ಜಿಲ್ಲೆ

ಸಂಡೂರಿನಲ್ಲಿ ಗೆದ್ದು ಬೀಗಿದ ಕಾಂಗ್ರೆಸ್

ಎಸ್.ಎರ್ರಿಸ್ವಾಮಿ

ಬಳ್ಳಾರಿ : ರಾಜ್ಯದಲ್ಲಿ ತೀವ್ರ ಜಿದ್ದಾಜಿದ್ದಿಗೆ ಕಾರಣವಾಗಿದ್ದ ಸಂಡೂರು ವಿಧಾನಸಭಾ ಉಪಚುನಾವಣೆಯಲ್ಲಿ ನಿರೀಕ್ಷೆಯಂತೆ ಕಾಂಗ್ರೆಸ್ ಗೆದ್ದು ಬಿಗಿದೆ. ಕಮಲ ಪಡೆ ನಿರೀಕ್ಷಿತ ಪೈಪೋಟಿ ನೀಡಿದರೂ ವಿಜಯಮದ ಮಾಲೆ ಕೈ ಪಡೆ ಸೇರಿದೆ.

ಕಾಂಗ್ರೆಸ್ ಪಕ್ಷದ ಸಂಘಟಿತ ಹೋರಾಟ, ಸಚಿವ ಸಂತೋಷ ಲಾಡ್ ತವರಿನ ಮೇಲೆ ಬಿಗಿ ಹಿಡಿತ, ಸಿಎಂ ಸಿದ್ದರಾಮಯ್ಯ ಗ್ಯಾರಂಟಿ ಯೋಜನೆಗಳ ಮೂಲಕ ಅಹಿಂದ ಮತ ಸೆಳೆತ, ಸಂಸದ ಈ.ತುಕಾರಾಮ್ ಕ್ಷೇತ್ರದ ಅಭಿವೃದ್ಧಿ ವಿಷಯಗಳ ಮುಂದಿಟ್ಟುಕೊಂಡು ಪ್ರಚಾರ ನಡೆಸಿದ್ದು ಕಾಂಗ್ರೆಸ್ ಗೆಲುವಿಗೆ ಪ್ರಮುಖ ಪಾತ್ರ ವಹಿಸಿವೆ. ಸ್ಥಳೀಯ ಬಿಜೆಪಿಯ ನಾಯಕರಲ್ಲಿ ಮೂಡದ ಒಮ್ಮತ, ಮೂಲ ಬಿಜೆಪಿಗರಿಗೆ ಅಸಮಾಧಾನ ಮೂಡಿಸಿದ್ದ ಮಾಜಿ ಸಚಿವ ಜಿ.ಜನಾರ್ದನರೆಡ್ಡಿ ನಾಯಕತ್ವ , ಬೆಂಬಲಿಗರಿಗೆ ಟಿಕೆಟ್ ನಿರಾಕರಣೆಯಿಂದ ಬಂಡಾಯದ ಬಾವುಟ ಹಾರಿಸಿದ್ದ ಕೆ.ಘೋರ್ಪಡೆ, ಬಿಜೆಪಿ ಗೆದ್ದರೆ ಗಣಿ ಮೇಲೆ ರೆಡ್ಡಿ ಕಣ್ಣು ಎಂಬ ಭೀತಿಯಿಂದ ಬಿಜೆಪಿ ಬೆಂಬಲಿಸದ ಗಣಿ ಮಾಲೀಕರು, ಅಭ್ಯರ್ಥಿ ಕ್ಷೇತ್ರದ ಹೊರಗಿನವರ ಎಂಬುದು ಮತದಾರರಲ್ಲಿ ಮೂಡಿದ ನಂಬಿಕೆ. ಈ ಎಲ್ಲ ಪ್ರಮುಖ ಕಾರಣಗಳಿಂದ ಸಂಡೂರಿನಲ್ಲಿ ಮತದಾರರು ಈ ಬಾರಿಯೂ ಕೂಡ ಕಮಲ ಅರಳಲು ಅವಕಾಶ ನೀಡಲಿಲ್ಲ.

