ಜಿಲ್ಲೆ

ಕಾರ್ಯಕರ್ತರ ಶ್ರಮದಿಂದ ಸರ್ಕಾರ ರಚನೆ: ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಹೇಳಿಕೆ

ಕೆ.ಎನ್.ರಾಘವೇಂದ್ರ

ಮಂಡ್ಯ: ಪಕ್ಷದ ಕಾರ್ಯಕರ್ತರ ಶ್ರಮ, ದುಡಿಮೆಯಿಂದಾಗಿ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ರಚನೆಯಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಹೇಳಿದರು.

ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ ಚುನಾವಣೆ ಹಿನ್ನೆಲೆಯಲ್ಲಿ ನಗರದ ಎ ಆ್ಯಂಡ್ ಎ ಸಮುದಾಯ ಭವನದಲ್ಲಿ ಮಂಡ್ಯ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಕಾರ್ಯಕರ್ತರಿಗಾಗಿ ಆಯೋಜಿಸಿದ್ದ ‘ಸರ್ಕಾರದ ನಡಿಗೆ ಕಾರ್ಯಕರ್ತರ ಕಡೆಗೆ’ ಸಭೆ ಉದ್ಘಾಟಿಸಿ ಮಾತನಾಡಿದ ಅವರು, ಕಾರ್ಯಕರ್ತರಿಂದಾಗಿ ರಾಜ್ಯದಲ್ಲಿ 138 ಜನ ಶಾಸಕ, ಸಿದ್ದರಾಮಯ್ಯ ಸಿಎಂ, ಡಿಕೆಶಿ ಡಿಸಿಎಂ ಆಗಿದ್ದಾರೆ. ನಮ್ಮ ಸರ್ಕಾರ 5 ಗ್ಯಾರಂಟಿ ಕೊಟ್ಟಿದೆ. ಇದಕ್ಕಾಗಿ 1,700 ಕೋಟಿ ರೂ ವರ್ಷಕ್ಕೆ ಕೊಡುತ್ತಿದ್ದೇವೆ ಎಂದರು.

ವಿವಿಧ ಇಲಾಖೆಯ ಸೌಲಭ್ಯಗಳನ್ನು 1 ಲಕ್ಷ ಕೋಟಿ ರೂಗಳನ್ನು ಈ ರಾಜ್ಯದ ಜನರಿಗೆ ಕೊಡುತ್ತಿದ್ದೇವೆ. ಸಿದ್ದರಾಮಯ್ಯ ಸರ್ಕಾರವನ್ನು ಯಾವುದೇ ಇಕ್ಕಟ್ಟಿಗೆ ಸಿಕ್ಕಿಸಲು ಜೆಡಿಎಸ್-ಬಿಜೆಪಿಯಿಂದ ಆಗಿಲ್ಲ. ಸಿದ್ದರಾಮಯ್ಯ, ಡಿಕೆಶಿಯಿಂದ ಜಿಲ್ಲೆಗೆ ಸಾಕಷ್ಟು ಕೊಡುಗೆ. ಎಂದೋ ಕೃಷಿ ವಿಶ್ವವಿದ್ಯಾನಿಲಯ ಆಗಬೇಕಿತ್ತಾದರೂ ಆಗಿಲ್ಲ. ನಮ್ಮ ಸರ್ಕಾರ ಕೃಷಿ ವಿವಿ ಕೊಟ್ಟಿದೆ. ರೈತರಿಗೆ ಹಲವು ಕಾರ್ಯಕ್ರಮ ಕೊಟ್ಟಿದ್ದೇವೆ. ಸಾಲಮನ್ನಾ ಸೇರಿ ಅನೇಕ ಕಾರ್ಯಕ್ರಮ ಕೊಟ್ಟಿದ್ದೇವೆ. ಜೆಡಿಎಸ ಮತ್ತು ಬಿಜೆಪಿ ಮಾಡದ ಕೆಲಸವನ್ನು ನಾವು ಮಾಡುತ್ತಿದ್ದೇವೆ. ಟೀಕೆ, ಟಿಪ್ಪಣಿಗೆ ನಾವು ಉತ್ತರ ಕೊಟ್ಟಿದ್ದೇವೆ. ತಾಲೂಕು ಮಟ್ಟದಲ್ಲಿ ಕಾಂಗ್ರೆಸ್ ಪಕ್ಷ ಸದೃಢ ಮಾಡಬೇಕು. ನಾವೆಲ್ಲರೂ ಪಕ್ಷವನ್ನು ಗಟ್ಟಿಗೊಳಿಸಿ ಸ್ಥಳೀಯ ಮಟ್ಟದ ಅಧಿಕಾರ ಪಡೆಯಬೇಕು. ಪಕ್ಷಕ್ಕೆ ಹೆಚ್ಚು ಹೆಚ್ಚು ಸದಸ್ಯರನ್ನ ಸೇರ್ಪಡೆ ಮಾಡಿಸಬೇಕು ಎಂದು ಕರೆ ನೀಡಿದರು.

