ಹುಬ್ಬಳ್ಳಿ : ಉಪ ಚುನಾವಣೆಯಲ್ಲಿ ಕಾಂಗ್ರೆಸ್ನವರು ಮಿತಿಮೀರಿ ಹಣದ ಹೊಳೆ ಹರಿಸಿ ಗೆಲುವು ಸಾಧಿಸಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ, ಸಂಸದ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯ ಕಾಂಗ್ರೆಸ್ ಸರ್ಕಾರದ 10 ಜನ ಸಚಿವರು ಹಾಗೂ 40 ಜನ ಶಾಸಕರು ಶಿಗ್ಗಾಂವಿ ಕ್ಷೇತ್ರದಲ್ಲಿಯೇ ಠಿಕಾಣಿ ಹೂಡಿದ್ದರು. ಸರ್ಕಾರಿ ಯಂತ್ರ, ಹಣದಿಂದ ಕಾಂಗ್ರೆಸ್ನವರು ಶಿಗ್ಗಾಂವಿ ಕ್ಷೇತ್ರ ಸೇರಿ ಮೂರೂ ಕ್ಷೇತ್ರದಲ್ಲಿ ಗೆದ್ದಿದ್ದಾರೆ ಎಂದು ಟೀಕಿಸಿದರು.
ಶಿಗ್ಗಾಂವಿ ಕ್ಷೇತ್ರದ ಜನರ ತೀರ್ಪನ್ನು ಒಪ್ಪಿಕೊಳ್ಳುತ್ತೇನೆ. ಕಾಂಗ್ರೆಸ್ ಅಭ್ಯರ್ಥಿ ಯಾಸಿರ್ ಖಾನ್ ಪಠಾಣಗೆ ಅಭಿನಂದನೆ ಸಲ್ಲಿಸುತ್ತೇನೆ. ಕ್ಷೇತ್ರದ ಜನರ ಸ್ಪಂದನೆ ಗಮನಿಸಿದರೆ ಬಿಜೆಪಿ ಅಭ್ಯರ್ಥಿ ಗೆಲ್ಲುವ ಭರವಸೆ ಇತ್ತು ಎಂದರು.
ಸಾಮಾನ್ಯವಾಗಿ ಉಪ ಚುನಾವಣೆಯಲ್ಲಿ ಆಡಳಿತಾರೂಢ ಸರ್ಕಾರದ ಪರ ವಾತಾವರಣ ಇರುತ್ತದೆ. ಬಿಜೆಪಿ ಸಹ ಒಂದು ಸಮಯದಲ್ಲಿ 17 ಉಪ ಚುನಾವಣೆಯಲ್ಲಿ 13 ಕ್ಷೇತ್ರಗಳಲ್ಲಿ ಗೆದ್ದಿತ್ತು. ಉಪ ಚುನಾವಣೆಯ ಗೆಲುವನ್ನು ಸರ್ಕಾರದ ಸಾಧನೆಯೆಂದು ಬಿಂಬಿಸುವ ಅಗತ್ಯವಿಲ್ಲ. ಒಂದೂವರೆ ವರ್ಷದ ಸರ್ಕಾರದ ಆಡಳಿತಕ್ಕೆ ಸಿಕ್ಕ ಫಲವೆಂದು ಭಾವಿಸುವ ಅವಶ್ಯಕತೆಯೂ ಇಲ್ಲ. ಇಡೀ ಸರ್ಕಾರ ಈ ಉಪ ಚುನಾವಣೆಗೆ ಇಳಿದು, ಸರ್ಕಾರಿ ಯಂತ್ರ ದುರುಪಯೋಗಪಡಿಸಿಕೊಂಡಿದ್ದಕ್ಕೆ ಗೆಲುವು ಸಿಕ್ಕಿದೆಯಷ್ಟೇ ಎಂದರು.
ಮಹಾರಾಷ್ಟ್ರದಲ್ಲಿ ನಿರೀಕ್ಷೆಯಂತೆ ಬಿಜೆಪಿಗೆ ಬಹುಮತ ಲಭಿಸಿದೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವ, ಮೂರು ಪಕ್ಷಗಳ ಒಗ್ಗಟ್ಟಿನಿಂದ, ಕಳೆದ ಮೂರು ವರ್ಷದ ಸರ್ಕಾರದ ಸಾಧನೆ, ಅಭಿವೃದ್ಧಿ ಮೇಲೆ ಜಯ ಸಿಕ್ಕಿದೆ. ಕೇಂದ್ರದಲ್ಲಿ ವಿರೋಧ ಪಕ್ಷವಾದ ಕಾಂಗ್ರೆಸ್ಗೆ ಮಹಾರಾಷ್ಟ್ರದ ಜನ ತಕ್ಕ ಪಾಠ ಕಲಿಸಿದ್ದಾರೆ. ಕಾಂಗ್ರೆಸ್ನವರಿಗೆ ಅವರ ಸ್ಥಾನವೇನೆಂದು ಅಲ್ಲಿನ ಜನ ತೋರಿಸಿದ್ದಾರೆ ಎಂದು ಟೀಕಿಸಿದರು.