ಮತಗಳ ವಿವರ : ಈ.ಅನ್ನಪೂರ್ಣ(ಕಾಂಗ್ರೆಸ್) 93616, ಬಂಗಾರು ಹನುಮಂತು (ಬಿಜೆಪಿ) 83697, ಎನ್.ಅಂಜಿನಪ್ಪ (ಕೆಜಿಪಿ) 632, ಪಕ್ಷೇತರ ಅಭ್ಯರ್ಥಿಗಳಾದ ಟಿ.ಎಂ.ಮಾರುತಿ 211, ಟಿ.ಎರ‌್ರಿಸ್ವಾಮಿ 278, ಎನ್.ವೆಂಕಣ್ಣ 461 ಮತಗಳನ್ನು ಪಡೆದಿದ್ದಾರೆ. ನೋಟಾಕ್ಕೆ 1040 ಮತಗಳು ಚಲಾವಣೆಯಾಗಿವೆ. ಪಕ್ಷೇತರ ಅಭ್ಯರ್ಥಿಗಳಿಂತ ನೋಟಾಕ್ಕೆ ಹೆಚ್ಚು ಮತಗಳು ಚಲಾವಣೆಯಾಗಿವೆ. ಕಾಂಗ್ರೆಸ್ ಅಭ್ಯರ್ಥಿ ಈ.ಅನ್ನಪೂರ್ಣ ಬಿಜೆಪಿಯ ಅಭ್ಯರ್ಥಿಗಿಂತ 9,649 ಅಂತರದಲ್ಲಿ ಶೇ. 51.95% ಮತ ಪಡೆದು ಜಯಗಳಿಸಿದ್ದಾರೆ.

