ಜಿಲ್ಲೆ

ಬಳ್ಳಾರಿ, ಬಿಜೆಪಿ ಒಳಜಗಳದಿಂದ ಕಾಂಗ್ರೆಸ್ ಗೆಲವು

ಎಸ್.ಎರ್ರಿಸ್ವಾಮಿ

ಬಳ್ಳಾರಿ : ಸಂಡೂರು ಕ್ಷೇತ್ರದಲ್ಲಿ ಬಿಜೆಪಿಯ ಒಳಜಗಳದಿಂದ ಸತತ ನಾಲ್ಕು ಬಾರಿ ಕಾಂಗ್ರೆಸ್ ಗೆದ್ದಿದೆ ಎಂದು ಬಿಜೆಪಿ ಮುಖಂಡ ಕೆ. ಎಸ್. ದಿವಾಕರ್ ಹೇಳಿದರು.

ನಗರದ ಬಿಜೆಪಿ ಕಚೇರಿಯಲ್ಲಿ ಬುಧವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಬಿಜೆಪಿಯಿಂದ ಟಿಕೆಟ್ ತಪ್ಪಲು ಯಾರು ಕಾರಣ ಎಂಬುದು ದೇವರಿಗೆ ಗೊತ್ತು. ಟಿಕೆಟ್ ತಪ್ಪಿರುವುದು ನಿಜಕ್ಕೂ ಬೇಸರ ಮೂಡಿಸಿದೆ. ಆದರೆ, ಪಕ್ಷದ ನಿರ್ಧಾರಕ್ಕೆ ಬದ್ಧನಾಗಿರುವೆ. ಶಾಸಕ ಜಿ. ಜನಾರ್ದನೆರೆಡ್ಡಿ ವ್ಯಕ್ತಿಯಲ್ಲ ಶಕ್ತಿ ಅವರ ಜತೆಗಿದ್ದು ಸಂಡೂರು ಅಭ್ಯರ್ಥಿ ಗೆಲುವಿಗೆ ಶ್ರಮಿಸುವೆ. ಬಿಜೆಪಿಯಲ್ಲಿ ರಾಜ್ಯ ಕಾರ್ಯದರ್ಶಿ ಸ್ಥಾನ ನೀಡಿರುವುದು ಸಂತಸ ತಂದಿದೆ ಎಂದರು.

ಮಾಜಿ ಸಚಿವ ಜಿ. ಜನಾರ್ದನರೆಡ್ಡಿ ಮಾತನಾಡಿ, ಬಿಜೆಪಿಯಿಂದ ಟಿಕೆಟ್ ತಪ್ಪಿದ ಕೂಡಲೇ ಹಲವು ಕಾಂಗ್ರೆಸ್ ನಾಯಕರು ದಿವಾಕರ್ ಕರೆ ಮಾಡಿರುವುದು ನಿಜ. ಅಲ್ಲದೆ, ಬೇರೆ ಬೇರೆ ಕಡೆಯಿಂದ ಒತ್ತಡ ತಂದು ಮನೆಗೆ ಕೂಡ ಆಗಮಿಸಿದ್ದರು. ಆದರೆ, ನಿಷ್ಠೆಯಿಂದ ದಿವಾಕರ್ ಪಕ್ಷ ಬಿಟ್ಟು ಹೋಗಿಲ್ಲ. ಬಿಜೆಪಿ ಅಭ್ಯರ್ಥಿ ಬಂಗಾರು ಹನುಮಂತು 2018ರಲ್ಲಿಯೇ ಬಂಡಾಯ ಎದ್ದು ಸ್ವತಂತ್ರ ಅಭ್ಯರ್ಥಿ ಹಾಗೂ 2023ರಲ್ಲಿ ಕೆಆರ್‌ಪಿಪಿ ಅಭ್ಯರ್ಥಿಯಾಗಿ ದಿವಾಕರ್ ಬಿಜೆಪಿ ವಿರುದ್ಧ ಸ್ಪರ್ಧಿಸಿದ್ದರು. ಆದರೆ, ಈ ಇಬ್ಬರು ಬಿಜೆಪಿಯ ಕಟ್ಟಾಳು ಕಾರ್ಯಕರ್ತರಾಗಿದ್ದರು. ಸದ್ಯ, ಟಿಕೆಟ್ ತಪ್ಪಿದ್ದರಿಂದ ರಾಜ್ಯ ಕಾರ್ಯದರ್ಶಿ ಸ್ಥಾನ ನೀಡಿದೆ. ಶಾಸಕ ಸ್ಥಾನಕ್ಕಿಂತಲೂ ಪಕ್ಷದ ಜವಾಬ್ದಾರಿ ದೊಡ್ಡದು. ಮುಂದಿನ ದಿನಗಳಲ್ಲಿ ಎಲ್ಲ ಸ್ಥಾನಮಾನ ದೊರೆಯಲಿದೆ. ಬಂಗಾರು ಹನುಮಂತು ಅ.25ರಂದು ನಾಮಪತ್ರ ಸಲ್ಲಿಕೆ ಮಾಡಲಿದ್ದಾರೆ ಎಂದರು.

ಚಿತ್ರದುರ್ಗದ ವಿಧಾನಪರಿಷತ್ ಸದಸ್ಯ ನವೀನ ಮಾತನಾಡಿದರು. ಬಳಿಕ, ಬಿಜೆಪಿ ರಾಜ್ಯ ಕಾರ್ಯದರ್ಶಿಯಾಗಿ ದಿವಾಕರ್ ಅವರನ್ನು ನೇಮಿಸಲಾಯಿತು. ಪ್ರಮುಖರಾದ ಮಾಜಿ ಶಾಸಕ ಜಿ. ಸೋಮಶೇಖರರೆಡ್ಡಿ, ಜಿಲ್ಲಾಧ್ಯಕ್ಷ ಅನಿಲ್‌ಕುಮಾರ ಮೋಕಾ, ಮುಖಂಡರಾದ ಎಚ್.ವೈ. ಹನುಮಂತಪ್ಪ, ಗುತ್ತಿಗೆನೂರು ವಿರುಪಾಕ್ಷಗೌಡ, ಐನಾಥರೆಡ್ಡಿ, ಮಲ್ಲೇಶ ಇದ್ದರು.