ವಿಜಯಪುರ ನಗರದ ಶ್ರೀರುಕ್ಮಾಂಗದ ಪಂಡಿತರ ಸಮಾಧಿ ಸಭಾಂಗಣದಲ್ಲಿ ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾ ನೇತೃತ್ವದಲ್ಲಿ ಶನಿವಾರ ಆಯೋಜಿಸಲಾಗಿದ್ದ ಜಿಲ್ಲಾ ಪ್ರಶಿಕ್ಷಣ ಶಿಬಿರವನ್ನು ಸಂಸದ ರಮೇಶ ಜಿಗಜಿಣಗಿ ಉದ್ಘಾಟಿಸಿದರು. ಆರ್.ಎಸ್. ಪಾಟೀಲ ಕುಚಬಾಳ, ಚಂದ್ರಶೇಖರ ಕವಟಗಿ, ವಿವೇಕಾನಂದ ಡಬ್ಬಿ ಮತ್ತಿತರರಿದ್ದರು.  
ಜಿಲ್ಲೆ

ಚುನಾವಣೆ ಬಂದಾಗಷ್ಟೇ ಕಾಂಗ್ರೆಸ್ಸಿಗರಿಗೆ ದಲಿತರ ನೆನಪು: ಸಂಸದ ರಮೇಶ ಜಿಗಜಿಣಗಿ

Bellari - Heera Nayak

ವಿಜಯಪುರ : ದೇಶವನ್ನು 70 ವರ್ಷ ಲೂಟಿ ಮಾಡಿ ಸತ್ಯಾನಾಶ ಮಾಡಿದ ಕಾಂಗ್ರೆಸ್ ಈಗ ನಾಟಕವಾಡುತ್ತಿದೆ. ಆದರೂ ಮುಗ್ಧ ದಲಿತ ಸಮುದಾಯದವರು ಕಾಂಗ್ರೆಸ್ ಬೆನ್ನು ಹತ್ತಿದ್ದಾರೆ ಎಂದು ಸಂಸದ ರಮೇಶ ಜಿಗಜಿಣಗಿ ವ್ಯಂಗ್ಯವಾಡಿದರು.

ನಗರದ ಶ್ರೀರುಕ್ಮಾಂಗದ ಪಂಡಿತರ ಸಮಾಧಿ ಸಭಾಂಗಣದಲ್ಲಿ ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾ ನೇತೃತ್ವದಲ್ಲಿ ಶನಿವಾರ ಆಯೋಜಿಸಲಾಗಿದ್ದ ಜಿಲ್ಲಾ ಪ್ರಶಿಕ್ಷಣ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದರು.

ಕೇವಲ ಚುನಾವಣೆ ಬಂದಾಗ ದಲಿತರನ್ನು ಕಾಂಗ್ರೆಸ್ ನೆನಪು ಮಾಡಿಕೊಳ್ಳುತ್ತದೆ. ಯಾರಿಗೂ ದಲಿತರಿಗೆ ಉಳುಮೆ ಮಾಡಲು ಒಂದು ಇಂಚು ಜಮೀನು ಸಹ ಕಾಂಗ್ರೆಸ್ ನೀಡಿಲ್ಲ. ಸಂವಿಧಾನ ಕರುಣಿಸಿದ ಡಾ.ಬಿ.ಆರ್. ಅಂಬೇಡ್ಕರ್ ಅವರ ಸಮಾಧಿಗೆ ಜಾಗ ನೀಡಲಿಲ್ಲ . ಇದನ್ನು ದಲಿತರು ಅರ್ಥ ಮಾಡಿಕೊಳ್ಳಬೇಕು, ಈ ವಿಷಯವಾಗಿ ಅವರಿಗೆ ಅರಿವು ಮೂಡಿಸುವ ಕಾರ್ಯವನ್ನು ಕಾರ್ಯಕರ್ತರು ಮಾಡಬೇಕು ಎಂದರು.

ನನ್ನ ತಂದೆ, ಅಜ್ಜ ಎಂಎಲ್‌ಎ ಇರಲಿಲ್ಲ. ಆದರೆ ನಾನು ಕಂಬಳಿ ಹೊತ್ತು ಮಲಗಲಿಲ್ಲ, ಜಯಪ್ರಕಾಶ್ ನಾರಾಯಣರು ತುರ್ತುಪರಿಸ್ಥಿತಿ ವಿರೋಧಿಸುವಂತೆ ಯುವಕರಿಗೆ ಕರೆ ನೀಡಿದರು. ಆಗ ಅದರಿಂದ ಪ್ರೇರಣೆ ಪಡೆದು ಈ ಸ್ಥಾನಕ್ಕೆ ಬಂದೆ. ಪ್ರತಿಯೊಬ್ಬರಿಗೂ ಪ್ರೇರಣೆ ಅಗತ್ಯ. ಈಗ ಯುವಕರಿಗೆ ಮೋದಿ ಪ್ರೇರಣೆ. ಮೋದಿಜಿ ಆಡಳಿತ ನಡೆಸಿದ 8 ವರ್ಷಗಳಲ್ಲಿಯೇ ಜಗತ್ತಿನ ನಾಯಕರಾಗಿ, ವಿಶ್ವದ ನಾಯಕರಿಗೆ ಪ್ರೇರಣೆಯಾಗಿದ್ದಾರೆ. ಪ್ರತಿ ನಿತ್ಯ ಬೇರೆ ಬೇರೆ ದೇಶದ ಪ್ರಧಾನಿಗಳು ಭಾರತಕ್ಕೆ ಬರುತ್ತಿದ್ದಾರೆ ಎಂದರು.