ಬಿಜೆಪಿಗೆ ವರವಾಗದ ತಂತ್ರಗಾರಿಕೆ : ಸಂಡೂರಿನಲ್ಲಿ ಬಿಜೆಪಿಯ ಉಸ್ತುವಾರಿ ಹೊತ್ತಿದ್ದ ಮಾಜಿ ಸಚಿವ ಜಿ.ಜನಾರ್ದನರೆಡ್ಡಿ ಅಭ್ಯರ್ಥಿ ಗೆಲುವಿಗಾಗಿ ರಣತಂತ್ರ ಹೂಡಿದ್ದರು. ಕ್ಷೇತ್ರದಲ್ಲಿ ಗೃಹ ಪ್ರವೇಶ ಮಾಡಿ ಹೊರಗಿನವರು ಎಂಬ ಕಳಂಕ ಅಳಿಸಲು ಹೊರಟರು. ಪ್ರತಿ ಜಾತಿವಾರು ಸಭೆ ನಡೆಸಿ ಆಶ್ವಾಸನೆಗಳು ನೀಡಿದರು. ಆದರೆ, ರೆಡ್ಡಿ ಚುನಾವಣೆ ಉಸ್ತುವಾರಿ ವಹಿಸಿ ಕೊಂಡಿದ್ದರಿಂದ ಮೂಲ ಬಿಜೆಪಿಗರಿಗೆ ಅಸಮಾಧಾನದವಿತ್ತು. ಅಲ್ಲದೆ, ಬಿಜೆಪಿ ಅಭ್ಯರ್ಥಿ ಗೆದ್ದರೆ ಕ್ಷೇತ್ರದ ಅಪಾರ ಗಣಿ ಸಂಪತ್ತು ಲೂಟಿಯಾಗುತ್ತದೆ ಎಂಬ ಭಯದಿಂದ ಗಣಿ ಮಾಲೀಕರು ಬಿಜೆಪಿಗೆ ಮನ್ನಣೆ ಹಾಕಲು ಒಲವು ತೋರಲಿಲ್ಲ. ಕ್ಷೇತ್ರದಲ್ಲಿ ರಾಜ್ಯ ಹಾಗೂ ಕೇಂದ್ರ ನಾಯಕರು ಕ್ಷೇತ್ರಕ್ಕೆ ಪ್ರಚಾರಕ್ಕೆ ಆಗಮಿಸುತ್ತಿದ್ದ ವೇಳೆ ಮಾತ್ರ ಮಾಜಿ ಸಚಿವ ಬಿ.ಶ್ರೀರಾಮುಲು ಕಾಣಿಸಿಕೊಳ್ಳುತ್ತಿದ್ದರು. ಉಳಿದಲ್ಲೆ ಬಾರಿ ರೆಡ್ಡಿ ಏಕಾಂಗಿಯಾಗಿ ಪ್ರಚಾರ ನಡೆಸುತ್ತಿದ್ದರು. ಜಿಲ್ಲೆಗೆ ರೆಡ್ಡಿ ಆಗಮನ ಶ್ರೀರಾಮುಲುಗೆ ಇರುಸು ಮುರಿಸು ತಂದಿದೆ ಎಂಬುದು ವ್ಯಾಪಕ ಹರಡಿತ್ತು. ಟಿಕೆಟ್ ಕೈ ತಪ್ಪಿದ್ದರಿಂದ ಬಂಡಾಯದ ಬಾವುಟ ಹಾರಿಸಿದ್ದ ಕೆ.ಎಸ್.ದಿವಾಕರ್‌ಗೆ ಪಕ್ಷದಲ್ಲಿ ಸ್ಥಾನ ಕಲ್ಪಿಸಿ ಮನವೋಲಿಸುವಲ್ಲಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಯಶ್ವಸಿಯಾದರು. ಆದರೆ, ಸ್ಥಳೀಯ ರಾಜಮನೆತನದ ಕೆ.ಘೋರ್ಪಡೆ ಅವರನ್ನು ಮನವೋಲಿಸುವಲ್ಲಿ ಬಿಜೆಪಿ ನಾಯಕರ ಕೈ ಆಗಲಿಲ್ಲ. ಸ್ವತಃ ಮಾಜಿ ಬಿ.ಎಸ್.ಯಡಿಯೂರಪ್ಪ, ವಿರೋಧ ಪಕ್ಷದ ನಾಯಕ ಆರ್.ಅಶೋಕ, ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ, ಸಿ.ಟಿ. ರವಿ ನಾಯಕರ ಮಾತಿಗೂ ಘೋರ್ಪಡೆ ಸೊಪ್ಪ ಹಾಕಲಿಲ್ಲ. ಆದ್ದರಿಂದ, ಸ್ಥಳೀಯ ಹಾಗೂ ಅಹಿಂದ ಮತಗಳನ್ನು ಸೆಳೆಯುವಲ್ಲಿ ಬಿಜೆಪಿ ಹಿನ್ನಡೆ ಅನುಭವಿಸಿತು. ಅಖಂಡ ಜಿಲ್ಲೆಯ ಮಾಜಿ ಶಾಸಕರಾದ ಆನಂದ ಸಿಂಗ್, ಸುರೇಶಬಾಬು, ಜಿ.ಸೋಮಶೇಖರರೆಡ್ಡಿ, ಎಂ.ಎಸ್.ಸೋಮಲಿಂಗಪ್ಪ ಸೇರಿದಂತೆ ಹಲವು ನಾಯಕರು ಪ್ರಚಾರದಲ್ಲಿ ಕಾಣಿಸಿಕೊಳ್ಳದೆ ಇರುವುದು ಬಿಜೆಪಿಯಲ್ಲಿಯೇ ಒಮ್ಮತ ಇಲ್ಲ ಎಂಬುದು ಮತದಾರರಲ್ಲಿ ಮೂಡಿತು.

