ತಿ.ನರಸೀಪುರ ಡಾ.ಬಿ.ಆರ್.ಅಂಬೇಡ್ಕರ್ ಸಮುದಾಯ ಭವನದಲ್ಲಿ ಸಿಟಿಜನ್ಸ್ ಫಾರ್ ಸೋಶಿಯಲ್ ಜಸ್ಟೀಸ್ ಅಭಿಯಾನ ವತಿಯಿಂದ ಆಯೋಜಿಸಿದ್ದ ಸಂವಿಧಾನ ಸನ್ಮಾನ ಕಾರ್ಯಕ್ರಮವನ್ನು ಮಾಜಿ ಸಚಿವ ಎನ್.ಮಹೇಶ್ ಉದ್ಘಾಟಿಸಿದರು. ಎನ್.ವಿ.ಫಣೀಶ್, ಕರೋಹಟ್ಟಿ ಮಹದೇವಯ್ಯ, ಡಾ.ರೇವಣ್ಣ, ಕೆ.ಜಿ.ವೀರಣ್ಣ, ಕೆ.ಎನ್.ಪ್ರಭುಸ್ವಾಮಿ, ಸಿ.ಎಂ.ಪ್ರಕಾಶ್, ಶಿವಕುಮಾರ್(ಸತ್ಯರಾಜ್), ದಯಾನಂದ, ಮಲ್ಲಿಕಾರ್ಜುನಸ್ವಾಮಿ ಇದ್ದರು. hw-remosaic: 0; touch: (0.41770834, 0.41770834); modeInfo: ; sceneMode: Night; cct_value: 0; AI_Scene: (0, -1); aec_lux: 294.92093; hist255: 0.0; hist252~255: 0.0; hist0~15: 0.0; 
ಜಿಲ್ಲೆ

ಅಧಿಕಾರಕ್ಕಾಗಿ ಕಾಂಗ್ರೆಸ್‌ನಿಂದ ಸಂವಿಧಾನ ಉಲ್ಲಂಘನೆ

ಲೋಕೇಶ್ ಮನು. ಡಿ

ತಿ.ನರಸೀಪುರ: ಕುಟುಂಬದಲ್ಲಿಯೇ ರಾಜಕೀಯ ಅಧಿಕಾರವನ್ನು ಕೇಂದ್ರೀಕರಿಸಿಟ್ಟುಕೊಳ್ಳಲು ಹಲವು ದಶಕಗಳ ದೇಶದ ಆಡಳಿತ ನಡೆಸುವ ಮೂಲಕ ಕಾಂಗ್ರೆಸ್ ನೈಜ ಸಂವಿಧಾನವನ್ನು ಮುಚ್ಚಿಟ್ಟಿತ್ತು ಎಂದು ಸಿಟಿಜನ್ಸ್ ಫಾರ್ ಸೋಶಿಯಲ್ ಜಸ್ಟೀಸ್ ಅಭಿಯಾನದ ರಾಜ್ಯ ಸಹ ಸಂಚಾಲಕ ಎನ್.ವಿ.ಫಣೀಶ್ ಆರೋಪಿಸಿದರು.

ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ಸಮುದಾಯ ಭವನದಲ್ಲಿ ಶುಕ್ರವಾರ ಸಿಟಿಜನ್ಸ್ ಫಾರ್ ಸೋಶಿಯಲ್ ಜಸ್ಟೀಸ್ ಅಭಿಯಾನದ ವತಿಯಿಂದ ಆಯೋಜಿಸಿದ್ದ ಸಂವಿಧಾನ ದಿನದ ಸಂವಿಧಾನ ಸನ್ಮಾನ ಅಭಿಯಾನ ಕಾರ್ಯಕ್ರಮದಲ್ಲಿ ಮಾತನಾಡಿದರು.

ಜಗತ್ತಿನ ಅತ್ಯುನ್ನತ ಸಂವಿಧಾನವನ್ನು ದೇಶಕ್ಕೆ ನೀಡಿದ ಕೀರ್ತಿ ಅಂಬೇಡ್ಕರ್ ಅವರದ್ದಾಗಿ ಬಿಡುತ್ತದೆ ಎಂಬ ಭಯದಿಂದ ರಾಷ್ಟ್ರದ ಆಡಳಿತವನ್ನು ಕಪಿಮುಷ್ಠಿಯಲ್ಲಿ ಇಟ್ಟುಕೊಂಡಿದ್ದ ಕಾಂಗ್ರೆಸ್ ಸಂವಿಧಾನ ಮತ್ತು ಅಂಬೇಡ್ಕರ್ ಅವರನ್ನು ಜನರಿಗೆ ತಿಳಿಸಲೇ ಇಲ್ಲ ಎಂದು ದೂರಿದರು.