ಮಳವಳ್ಳಿ ಶಾಸಕ ಪಿ.ಎಂ.ನರೇಂದ್ರಸ್ವಾಮಿ ಮಾತನಾಡಿ, ಜಿಲ್ಲೆಯ ಮತದಾರರು, ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರ ಶ್ರಮದಿಂದ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಸ್ತಿತ್ವದಲ್ಲಿದೆ. ಅಧಿಕಾರದ ಗದ್ದುಗೆಗೆ ನಮ್ಮನ್ನು ಆಯ್ಕೆಗೊಳಿಸಿದ ಜನ ಸಾಮಾನ್ಯರ ದುಃಖ ದುಮ್ಮಾನಗಳಿಗೆ ಸ್ಪಂದಿಸಲು ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನದ ಜತೆ ಅಭಿವೃದ್ದಿಗೂ ಆದ್ಯತೆ ನೀಡಲಾಗುತ್ತಿದೆ. ಮುಂಬರುವ ಸ್ಥಳೀಯ ಸಂಸ್ಥೆಗಳ ಚುನಾವಣೆಗಳು ಪಕ್ಷದ ಕಾರ್ಯಕರ್ತರು ಹಾಗೂ ಮುಖಂಡರ ಅಸ್ತಿತ್ವದ ಪ್ರಶ್ನೆಯಾಗಿದೆ. ಕಾರ್ಯಕರ್ತರ ಒಗ್ಗಟ್ಟಿನಿಂದ ಶ್ರಮಿಸಿದ ಪರವಾಗಿ ಜಿಲ್ಲೆಯಲ್ಲಿ 6 ಜನ ಶಾಸಕರು ಆಯ್ಕೆಯಾಗಿ ಸರ್ಕಾರದ ಭಾಗವಾಗಿದ್ದೇವೆ. ಇದು ಜಿಲ್ಲೆಯ ಜನರ ಔದಾರ್ಯ ಎಂದು ಬಣ್ಣಿಸಿದರು.

ಪಕ್ಷದ ನಿಷ್ಟ ಕಾರ್ಯಕರ್ತರ ಸ್ಪಂದನೆಗೆ ಸೂಕ್ತವಾಗಿ ಸ್ಪಂದಿಸಲಾಗದಿರುವುದು ನಮಗೂ ಬೇಸರ ತಂದಿದೆ. ಮುಂದಿನ ದಿನಗಳಲ್ಲಿ ನಡೆಯುವ ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲಿ ಕಾರ್ಯಕರ್ತರ ಹಿತ ಕಾಪಾಡಲು ಬದ್ದರಾಗಿರುತ್ತೇವೆ. ಪ್ರತಿ ಮತವೂ ಮುಖ್ಯವಾಗಿದೆ. ಇದನ್ನು ಮನಗಂಡು ಕಾರ್ಯಕರ್ತರು ಬೂತ್ ಮಟ್ಟದಲ್ಲಿ ಪಕ್ಷ ಸಂಘಟಿಸಲು ಮುಂದಾಗಬೇಕೆಂದು ಕಿವಿಮಾತು ಹೇಳಿದರು.

