ಚಿಕ್ಕಬಳ್ಳಾಪುರ: ರಾಜ್ಯ ಆಡಳಿತ ವ್ಯವಸ್ಥೆಯಲ್ಲಿ ಭ್ರಷ್ಟರ ಹೆಚ್ಚಳವಾಗಿ, ಹಣ ಲೂಟಿ ಮಾಡಲಾಗುತ್ತಿದೆ. ಬಿಹಾರ ಚುನಾವಣೆಗಾಗಿ ಕಾಂಗ್ರೆಸ್ ಹೈಕಮಾಂಡ್‌ಗೆ 2 ಸಾವಿರ ಕೋಟಿ ರೂ ಕಳುಹಿಸಿಕೊಡಲು ಕರ್ನಾಟಕದಲ್ಲಿ ಎಟಿಎಂ ಸರ್ಕಾರ ಬಳಕೆಯಾಗುತ್ತಿದೆ ಎಂದು ಸಂಸದ ಡಾ ಕೆ.ಸುಧಾಕರ್ ಆರೋಪಿಸಿದ್ದಾರೆ.
ಚಿಕ್ಕಬಳ್ಳಾಪುರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದ ಎಲ್ಲ ಸಚಿವರಿಗೆ ಟಾರ್ಗೆಟ್ ಫಿಕ್ಸ್ ಆಗಿದೆ. ಭ್ರಷ್ಟಾಚಾರಕ್ಕೆ ಫ್ರೀ ಹ್ಯಾಂಡ್ ನೀಡಲಾಗಿದೆ. ಇಲ್ಲಿನ ಜನರ ಹಣ ದೋಚಿ, ಹೈಕಮಾಂಡ್‌ಗೆ ಕಳುಹಿಸುವ ನಿಟ್ಟಿನಲ್ಲಿ ಕರ್ನಾಟಕ ಎಟಿಎಂ ಆಗಿದೆ. ಈ ಲೂಟಿಯನ್ನು ಕಾಂಗ್ರೆಸ್ ಸರ್ಕಾರ ನಿಲ್ಲಿಸಬೇಕು ಎಂದು ಒತ್ತಾಯಿಸಿದರು.
ರಾಜ್ಯದಲ್ಲಿ ಉಚಿತ ಗ್ಯಾರಂಟಿ ಯೋಜನೆಗಳ ಜಾರಿಯ ನಡುವೆ ಅಗತ್ಯ ವಸ್ತುಗಳ ಬೆಲೆಯನ್ನು ಹೆಚ್ಚಿಸಲಾಗಿದೆ. ಅಭಿವೃದ್ಧಿ ಕೆಲಸಗಳು ಕುಂಠಿತಗೊಂಡಿವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
*ಫಲಾನುಭವಿಗಳಿಗೆ ಚೆಕ್ ವಿತರಣೆ
ಚಿಕ್ಕಬಳ್ಳಾಪುರ ನಗರಸಭೆ ಸಭಾಂಗಣದಲ್ಲಿ ಕೈಗೊಂಡಿದ್ದ ಕಾರ್ಯಕ್ರಮದಲ್ಲಿ ಪ್ರಧಾನಮಂತ್ರಿ ಸ್ವನಿಧಿ ಯೋಜನೆ ಅಡಿಯಲ್ಲಿ 139 ಬೀದಿ ಬದಿ ವ್ಯಾಪಾರಿಗಳಿಗೆ ₹34.5 ಲಕ್ಷ ರೂ ಸಾಲದ ಚೆಕ್ಕುಗಳನ್ನು ಡಾ. ಸುಧಾಕರ್ ವಿತರಿಸಿದರು.
ಬೀದಿ ಬದಿ ವ್ಯಾಪಾರಿಗಳು ನಗರದ ವಹಿವಾಟಿನಲ್ಲಿ ಪ್ರಮುಖ ಪಾತ್ರ ವಹಿಸುತ್ತಾರೆ. ಇವರನ್ನು ಪ್ರೋತ್ಸಾಹಿಸಿ, ಆರ್ಥಿಕ ಚೇತನ ತುಂಬಲು ಪ್ರಧಾನಮಂತ್ರಿ ನರೇಂದ್ರ ಮೋದಿಯ ಮಹತ್ವಾಕಾಂಕ್ಷಿ ಯೋಜನೆಯ ಮೂಲಕ ಬೀದಿ ವ್ಯಾಪಾರಿಗಳಿಗೆ ಅಡಮಾನ ರಹಿತ, ಕಡಿಮೆ ಬಡ್ಡಿದರದ ಸುಲಭ ಸಾಲವನ್ನು ಒದಗಿಸಲಾಗುತ್ತಿದೆ. ಇದರ ಮೂಲಕ ಆತ್ಮನಿರ್ಭರ ಗುರಿ ಸಾಧನೆಯ ಉದ್ದೇಶವನ್ನು ಹೊಂದಲಾಗಿದೆ. ದೇಶಾದ್ಯಂತ ಈಗಾಗಲೇ 68 ಲಕ್ಷಕ್ಕೂ ಹೆಚ್ಚು ವ್ಯಾಪಾರಿಗಳು ಯೋಜನೆ ಲಾಭ ಪಡೆದಿದ್ದಾರೆ ಎಂದರು.
*ಜಿಎಸ್‌ಟಿ ಲಾಭ ಜಾಗೃತಿ
ಸಂಸದರ ನೇತೃತ್ವದಲ್ಲಿ ಜಿಲ್ಲಾ ಕೇಂದ್ರದಲ್ಲಿ ಜಿಎಸ್‌ಟಿ ಸುಧಾರಣೆಯ ಬಗ್ಗೆ ಜಾಗೃತಿ ಅಭಿಯಾನವನ್ನು ಕೈಗೊಳ್ಳಲಾಯಿತು. ಜನೌಷಧ ಮಳಿಗೆ, ಹಾರ್ಡ್ ವೇರ್, ಕಟ್ಟಡ ಸಾಮಗ್ರಿ, ಸ್ಟೇಷನರಿ ಸೇರಿದಂತೆ ವಿವಿಧ ಅಂಗಡಿ ಮಳಿಗೆಗಳಿಗೆ ತೆರಳಿ ಕಟ್ಟಡದ ಮೇಲೆ ಸ್ಟಿಕ್ಕರ್ ಅಂಟಿಸಲಾಯಿತು. ವ್ಯಾಪಾರಿಗಳು ಹಾಗೂ ಗ್ರಾಹಕರಿಂದ ಜಿಎಸ್ ಟಿ ವಿನಾಯಿತಿ ಘೋಷಣೆಯ ಲಾಭದ ಬಗ್ಗೆ ಮಾಹಿತಿ ಸಂಗ್ರಹಿಸಲಾಯಿತು.
ಜಿಎಸ್‌ಟಿ ಸುಧಾರಣೆಗಳಿಂದ ಜನಸಾಮಾನ್ಯರಿಗೆ ಪ್ರತಿಯೊಂದು ವಸ್ತುವಿನಲ್ಲೂ ಆರ್ಥಿಕ ಉಳಿತಾಯ ಹೆಚ್ಚಳವಾಗುತ್ತಿದೆ. ವ್ಯಾಪಾರ ವಹಿವಾಟಿಗೆ ಹೊಸ ಚೈತನ್ಯ ಬಂದಿದೆ. ಈ ಜನಪರ ಘೋಷಣೆಗೆ ಮೆಚ್ಚುಗೆ ವ್ಯಕ್ತವಾಗುತ್ತಿದೆ ಎಂದು ಸಂತಸ ವ್ಯಕ್ತಪಡಿಸಿದರು.