ಮಾಜಿ ಪ್ರಧಾನಿಗಳಾದ ನೆಹರು, ಇಂದಿರಾ ಗಾಂಧಿ ಹಾಗೂ ರಾಜೀವ ಗಾಂಧಿ ಅವರು ಅಧಿಕಾರದ ದುರಾಸೆಗೆ ತುರ್ತು ಪರಿಸ್ಥಿತಿ ಜಾರಿ ಮಾಡುವಾಗ ಹಾಗೂ ರಾಷ್ಟ್ರಪತಿಗಳ ನೇಮಕ ಸಂಬಂಧ ಸಂವಿಧಾನವನ್ನು ನೂರಾರು ಬಾರಿ ತಿದ್ದುಪಡಿ ಮಾಡಿ, ಆಡಳಿತ ವ್ಯವಸ್ಥೆಯನ್ನು ದುರ್ಬಲಗೊಳಿಸಿದ್ದಾರೆ. ಈಗಿನ ಪ್ರಧಾನಿ ನರೇಂದ್ರ ಮೋದಿ ಅವರು ಅಂಬೇಡ್ಕರ್ ಅವರು ವಿಶ್ವದ ಜ್ಞಾನದ ಸಂಕೇತವಾಗಬೇಕು ಎಂಬುದನ್ನು ಅಪೇಕ್ಷಿಸಿದ್ದರಿಂದಲೇ ಇಂದು ವಿಶ್ವಸಂಸ್ಥೆ ಬಾಬಾ ಸಾಹೇಬರ ಜನುಮದಿನವನ್ನು ವಿಶ್ವಜ್ಞಾನದ ದಿನವೆಂದು ಘೋಷಣೆ ಮಾಡಿದೆ. ಸಂವಿಧಾನವನ್ನು ದುರ್ಬಲಗೊಳಿಸಿದ ಕಾಂಗ್ರೆಸ್‌ನ ಸತ್ಯವನ್ನು ಜನರಿಗೆ ತಿಳಿಸಲು ಸಿಟಿಜನ್ಸ್ ಫಾರ್ ಸೋಶಿಯಲ್ ಜಸ್ಟೀಸ್ ಅಭಿಯಾನವನ್ನು ರಾಜ್ಯದಾದ್ಯಂತ ಆರಂಭಿಸಲಾಗಿದೆ ಎಂದು ಹೇಳಿದರು.

ನಿವೃತ್ತ ಶಸ್ತ್ರಚಿಕಿತ್ಸಕ ಡಾ.ರೇವಣ್ಣ ಮಾತನಾಡಿ, ಗೌತಮ ಬುದ್ಧ ಹಾಗೂ ಬಸವಣ್ಣ ಅವರ ಆಶಯದಂತೆ ಸರ್ವರಿಗೂ ಸಮಬಾಳು, ಸರ್ವರಿಗೂ ಸಮಪಾಲು ಎಂಬ ಧ್ಯೇಯದಡಿ ಅಂಬೇಡ್ಕರ್ ಅವರು ರಚಿಸಿರುವ ಸಂವಿಧಾನದಂತೆ ರಾಜಕೀಯ ಅಧಿಕಾರ ಎಲ್ಲ ಸಮುದಾಯಗಳಿಗೂ ಸಿಗಬೇಕು. ಭ್ರಷ್ಟಾಚಾರಮುಕ್ತ ಆಡಳಿತ ನಡೆಸಬೇಕು. ಆದರೆ ದೇಶವನ್ನು ಸುದೀರ್ಘ ಅವಧಿ ಆಡಳಿತ ನಡೆಸಿದ ರಾಜಕೀಯ ಪಕ್ಷ ಸಂವಿಧಾನವನ್ನು ಜಾರಿ ಮಾಡುವಲ್ಲಿ ಸಂಪೂರ್ಣ ವಿಫಲವಾಗಿದೆ ಎಂದು ಆಪಾದಿಸಿದರು.

