ಜಿಲ್ಲೆ

ಜಿಲ್ಲಾದ್ಯಂತ ಕಾಂಗ್ರೆಸ್ ವಿರುದ್ಧ ಪೋಸ್ಟರ್: ಭಾರತ್ ಜೋಡೋ ನಡೆಯುತ್ತಿರುವ ಬೆನ್ನಲ್ಲೇ ಬಿಜೆಪಿ ಅಭಿಯಾನ

reportermys

ಮಂಡ್ಯ: ಜಿಲ್ಲೆಯಲ್ಲಿ ಭಾರತ್ ಜೋಡೋ ನಡೆಯುತ್ತಿರುವ ಬೆನ್ನಲ್ಲೇ ಕಾಂಗ್ರೆಸ್ ವಿರುದ್ಧ ಬಿಜೆಪಿಯಿಂದ ಪೋಸ್ಟರ್ ಅಭಿಯಾನ ನಡೆಸಲಾಗುತ್ತಿದೆ.

ಬಿಜೆಪಿ ಜಿಲ್ಲಾ ವಕ್ತಾರ ಸಿ.ಟಿ.ಮಂಜುನಾಥ್ ನೇತೃತ್ವದಲ್ಲಿ ನಗರದ ವಿವಿಧೆಡೆ ಕಾಂಗ್ರೆಸ್ ಟೀಕಿಸಿ ಮುದ್ರಿಸಿರುವ ಪೋಸ್ಟರ್‌ಗಳನ್ನು ಅಂಟಿಸಲಾಯಿತು. ಈ ವೇಳೆ ಮಾತನಾಡಿದ ಅವರು, ನಗರ ಮತ್ತು ಗ್ರಾಮಾಂತರ ಪ್ರದೇಶಗಳಲ್ಲಿ ಪೋಸ್ಟರ್ ಅಭಿಯಾನ ನಡೆಸುವ ಮೂಲಕ ಕಾಂಗ್ರೆಸ್‌ನ ನಿಜ ಬಣ್ಣವನ್ನು ಜನತೆಗೆ ಬಯಲು ಮಾಡಲು ಹೊರಟಿದ್ದೇವೆ. ಅಧಿಕಾರ ಇದ್ದಾಗ ಅಭಿವೃದ್ಧಿ ಮಾಡದ ಕಾಂಗ್ರೆಸ್, ಈಗ ಅಭಿವೃದ್ಧಿ ಮಂತ್ರವನ್ನು ಜಪಿಸುತ್ತಿದೆ. ಅಧಿಕಾರಕ್ಕಾಗಿ ಕರ್ನಾಟಕವನ್ನು ಭ್ರಷ್ಟ ರಾಜ್ಯವನ್ನಾಗಿ ಮಾಡಲಾಗಿತ್ತೆಂದು ಅಭಿಯಾನದಲ್ಲಿ ಜಾಗೃತಿ ಮೂಡಿಸುತ್ತಿದ್ದೇವೆ ಎಂದು ಹೇಳಿದರು.

ಭ್ರಷ್ಟಾಚಾರ ನಡೆಸಿಲ್ಲ ಎಂದೇಳುವ ಕಾಂಗ್ರೆಸ್ಸಿಗರು, ಡಿ.ಕೆ.ಶಿವಕುಮಾರ್ ತಿಹಾರ್ ಜೈಲಿಗೆ ಹೋಗಿದ್ದು ಉನ್ನತ ಶಿಕ್ಷಣ ಅಧ್ಯಯನ ಮಾಡುವುದಕ್ಕೇನು?. ಯುವ ಅಧ್ಯಕ್ಷ ನಲಪಾಡ್ ಸ್ವಾತಂತ್ರ್ಯ ಚಳವಳಿ ಮಾಡಿ ಪರಪ್ಪನ ಅಗ್ರಹಾರಕ್ಕೆ ಪಾದಯಾತ್ರೆ ಮಾಡಿದ್ದರೇ?. ಶೇ.40 ಕಮೀಷನ್ ಬಗ್ಗೆ ದಾಖಲೆ ಇದ್ದರೆ ಲೋಕಾಯುಕ್ತ ಅಥವಾ ಯಾವುದೇ ಉನ್ನತ ತನಿಖಾ ಸಮಿತಿಗೆ ನೀಡಬೇಕು. ಅದು ಬಿಟ್ಟು ಗಾಳಿಯಲ್ಲಿ ಗುಂಡು ಹೊಡೆದಂತೆ ಜನಪರ ಕಾರ್ಯಕ್ರಮ ನೀಡುತ್ತಿರುವ ಬಿಜೆಪಿ ಸರ್ಕಾರದ ಮೇಲೆ ಗೂಬೆ ಕೂರಿಸುವುದು ಸರಿಯಲ್ಲ ಎಂದು ತಿಳಿಸಿದರು.

ನಗರಸಭೆ ನಾಮನಿರ್ದೇಶಿತ ಸದಸ್ಯರಾದ ಪ್ರಸನ್ನಕುಮಾರ್, ಶಿವಕುಮಾರ್, ಶಿವಲಿಂಗಯ್ಯ, ಚಂದ್ರು ಇತರರಿದ್ದರು.