ಮಾಗಡಿ: ಕರ್ನಾಟಕದಲ್ಲಿ ಯಾರೆಲ್ಲ ಸತ್ಯ ಹರಿಶ್ಚಂದ್ರರು ಎಂದು ಹೇಳಿಕೊಂಡು ತಿರುಗಾಡುತ್ತಿದ್ದರೋ ಅವರ ಮುಖವಾಡ ಇಂದು ಕಳಚಿದೆ ಎಂದು ಸಂಸದ ಡಾ.ಕೆ.ಸುಧಾಕರ್ ಸಿಎಂ ಹೆಸರು ಪ್ರಸ್ತಾಪಿಸದೆ ವಾಗ್ದಾಳಿ ನಡೆಸಿದರು.
ತಾಲೂಕಿನ ಗುಡೇಮಾರನಹಳ್ಳಿ ಹ್ಯಾಂಡ್ ಪೋಸ್ಟ್‌ನ ಬಸವೇಶ್ವರ ಸಮುದಾಯ ಭವನದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಸೇವಾ ಪಾಕ್ಷಿಕ ಹಾಗೂ ಸದಸ್ಯತ್ವ ಅಭಿಯಾನ ಉದ್ಘಾಟಿಸಿ ಮಾತನಾಡಿದರು.
ಕಾಂಗ್ರೆಸ್‌ನವರು ಸುಳ್ಳು ಹೇಳುವುದರಲ್ಲಿ ನಿಸ್ಸೀಮರು. ರಾಜ್ಯದಲ್ಲಿ ಯಾವುದೇ ಅಭಿವೃದ್ಧಿ ಕೆಲಸ ಆಗುತ್ತಿಲ್ಲ, ಬಡವರ ಕಲ್ಯಾಣಕ್ಕೆ ಕಾಂಚಾಣ ಇಲ್ಲ ಎಂದು ಲೇವಡಿ ಮಾಡಿದರು.
ದಾಬಸ್‌ಪೇಟೆ ಗ್ರೀನ್ ಸಿಟಿ ನಿರ್ಮಾಣದ ಶಂಕುಸ್ಥಾಪನೆಗೆ ಶಿಷ್ಟಾಚಾರ ಉಲ್ಲಂಘನೆ ಮಾಡಿದ್ದಾರೆ ಎಂದು ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ದೂರು ಸಲ್ಲಿಸಲಾಗಿದೆ. ಕಾಂಗ್ರೆಸ್ಸಿಗರು ಶಿಷ್ಟಾಚಾರದ ಬಗ್ಗೆ ಸತ್ಯ ಹರಿಶ್ಚಂದ್ರರಂತೆ ಮಾತನಾಡುತ್ತಾರೆ. ಗ್ರೀನ್ ಸಿಟಿ ನಿರ್ಮಾಣದ ಶಂಕುಸ್ಥಾಪನೆ ವೇಳೆ ಕನಿಷ್ಠ ಸೌಜನ್ಯಕ್ಕಾದರೂ ನನ್ನನ್ನು ಆಹ್ವಾನಿಸಬೇಕೆಂಬ ಅರಿವು ಇಲ್ಲ. ಇದು, ಇಡೀ ಕ್ಷೇತ್ರದ ಜನತೆಗೆ ಮಾಡಿದ ಅವಮಾನ ಎಂದು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ಕೇಂದ್ರ ಸರ್ಕಾರ ದೇಶದ ಗ್ರಾಮೀಣ ಭಾಗಗಳಿಗೆ ಜೆಜೆಎಂ ಯೋಜನೆ ಅನುಷ್ಠಾನಗೊಳಿಸುತ್ತಿದ್ದು, ಮನೆ ಮನೆಗೆ ಶೌಚಗೃಹ, ಕಡುಬಡವರಿಗೆ ಮನೆ, ರಾಷ್ಟ್ರೀಯ ಹೆದ್ದಾರಿ, ಎಸ್‌ಜಿಆರ್‌ಆರ್ ರಸ್ತೆಗಳು, ಬೈಪಾಸ್, ಅಂಡರ್ ಪಾಸ್, ರಿಂಗ್ ರೋಡ್‌ಗಳು, ವಿಮಾನ ನಿಲ್ದಾಣ ಸೇರಿ ಮೆಡಿಕಲ್ ವಿವಿಗಳ ಸ್ಥಾಪನೆ, ಶಾಲಾ, ಕಾಲೇಜು ಕಟ್ಟಿಸುವ ಮೂಲಕ ನೂರಾರು ಯೋಜನೆಗಳನ್ನು ಪ್ರಧಾನಿ ದೇಶದ ಜನತೆಗೆ ಕೊಡುಗೆ ಕೊಟ್ಟಿದ್ದಾರೆ. ಆದರೆ, ರಾಜ್ಯ ಸರ್ಕಾರ ಗ್ಯಾರಂಟಿ ಹೆಸರಿನಲ್ಲಿ ಜನರಿಗೆ ಮೋಸ ಮಾಡಿದೆ ಎಂದು ದೂರಿದರು.
