಕ್ಷಕರಾದ ಸುನೀಲ್ ಕುಮಾರ್, ಮಹಮ್ಮದ್ ಸುಹೇಲ್, ರಂಗಸ್ವಾಮಿ, ಶಿಕ್ಷಕಿಯರಾದ ಜೆ. ಸತ್ಯವತಿ, ರೂಹಿ ಅಬ್ಜಾ, ಪಿ.ಎಲ್. ಭಾಗ್ಯ, ಎನ್.ಆರ್. ಸುಜಾತಾ, ಸೌಜನ್ಯಾ, ರೂಪಾ ಇತರರು ಇದ್ದರು. ಬಳಿಕ ವಿದ್ಯಾರ್ಥಿಗಳು ಕನಕದಾಸರ ಕೀರ್ತನೆಗಳ ಗಾಯನ ನಡೆಸಿಕೊಟ್ಟರು.