ಕಾಂಗ್ರೆಸ್‌ಗೆ ಪ್ಲಸ್ ಅಹಿಂದ ತಂತ್ರ : ಕಾರ್ಮಿಕ ಸಚಿವ ಸಂತೋಷ ಲಾಡ್ ಕ್ಷೇತ್ರದ ಬಿಗಿ ಹಿಡಿತದಿಂದ ಕಾಂಗ್ರೆಸ್ ಮತಗಳು ಚದುರದಂತೆ ಕಾಪಾಡಿಕೊಂಡರು. ಆರಂಭದಲ್ಲಿಯೇ ಟಿಕೆಟ್‌ನಲ್ಲಿ ಎದ್ದಿದ್ದ ಕುಟುಂಬ ರಾಜಕಾರಣ ವಿರೋಧದ ಬಂಡಾಯವನ್ನು ಶಮನಗೊಳಿಸಿದರು. ಕ್ಷೇತ್ರದಲ್ಲಿ ಎಸ್‌ಸಿ, ಎಸ್ಟಿ , ಕುರುಬ, ಮುಸ್ಲಿಂ ಮತಗಳೇ ನಿರ್ಣಯಕ ಎಂಬ ಅಂಶ ತಿಳಿದಿದ್ದ ಕಾಂಗ್ರೆಸ್ ಜಾತಿವಾರು ಮತಗಳು ಸೆಳೆಯಲು ಮುಂದಾದರು. ಜಾತಿವಾರು ಸಚಿವರನ್ನು ಕ್ಷೇತ್ರಕ್ಕೆ ಕರೆಸಿ ಮತ ಯಾಚಿಸಿದರು. ಸಿಎಂ ಸಿದ್ದರಾಮಯ್ಯ ಮೂರು ದಿನ ಕ್ಷೇತ್ರದ್ಯಾಂತ ಅಬ್ಬರ ಪ್ರಚಾರದಲ್ಲಿ ಗ್ಯಾರಂಟಿ ಯೋಜನೆಗಳ ಪ್ರಸ್ತಾಪಿಸಿ ಕಾಂಗ್ರೆಸ್‌ನತ್ತ ವಾಲಿಸಿದರು. ಡಿಸಿಎಂ ಡಿ.ಕೆ. ಶಿವಕುಮಾರ ಅವಳಿ ಜಿಲ್ಲೆಯ ಶಾಸಕರೊಂದಿಗೆ ಸಭೆ ನಡೆಸಿ ಕೆಲವೊಂದು ಕ್ಷೇತ್ರಗಳ ಜವಾಬ್ದಾರಿ ವಹಿಸಿದರು. ಇದರಿಂದ ಕಾಂಗ್ರೆಸ್ ಪಕ್ಷ ಸಂಘಟಿತ ಹೋರಾಟ ನಡೆಸಿದ್ದರಿಂದ ಸತತ ಐದನೇ ಬಾರಿಗೆ ಸಂಡೂರು ಕೈವಶವಾಯಿತು.

ಹಾವು ಏಣಿ ಆಟ : ಇಲ್ಲಿನ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ನಡೆದ ಮತ ಎಣಿಕೆಯಲ್ಲಿ ಆರಂಭದ ಎರಡು ಸುತ್ತುಗಳಲ್ಲಿ ಎರಡು ಸಾವಿರಕ್ಕೂ ಅಧಿಕ ಮತಗಳು ಕಾಂಗ್ರೆಸ್ ಮುನ್ನಡೆ ಕಾಯ್ದುಕೊಂಡಿತು. ಬಳಿಕ ಐದನೇ ಸುತ್ತಿನವರಿಗೆ ಮುನ್ನಡೆ ಕಾಯ್ದುಕೊಂಡರಾದರೂ ಅಂತರ ಕುಸಿದು ಆರನೇ ಸುತ್ತಿನಲ್ಲಿ ಕಾಂಗ್ರೆಸ್ ಹಿಂದಿಕ್ಕಿ ಬಿಜೆಪಿ 411 ಮತಗಳ ಮುನ್ನಡೆ ಸಾಧಿಸಿತು. ನಂತರ ಏಳನೇ ಸುತ್ತಿನಲ್ಲಿ 867 ಮತಗಳ ಮುನ್ನಡೆ ಕಾಯ್ದುಕೊಂಡಿತ್ತು. ಎಂಟನೇ ಸುತ್ತಿನಲ್ಲಿ ಬಿಜೆಪಿ ಹಿಂದೆ ಬಿದ್ದು, ಕಾಂಗ್ರೆಸ್ 33 ಮತಗಳ ಅಂತರ ಮುನ್ನಡೆ ಪಡೆದಿತು. ತದನಂತರ ನಿಧಾನವಾಗಿ ಮತಗಳ ಗಳಿಕೆಯನ್ನು ಹೆಚ್ಚಿಸಿಕೊಂಡ ಕಾಂಗ್ರೆಸ್ ಅಂತಿಮವಾಗಿ ಕೊನೆಯ ಹತ್ತೊಂಬತ್ತನೇಯ ಸುತ್ತಿನ ಎಣಿಕೆ ಕಾರ್ಯ ಮುಗಿದ ವೇಳೆಗೆ 9,649 ಮತಗಳ ಅಂತರದಿಂದ ಜಯಗಳಿಸಿದರು. ಆದರೆ, ಈ ಚುನಾವಣೆಯಲ್ಲಿ ಬಿಜೆಪಿ ಸೋತರೂ ಕ್ಷೇತ್ರದಲ್ಲಿ ತಮ್ಮ ಮತಗಳ ಗಳಿಕೆಯನ್ನು ಹೆಚ್ವಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