ಮೇಲುಕೋಟೆ ಶಾಸಕ ದರ್ಶನ್ ಪುಟ್ಟಣ್ಣಯ್ಯ ಮಾತನಾಡಿ, ಬೂತ್‌ಮಟ್ಟದಲ್ಲಿ ವ್ಯಾಪಕ ಪ್ರಚಾರ ನಡೆಸಿ, ನಮ್ಮ ಗೆಲುವಿಗೆ ಸಹಕಾರ ನೀಡಿದ ಕಾರ್ಯಕರ್ತರಿಗೆ ಋಣಿಯಾಗಿದ್ದೇವೆ. ಅದೇ ರೀತಿ ಜಿಲ್ಲೆಯ ಅಭಿವೃದ್ದಿಗೆ ಕಟಿಬದ್ದರಾಗಿದ್ದೇವೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ಬಾರಿ ಆಯ-ವ್ಯಯದಲ್ಲಿ ಸಾವಯವ ಕೃಷಿ ಮತ್ತು ಕೃಷಿ ಕ್ಷೇತ್ರ ಬಲವರ್ಧನೆಗೆ ಹೆಚ್ಚು ಅನುದಾನ ನೀಡಿರುವುದು ಶ್ಲಾಘನೀಯ ಎಂದು ಪ್ರಶಂಸೆ ವ್ಯಕ್ತಪಡಿಸಿದರು.

ವಿಧಾನ ಪರಿಷತ್ ಸದಸ್ಯ ದಿನೇಶ್ ಗೂಳಿಗೌಡ ಮಾತನಾಡಿ, ಕಾವೇರಿ ಜಲಾನಯನ ಪ್ರದೇಶ ವ್ಯಾಪ್ತಿಯ 5 ಜಿಲ್ಲೆಗಳ ರೈತರಿಗೆ ವರದಾನವಾಗಲಿರುವ ಕೃಷಿ ವಿಶ್ವವಿದ್ಯಾಲಯ ಸ್ಥಾಪನೆಗೆ ನಮ್ಮ ಸರ್ಕಾರ ಬದ್ದತೆ ಮೆರೆದಿದೆ. ಅದೇ ರೀತಿ ಜಿಲ್ಲೆಯ ನಾಲೆಗಳ ಆಧುನೀಕರಣಕ್ಕೆ 780 ಕೋಟಿ ರೂಗಳನ್ನು ಪ್ರಸಕ್ತ ಸಾಲಿನಲ್ಲಿ ವ್ಯಯಿಸಲಾಗುತ್ತಿದೆ. ಪಂಚ ಗ್ಯಾರಂಟಿ ಯೋಜನೆಗಳು ಜಿಲ್ಲೆಯ ಬಹುಪಾಲು ಜನರಿಗೆ ನೆರವಾಗಿವೆ ಎಂದರು.

ಮದ್ದೂರು ಶಾಸಕ ಕೆ.ಎಂ.ಉದಯ್, ಶ್ರೀರಂಗಪಟ್ಟಣ ಶಾಸಕ ರಮೇಶ ಬಂಡಿಸಿದ್ದೇಗೌಡ, ಮನ್‌ಮುಲ್ ನಿರ್ದೇಶಕ ಅಪ್ಪಾಜಿಗೌಡ, ಮಾಜಿ ಉಪಸಭಾಪತಿ ಮರಿತಿಬ್ಬೇಗೌಡ, ಮೈಷುಗರ್ ಅಧ್ಯಕ್ಷ ಸಿ.ಡಿ.ಗಂಗಾಧರ, ಮಾಜಿ ಶಾಸಕ ಎಚ್.ಬಿ.ರಾಮು, ಜಿಲ್ಲಾ ಕಾಂಗ್ರೆಸ್ ಕಾರ್ಯಾಧ್ಯಕ್ಷ ಚಿದಂಬರ್ ಇತರರಿದ್ದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಮಂಡ್ಯ ಶಾಸಕ ರವಿಕುಮಾರ್ ಗಣಿಗ, ಸ್ಥಳೀಯ ಮಟ್ಟದಲ್ಲಿ ಅಧಿಕಾರ ಹಿಡಿಯಬೇಕು. ಆ ನಿಟ್ಟಿನಲ್ಲಿ ಎಲ್ಲರೂ ಸಹ ಕೆಲಸ ಮಾಡಬೇಕು. ನಮಗೆ ಅಧಿಕಾರ ಕೊಡಲು ನೀವು ಶ್ರಮ ಪಟ್ಟಿದ್ದೀರಿ. ಈಗ ನಿಮಗೆ ಅಧಿಕಾರ ಸಿಗಬೇಕು. ಕಳೆದ ಎಂಪಿ ಚುನಾವಣೆಯಲ್ಲಿ ಸೋತಿದ್ದೇವೆ. ಇದೀಗ ನಾವು ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಸಜ್ಜಾಗಬೇಕು. ಮಂಡ್ಯ ನಗರಸಭೆ ಅಧ್ಯಕ್ಷ ಚುನಾವಣೆಯಲ್ಲಿ ಒಂದು ಮತದಿಂದ ಸೋತಿದ್ದೇವೆ. ಎಚ್.ಡಿ.ಕುಮಾರಸ್ವಾಮಿ ಅವರು ಪ್ರತಿಷ್ಠೆಯಾಗಿ ತೆಗೆದುಕೊಂಡರು. ನೀವು ಅಷ್ಟೇ, ನಿರ್ಲಕ್ಷೃ ಮಾಡಬಾರದು ಎಂದರು.