ಕಾರ್ಯಕ್ರಮವನ್ನು ಮಾಜಿ ಸಚಿವ ಎನ್.ಮಹೇಶ್ ಉದ್ಘಾಟಿಸಿದರು. ಕಾಂಪೋಸ್ಟ್ ನಿಗಮದ ಮಾಜಿ ಅಧ್ಯಕ್ಷ ಎಸ್.ಮಹದೇವಯ್ಯ ಹಾಗೂ ಅಭಿಯಾನದ ಸಹ ಸಂಚಾಲಕಿ ಪ್ರಫುಲ್ಲಾ ಮಲ್ಲಾಡಿ ಮಾತನಾಡಿದರು. ದಲಿತ ಮುಖಂಡ ಎಸ್. ನಂಜುಂಡಯ್ಯ ಅಂಬೇಡ್ಕರ್ ಕುರಿತಾದ ಗೀತೆ ಪ್ರಸ್ತುತಪಡಿಸಿದರು. ವಕ್ತಾರ ದಯಾನಂದ ಪಟೇಲ್ ಅವರು ಸಂವಿಧಾನ ಪ್ರಸ್ತಾವನೆ ಬೋಧಿಸಿದರು. ಅಂಬೇಡ್ಕರ್ ಅಭಿವೃದ್ಧಿ ಸಂಘದ ಅಧ್ಯಕ್ಷ ಕರೋಹಟ್ಟಿ ಮಹದೇವಯ್ಯ ಅಧ್ಯಕ್ಷತೆ ವಹಿಸಿದ್ದರು.

ಜಿಲ್ಲಾ ಜನಜಾಗೃತಿ ಸಮಿತಿಯ ಅಧ್ಯಕ್ಷ ಕೆ.ಎನ್.ಪ್ರಭುಸ್ವಾಮಿ, ಕಬ್ಬು ಬೆಳೆಗಾರರ ಸಂಘದ ಕಾರ್ಯಾಧ್ಯಕ್ಷ ಕಿರಗಸೂರು ಶಂಕರ್, ರೈತ ಸಂಘದ ಅಧ್ಯಕ್ಷ ಬನ್ನೂರು ನಾರಾಯಣ್, ದಸಂಸ ಜಿಲ್ಲಾ ಸಂಚಾಲಕ ಸೋಸಲೆ ರಾಜಶೇಖರ್, ವೀರಶೈವ-ಲಿಂಗಾಯತ ಮಹಾಸಭಾದ ಅಧ್ಯಕ್ಷ ಸಿ.ಎಂ.ಪ್ರಕಾಶ್, ಬಾಬೂಜಿ ಸಂಘದ ಅಧ್ಯಕ್ಷ ಸಿ.ಪುಟ್ಟಯ್ಯ, ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಸೋಮಶೇಖರಪ್ಪ, ಸಂಸ್ಕೃತಿ ಮತ್ತು ಕಲೆ ವಿಭಾಗದ ಸಂಚಾಲಕ ಶಿವಕುಮಾರ್, ತಾಪಂ ಮಾಜಿ ಸದಸ್ಯ ಕೆ.ಜಿ.ವೀರಣ್ಣ, ಬಿಜೆಪಿ ಕ್ಷೇತ್ರಾಧ್ಯಕ್ಷ ಶಿವಕುಮಾರ್(ಸತ್ಯರಾಜ್), ಪ್ರಧಾನ ಕಾರ್ಯದರ್ಶಿ ಡಾ.ಟಿ.ಎಸ್.ಮಲ್ಲಿಕಾರ್ಜುನಸ್ವಾಮಿ, ಜಿಲ್ಲಾ ಉಪಾಧ್ಯಕ್ಷ ಎನ್.ಎಂ.ರಾಮಚಂದ್ರ, ಯುವ ಮೋರ್ಚಾದ ಅನಿಲ್ ಕುಮಾರ್ ತೊಟ್ಟವಾಡಿ, ಮುಖಂಡರಾದ ಬಿ.ಪಿ.ಪರಶಿವಮೂರ್ತಿ, ಬಿ.ಎನ್.ವಿಜಯಕುಮಾರ್, ಕೆ.ವಿ.ಶಿವಶಂಕರ್, ಅಂಗಡಿ ಪುಟ್ಟಸ್ವಾಮಿ, ಚೌಹಳ್ಳಿ ಸಿದ್ದರಾಜು, ಎಸ್.ರಾಜಶೇಖರ್ ಹಾಗೂ ಇತರರು ಇದ್ದರು.