ಜಿಲ್ಲೆ

30ಕ್ಕೆ ಕಾಂಗ್ರೆಸ್ ಕಾರ್ಯಕರ್ತರ ಸಭೆ

ಕೆ.ಎಂ.ದೊಡ್ಡಿ: ಭಾರತೀನಗರ ಬ್ಲಾಕ್ ಕಾಂಗ್ರೆಸ್ ಸಮಿತಿ ಪರಿಶಿಷ್ಟ ಜಾತಿ ವಿಭಾಗ ವತಿಯಿಂದ ಮೇ 30 ರಂದು ಇಲ್ಲಿನ ಸಿರಿ ಕನ್ವೆನ್ಷನ್ ಹಾಲ್‌ನಲ್ಲಿ ಕಾರ್ಯಕರ್ತರ ಸಭೆ ಆಯೋಜಿಸಲಾಗಿದೆ ಎಂದು ಕೆಪಿಸಿಸಿ ಸದಸ್ಯ ಚಿದಂಬರ ಮೂರ್ತಿ ತಿಳಿಸಿದರು.

ಮೇ 30 ರಂದು ಬೆಳಗ್ಗೆ 11 ಗಂಟೆಗೆ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಜಯಂತಿ ಆಚರಣೆ ಅಂಗವಾಗಿ ಭಾರತೀನಗರ ಬ್ಲಾಕ್ ಪರಿಶಿಷ್ಟ ಜಾತಿ ವಿಭಾಗದ ನೂತನ ಅಧ್ಯಕ್ಷರ ಪದಗ್ರಹಣ ಸಮಾರಂಭ ಸೇರಿದಂತೆ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದು ಸುದ್ದಿಗೋಷ್ಠಿಯಲ್ಲಿ ವಿವರಿಸಿದರು.

ನಿಯೋಜಿತ ಅಧ್ಯಕ್ಷ ಅಮೀನ್ ಶಿವಲಿಂಗಯ್ಯ ಅವರು ಅಧಿಕಾರ ಸ್ವೀಕಾರದ ಜತೆಗೆ ಪದಗ್ರಹಣ ಸಮಾರಂಭದಲ್ಲಿ ಕಾರ್ಯಕಾರಿ ಸಮಿತಿಯ ಪದಾಧಿಕಾರಿಗಳಿಗೆ ಆದೇಶ ಪತ್ರ ವಿತರಣಾ ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮನ್ಮುಲ್ ನಿರ್ದೇಶಕ ಹರೀಶ್‌ಬಾಬು ಅವರಿಗೆ ಅಭಿನಂದನೆ ಜತೆಗೆ ಬೃಹತ್ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶವನ್ನು ಹಮ್ಮಿಕೊಳ್ಳಲಾಗಿದ್ದು ಕಾಂಗ್ರೆಸ್ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕು ಕರೆ ನೀಡಿದರು.

ಬ್ಲಾಕ್ ಕಾಂಗ್ರೆಸ್‌ನ ಪರಿಶಿಷ್ಟ ಜಾತಿ ವಿಭಾಗ ವತಿಯಿಂದ ಸಂವಿಧಾನ ಶಿಲ್ಪಿ ಡಾ.ಬಿ.ಆರ್ ಅಂಬೇಡ್ಕರ್ ಅವರ 134ನೇ ಜಯಂತಿ ಕಾರ್ಯಕ್ರಮದ ಪ್ರಯುಕ್ತ ಭಾರತೀನಗರದ- ಮಂಡ್ಯ ರಸ್ತೆಯಿಂದ ಬಾಬಾ ಸಾಹೇಬ್ ಡಾ.ಬಿ.ಆರ್ ಅಂಬೇಡ್ಕರ್ ಅವರ ಭಾವಚಿತ್ರವನ್ನು ಬೆಳ್ಳಿ ರಥದಲ್ಲಿ ಇರಿಸಿ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಲಾಗುವುದು ಎಂದರು.