ಪ್ರತಿ ಗ್ರಾಮದಲ್ಲಿ ಬೇರೆ ಪಕ್ಷದವರನ್ನು ಕಾಂಗ್ರೆಸ್‌ಗೆ ಸೇರ್ಪಡೆ ಮಾಡಿಸಿ ಸಂಘಟನೆಗೊಳಿಸಿ. ಜಿಪಂ, ತಾಪಂ ಚುನಾವಣೆಯನ್ನು ಗೆಲ್ಲಬೇಕು. ಇದನ್ನು ಕಾರ್ಯಗತಗೊಳಿಸಲು ನೀವೆಲ್ಲರು ಶ್ರಮ ಪಡಬೇಕು. ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಸ್ಪರ್ಧಿಸಲು ಆಕಾಂಕ್ಷಿತರಾಗಿರುವವರು ಸಿಎಂ, ಡಿಸಿಎಂ, ಉಸ್ತುವಾರಿ ಸಚಿವರು ಅಥವಾ ನನ್ನ ಬಳಿ ಪ್ರದಕ್ಷಿಣಿ ಹಾಕುವ ಬದಲು ಬೂತ್ ಮಟ್ಟದಲ್ಲಿ ಪಕ್ಷ ಬಲವರ್ಧನೆಗೆ ಮುಂದಾಗಬೇಕು. ಜನ ಬೆಂಬಲವಿರುವವರಿಗೆ ಮಾತ್ರ ಸ್ಪರ್ಧಿಸಲು ಅವಕಾಶ ಕಲ್ಪಿಸಲಾಗುತ್ತದೆ ಎಂದು ಸ್ಪಷ್ಟಪಡಿಸಿದರು.

ಜೆಡಿಎಸ್ ಹಾಗೂ ಬಿಜೆಪಿ ಪಕ್ಷ ಮೈತ್ರಿ ರಾಜಕಾರಣ ಮಾಡುತ್ತಿವೆ. ಇದನ್ನು ಅರ್ಥೈಸಿಕೊಂಡು ಉಭಯ ಪಕ್ಷಗಳ ಕಾರ್ಯಕರ್ತರನ್ನು ಕಾಂಗ್ರೆಸ್‌ನತ್ತ ಸೆಳೆಯಬೇಕು. ಮಂಡ್ಯ ವಿಧಾನಸಭಾ ಕ್ಷೇತ್ರದ ಅಭಿವೃದ್ದಿಗೆ ವಿವಿಧ ಇಲಾಖೆಗಳ ಅಡಿಯಲ್ಲಿ 400 ಕೋಟಿ ರೂ ಅನುದಾನ ವ್ಯಯಿಸಲಾಗುತ್ತಿದೆ. ಕಳೆದ 75 ವರ್ಷದಿಂದ ನನೆಗುದಿಗೆ ಬಿದ್ದಿದ್ದ ಅಭಿವೃದ್ದಿಗೆ ನನ್ನ ಅವಧಿಯಲ್ಲಿ ಚಾಲನೆ ನೀಡಲಾಗಿದೆ. ಪ್ರತಿ ಮನೆಗೆ ತೆರಳಿ ರಾಜ್ಯಸರ್ಕಾರದ ಅಭಿವೃದ್ದಿ ಯೋಜನೆಯನ್ನು ಮತದಾರರಿಗೆ ಮುಟ್ಟಿಸಬೇಕು. ಆಗ ಪಕ್ಷ ಬಲವರ್ಧನೆ ಆಗಲಿದೆ ಎಂದು ಸಲಹೆ ನೀಡಿದರು.