ಹೆಚ್ಚಿನ ಸದಸ್ಯತ್ವ ನೋಂದಣಿ ಅಭಿಯಾನ ಮಾಡಿದರೆ ಬಿಜೆಪಿ 150 ಸ್ಥಾನಗಳಿಸುವ ಮೂಲಕ ರಾಜ್ಯದಲ್ಲಿ ಆಡಳಿತ ಚುಕ್ಕಾಣಿ ಹಿಡಿಯಲಿದೆ. ಆಗ ಕಾರ್ಯಕರ್ತರಿಗೂ ಒಳ್ಳೆಯ ಸ್ಥಾನಮಾನ ಸಿಗಲಿದೆ ಎಂದರು.ಪ್ರಧಾನಿ ಅವರ ತಾಯಿ ಹೆಸರಲ್ಲಿ 10 ಲಕ್ಷ ಸಸಿ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದಾರೆ. ರಾಜ್ಯದಲ್ಲಿ ಪ್ರತಿಯೊಬ್ಬ ಸದಸ್ಯರೂ ಒಂದೊಂದು ಸಸಿ ನೆಡುವ ಮೂಲಕ ಕಾರ್ಯಕ್ರಮ ಯಶಸ್ವಿಗೊಳಿಸುವಂತೆ ಕರೆ ನೀಡಿದರು.
ಕಾಂಗ್ರೆಸ್ಸಿಗರು ಪೊಲೀಸರನ್ನು ಮುಂದಿಟ್ಟುಕೊಂಡು ಬಿಜೆಪಿ ಕಾರ್ಯಕರ್ತರು, ನಾಯಕರ ಮೇಲೆ ಎಫ್‌ಐಆರ್ ದಾಖಲಿಸುತ್ತಿದ್ದಾರೆ. ಈ ರೀತಿ ಆದರೆ ನನ್ನ ಗಮನಕ್ಕೆ ತನ್ನಿ ಎಂದು ಕಾರ್ಯಕರ್ತರಿಗೆ ಕಿವಿಮಾತು ಹೇಳಿದರು.
ಬೆಂಗಳೂರು ಗ್ರಾಮಾಂತರ ರೈತಮೋರ್ಚಾ ಜಿಲ್ಲಾಧ್ಯಕ್ಷ ಕೆ.ಪಿ.ಬೃಂಗೇಶ್ ಮಾತನಾಡಿ, ಡಾ.ಕೆ.ಸುಧಾಕರ್ ಸಂಸದರಾದ ಮೇಲೆ ಕ್ಷೇತ್ರ ಸಂಚಾರ ಮಾಡಿ ಜನರ ಸಮಸ್ಯೆ ಬಗೆಹರಿಸುವಲ್ಲಿ ಶ್ರಮಿಸಿದ್ದಾರೆ. ಸಂಸದರು ಕಾರ್ಯಕರ್ತರಿಗೆ ಸಾಕಷ್ಟು ಶಕ್ತಿ ತುಂಬುತ್ತಿದ್ದು, ನೆಲಮಂಗಲ ಕ್ಷೇತ್ರ ವ್ಯಾಪ್ತಿಯಲ್ಲಿ ಸುಮಾರು 1.45 ಲಕ್ಷ ಸದಸ್ಯತ್ವ ನೋಂದಣಿ ಮಾಡಲಾಗುತ್ತಿದೆ. ಮುಖಂಡರು, ಕಾರ್ಯಕರ್ತರು ಅಭಿಯಾನದ ಯಶಸ್ಸಿಗೆ ಕೈಜೋಡಿಸಿ ಪ್ರೋತ್ಸಾಹಿಸಿದ್ದಾರೆ ಎಂದರು.