ಕಾಂಗ್ರೆಸ್ ನಾಯಕರು ಕೋವಿಡ್ ಕಾಲಘಟ್ಟದಲ್ಲಿ ಅಧಿಕಾರದಲ್ಲಿದ್ದರೆ ಇಡೀ ದೇಶದಲ್ಲಿ ಹೆಣಗಳು ಬೀಳುತ್ತಿದ್ದವು, ಆದರೆ ಮೋದಿಜಿ ದೇಶದ ಎಲ್ಲ ನಿವಾಸಿಗಳಿಗೂ ವ್ಯಾಕ್ಸಿನ್ ನೀಡುವ ಮೂಲಕ ಅಭಿವೃದ್ಧಿ ಹೊಂದಿದ ರಾಷ್ಟ್ರಗಳಲ್ಲಿ ಸಾಧ್ಯವಾಗದ ಕೋವಿಡ್ ಲಸಿಕಾ ಅಭಿಯಾನ ಭಾರತದಲ್ಲಿ ಯಶಸ್ವಿಯಾಗಿದೆ, ಅದಕ್ಕೆ ಮೋದಿ ಅವರ ಸಮರ್ಥ ನಾಯಕತ್ವವೇ ಕಾರಣ ಎಂದರು.

ಬಿಜೆಪಿ ಜಿಲ್ಲಾಧ್ಯಕ್ಷ ಆರ್.ಎಸ್. ಪಾಟೀಲ ಕುಚಬಾಳ ಮಾತನಾಡಿ, ಅಣುಬಾಂಬ್ ದಾಳಿಗೆ ಸಿಲುಕಿ ಸಂಪೂರ್ಣವಾಗಿ ಹಾಳಾಗಿದ್ದ ಜಪಾನ್ ಕೆಲವೇ ವರ್ಷಗಳಲ್ಲಿ ಜಗತ್ತಿನಲ್ಲಿ ಮಿಂಚಿತು, ಆದರೆ ಕಾಂಗ್ರೆಸ್ ಆಡಳಿತ ಕಾರಣದಿಂದಾಗಿ ಭಾರತ ಪ್ರಗತಿ ಕಾಣಲಿಲ್ಲ, ಸಂಪದ್ಭರಿತ ರಾಷ್ಟ್ರವಾಗಿದ್ದರೂ ಭಾರತ ಕಾಂಗ್ರೆಸ್ ಇಚ್ಚಾಶಕ್ತಿ ಕೊರತೆಯಿಂದ ಭಾರತೀಯರು ಬಡವರಾಗಿ ಉಳಿಯಬೇಕಾಯಿತು ಎಂದು ವಿಷಾದಿಸಿದರು.

ಭ್ರಷ್ಟಾಚಾರ ಪಿತಾಮಹ ಕಾಂಗ್ರೆಸ್. ಜನತೆಗೆ ಭ್ರಷ್ಟಾಚಾರ, ಭಯೋತ್ಪಾದನೆ ಬಳುವಳಿಗಳನ್ನು ಮಾತ್ರ ನೀಡಿದೆ, ಈ ಎಂಟು ವರ್ಷಗಳ ಹಿಂದೆ ಎಲ್ಲಿ ನೋಡಿದರೂ ಬಾಂಬ್ ಬೀಳುತ್ತಿದ್ದವು, ಆದರೆ ಭಾರತ ಬದಲಾಗಿದೆ. ನಾವು ಕಾಶ್ಮೀರ ಪ್ರವಾಸ ಮಾಡಿದರೆ ಮೋದಿಜಿ ಸರ್ಕಾರದ ದಿಟ್ಟತನದ ಅರಿವಾಗಲು ಸಾಧ್ಯ. ಈಗ ಅಲ್ಲಿ ಯಾವ ಭಯದ ವಾತಾವರಣವೂ ಇಲ್ಲ, ದೇಶದ ಸ್ವರ್ಗ ಕಾಶ್ಮೀರದಲ್ಲಿ ಪ್ರಗತಿಯ ಪರ್ವ ಆರಂಭವಾಗಿದೆ ಎಂದರು.

ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ವಿವೇಕಾನಂದ ಡಬ್ಬಿ ಮಾತನಾಡಿ, ಪ್ರಸ್ತುತ ಕೇಂದ್ರ ಸರ್ಕಾರದಲ್ಲಿ ಹಿಂದುಳಿದ ವರ್ಗಗಳ ನಾಯಕರನ್ನು ಅತಿಹೆಚ್ಚು ಸಚಿವ ಸ್ಥಾನ ನೀಡಿದ್ದು ಬಿಜೆಪಿ. ಬಿಜೆಪಿ ಹಿಂದುಳಿದ ವರ್ಗಗಳ ನೈಜ ಕಲ್ಯಾಣವನ್ನು ಬಯಸುವ ಏಕೈಕ ಪಕ್ಷವಾಗಿದೆ ಎಂದರು.

ಬಿಜೆಪಿ ವಿಭಾಗ ಪ್ರಭಾರಿ ಚಂದ್ರಶೇಖರ ಕವಟಗಿ, ರಾಜ್ಯ ಕಾರ್ಯಕಾರಣಿ ಸದಸ್ಯ ಶೀಲವಂತ ಉಮರಾಣಿ, ಪ್ರಮುಖರಾದ ಉಮೇಶ ಕೋಳಕೂರ, ಮಳುಗೌಡ ಪಾಟೀಲ, ಸಂಜಯ ಪಾಟೀಲ ಕನಮಡಿ, ವಿಜಯ ಜೋಶಿ, ಶಂಕರ ಕುಂಬಾರ, ಭರತ ಕೋಳಿ ಮೊದಲಾದವರು ಉಪಸ್ಥಿತರಿದ್ದರು.