ಬಾಕ್ಸ್ : ಮತ ಎಣಿಕೆ ವೇಳೆ ಈ. ಅನ್ನಪೂರ್ಣ ಅವರು ಕುಟುಂಬ ಸಮೇತ ಸಂಡೂರಿನ ಆಂಜನೇಯ ದೇವಸ್ಥಾನ, ನಗರ ಕನಕ ದುರ್ಗಮ್ಮ ದೇವಿಗೆ ವಿಶೇಷ ಪೂಜೆ ಸಲ್ಲಿಸಿದರು. ಬಿಜೆಪಿ ಅಭ್ಯರ್ಥಿ ಬಂಗಾರು ಹನುಮಂತು ಇನ್ನೂ ಎರಡು ಸುತ್ತು ಎಣಿಕೆಯ ಅಧಿಕೃತ ಘೋಷಣೆಗೆ ಮುನ್ನವೇ ಎಣಿಕೆ ಕೇಂದ್ರದಿಂದ ಹೊರ ನಡೆದರು.

ಕೋಟ್..... ಮತದಾನದ ಹಿಂದಿನ ದಿನವೇ ಗೃಹಲಕ್ಷ್ಮಿ ಯೋಜನೆಯ ಹಣವನ್ನು ಜಮೆ ಮಾಡಲಾಗಿದೆ. ಸಿಎಂ ಬಹಿರಂಗ ಸಭೆ ಹಾಗೂ ಪ್ರಚಾರಕ್ಕೂ ಜನರಿಗೆ ಹಣ ನೀಡಿ ಕರೆಸಿದ್ದಾರೆ. ಮುಸ್ಲಿಂ, ಕುರುಬ ಸಮುದಾಯದ ಮತಗಳು ಅಂಕಿ ಅಂಶಗಳ ಪ್ರಕಾರ ಸೋತರು ಗೆದ್ದಂತೆ.

- ಬಂಗಾರು ಹನುಮಂತು , ಪರಾಭವಗೊಂಡ ಬಿಜೆಪಿ ಅಭ್ಯರ್ಥಿ.

ಕೋಟ್... ಕ್ಷೇತ್ರದ ಮತದಾರರ ನಿರೀಕ್ಷೆಯಂತೆ ಅಭಿವೃದ್ದಿ ಮನ್ನಣೆ ನೀಡುವೆ. ಮುಂದಿನ ದಿನಗಳಲ್ಲಿ ಮಾದರಿ ಸಂಡೂರು ಮಾಡುವಲ್ಲಿ ಕೈಜೋಡಿಸುವೆ.

- ಅನ್ನಪೂರ್ಣ ತುಕಾರಾಮ್, ಗೆಲುವು ಸಾಧಿಸಿದ ಕಾಂಗ್ರೆಸ್ ಅಭ್ಯರ್ಥಿ.

ಕೋಟ್... ರಾಜ್ಯದಲ್ಲಿ ಮೂರು ಕಡೆ ಕಾಂಗ್ರೆಸ್ ಗೆದ್ದಿದೆ. ಎಲ್ಲ ಕಡೆಗಳಲ್ಲೂ ಸರ್ಕಾರ ಅಧಿಕಾರ ದುರುಪಯೋಗ ಮಾಡಿಕೊಂಡಿದೆ. ರಾಜ್ಯದಲ್ಲಿ ಆಡಳಿತ ಪಕ್ಷ ಇರುವ ಸಮಯದಲ್ಲಿ ಸಹಜವಾಗಿ ಆ ಪಕ್ಷದ ಅಭ್ಯರ್ಥಿಗಳೆ ಗೆಲ್ಲುವುದು ಸಾಮಾನ್ಯ ಈಗ ಅದೇ ಅಗಿದೆ.

- ಜಿ.ಜನಾರ್ದನರೆಡ್ಡಿ, ಮಾಜಿ ಸಚಿವ, ಹಾಲಿ ಶಾಸಕ, ಗಂಗಾವತಿ.