ನೆಲಮಂಗಲ ಮಂಡಳ ಅಧ್ಯಕ್ಷ ಜಗದೀಶ್ ಚೌಧರಿ ಮಾತನಾಡಿ, ಸಂಸದರ ಕ್ಷೇತ್ರದಲ್ಲಿ ಶಾಸಕರನ್ನು ಗೆಲ್ಲಿಸಿಕೊಂಡರೆ ಕ್ಷೇತ್ರವನ್ನು ಸಮಗ್ರವಾಗಿ ಅಭಿವೃದ್ಧಿ ಪಡಿಸಲು ಸಾಧ್ಯವಿದೆ ಎಂದರು. ಕಾರ್ಯಕ್ರಮದಲ್ಲಿ ಅಡಕೆ ಸಸಿ ವಿತರಿಸಲಾಯಿತು.ಮಾಜಿ ಶಾಸಕ ನಾಗರಾಜು, ಬಿಜೆಪಿ ಜಿಲ್ಲಾಧ್ಯಕ್ಷ ರಾಮಕೃಷ್ಣ, ರೈತಮೋರ್ಚಾ ರಾಜ್ಯಾಧ್ಯಕ್ಷ ಸತೀಶ್ ಕಡಪಲ್ಲಿ, ಎನ್‌ಡಿಎ ಮಾಜಿ ಅಧ್ಯಕ್ಷ ಕೆ.ಪಿ.ಆನಂದ್, ಸಿ.ಎಂ.ಮಂಜುನಾಥ್, ರೇವಣ್ಣ, ಹನುಮಂತರಾಯಪ್ಪ, ಮಂಜುಳಾ, ಯುವ ಮೋರ್ಚಾ ಮಹೇಶ್, ಆಂಜನಪ್ಪ ಇತರರು ಇದ್ದರು.
ಕನಿಷ್ಠ 100 ಸದಸ್ಯರ ನೋಂದಣಿ
ರಾಜ್ಯದಲ್ಲಿ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಅಧಿಕಾರಕ್ಕೆ ಬರಬೇಕಾದರೆ ಪ್ರತಿಯೊಬ್ಬ ಕಾರ್ಯಕರ್ತರು ಕನಿಷ್ಠ 100 ಸದಸ್ಯರನ್ನು ನೋಂದಣಿ ಮಾಡಬೇಕು. ಈಗಾಗಲೇ ಯಲಹಂಕ ಕ್ಷೇತ್ರದಲ್ಲಿ 2.20 ಲಕ್ಷ ಸದಸ್ಯತ್ವ ನೋಂದಣಿಯಾಗಿ ಇಡಿ ದೇಶಕ್ಕೆ ಪ್ರಥಮ ಸ್ಥಾನದಲ್ಲಿದೆ. ನೆಲಮಂಗಲ ಕ್ಷೇತ್ರದಲ್ಲಿ ಕನಿಷ್ಠ 50 ಸಾವಿರ ಸದಸ್ಯತ್ವ ನೋಂದಣಿ ಮಾಡಬೇಕೆಂದು ಕಾರ್ಯಕರ್ತರಿಗೆ ಡಾ.ಕೆ.ಸುಧಾಕರ್ ತಾಕಿತು ಮಾಡಿದರು.