ಕಾರ್ಯಕ್ರಮವನ್ನು ಶಾಸಕ ಕದಲೂರು ಉದಯ್ ಉದ್ಘಾಟಿಸಲಿದ್ದು, ಮಂಡ್ಯ ಜಿಲ್ಲಾ ಕಾಂಗ್ರೆಸ್ ಸಮಿತಿಯ ಜಿಲ್ಲಾಧ್ಯಕ್ಷ ಹಾಗೂ ಮೈಸೂರು ಸಕ್ಕರೆ ಕಾರ್ಖಾನೆ ಅಧ್ಯಕ್ಷ ಸಿ.ಡಿ ಗಂಗಾಧರ್ ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ವಿಧಾನ ಪರಿಷತ್ ಸದಸ್ಯ ದಿನೇಶ್ ಗೂಳಿಗೌಡ, ಮಂಡ್ಯ ಜಿಲ್ಲಾ ಗ್ಯಾರಂಟಿ ಯೋಜನೆಗಳ ಉಪಾಧ್ಯಕ್ಷ ಕಾಂಗ್ರೆಸ್ ಮುಖಂಡ ಸ್ಟಾರ್ ಚಂದ್ರು, ಜಿಲ್ಲಾ ಪರಿಶಿಷ್ಟ ಕಾಂಗ್ರೆಸ್ ವಿಭಾಗ ಜಿಲ್ಲಾಧ್ಯಕ್ಷ ಶ್ರೀಧರ್ ಆಗಮಿಸಲಿದ್ದಾರೆ ಎಂದರು.

ಜಿ.ಪಂ.ಮಾಜಿ ಅಧ್ಯಕ್ಷರಾದ ಬಿ. ಬಸವರಾಜು, ಸುರೇಶ್ ಕಂಠಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಣ್ಣೂರು ರಾಜೀವ್ ಅವರು ಉಪಸ್ಥಿತರಿರಲಿದ್ದು, ಭಾರತಿ ಕಾಲೇಜಿನ ನಿವೃತ್ತ ಪ್ರಾಧ್ಯಾಪಕ ಪ್ರೊ.ಬಿ.ಬೋರೇಗೌಡ ಅವರು ಡಾ.ಬಿ.ಆರ್ ಅಂಬೇಡ್ಕರ್ ಅವರ ವಿಚಾರ ಮಂಡಿಸಲಿದ್ದು ಕಾಂಗ್ರೆಸ್ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಬೇಕಾಗಿ ಮನವಿ ಮಾಡಿದರು.

ಭಾರತಿನಗರ ಬ್ಲಾಕ್ ಎಸ್ಸಿ ವಿಭಾಗದ ಅಧ್ಯಕ್ಷ ಅಮೀನ್ ಶಿವಲಿಂಗಯ್ಯ, ಮಾಜಿ ಅಧ್ಯಕ್ಷ ಮುಡಿನಹಳ್ಳಿ ತಿಮ್ಮಯ್ಯ, ಗ್ರಾ. ಪಂ ಸದಸ್ಯ ಈ.ರುದ್ರಯ್ಯ, ಆರೋಗ್ಯ ರಕ್ಷಾ ಸಮಿತಿ ಸದಸ್ಯ ಗುಡಿಗೆರೆ ಪ್ರಸಾದ್, ಅಣ್ಣೂರು ಚಿನ್ನಸ್ವಾಮಿ, ನಿರಂಜನ್, ರಾಮಣ್ಣ, ಕೆಂಪರಾಜು ಕ್ಯಾತಘಟ್ಟ ಸುನೀಲ್, ಅಲಭುಜನಹಳ್ಳಿ ಓಂಪ್ರಕಾಶ್, ಮಹೇಶ್ ಸೇರಿದಂತೆ ಮತ್ತಿತರಿದ್ದರು.