ಉಡುಪಿ: ರಾಜ್ಯಾದ್ಯಂತ ವಿವಿಧ ಸಂಘಟನೆಗಳ ಆಶ್ರಯದಲ್ಲಿ ರಾಜ್ಯ ಸರ್ಕಾರದ ವಿರುದ್ಧ ಜನತೆಯ ಒಕ್ಕೊರಲ ಕೂಗು ನಾವು ಬದುಕಬೇಕು (ವೀ ಶುಡ್ ಆಲ್ಸೋ ಲಿವ್) ಘೋಷ ವಾಕ್ಯದೊಂದಿಗೆ ಖಾಲಿ ತಟ್ಟೆ ಹಾಗೂ ಚೀಲ ಪ್ರದರ್ಶನ ಅಂಗವಾಗಿ ಜಿಲ್ಲಾ ಕಾಂಗ್ರೆಸ್ ಭವನದಲ್ಲಿ ಸೋಮವಾರ ಪ್ರತಿಭಟನೆ ನಡೆಯಿತು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು ಮಾತನಾಡಿ, ಕರೊನಾ ಚಿಕಿತ್ಸೆಯ ಸಂಪೂರ್ಣ ವೆಚ್ಚ ಸರ್ಕಾರ ಭರಿಸಬೇಕು. ತ್ವರಿತಗತಿಯಲ್ಲಿ ವ್ಯಾಕ್ಸಿನ್ ವ್ಯವಸ್ಥೆ ಮಾಡಬೇಕು. ಗ್ರಾಮ ಪಂಚಾಯಿತಿ ಮಟ್ಟದಲ್ಲೂ ಕೋವಿಡ್ ಕೇರ್ ಸೆಂಟರ್ ಸ್ಥಾಪಿಸಬೇಕು. ಮೃತರ ಕುಟುಂಬಗಳಿಗೆ 5 ಲಕ್ಷ ರೂ. ಪರಿಹಾರ ನೀಡಬೇಕು. ಎಲ್ಲ ಬಡವರಿಗೂ ತಿಂಗಳ ಸಮಗ್ರ ದಿನಸಿ ಹಾಗೂ 5 ಸಾವಿರ ರೂ. ನೆರವು ನೀಡಬೇಕು. ಮೈಕ್ರೋ ಫೈನಾನ್ಸ್ ಒಳಗೊಂಡಂತೆ ಎಲ್ಲ ಸಾಲಗಳ ಕರೊನಾ ಅವಧಿಯ ಕಂತು ಸರ್ಕಾರ ಮನ್ನಾ ಮಾಡಬೇಕು ಎಂದು ಆಗ್ರಹಿಸಿದರು.
ಕಾನೂನು ಘಟಕದ ಅಧ್ಯಕ್ಷ ಹರೀಶ್ ಶೆಟ್ಟಿ ಪಾಂಗಾಳ, ಜಿಲ್ಲಾ ಕಾಂಗ್ರೆಸ್ ಪದಾಧಿಕಾರಿ ಬಿ. ಕುಶಲ್ ಶೆಟ್ಟಿ, ಕಿಶನ್ ಹೆಗ್ಡೆ ಕೊಳ್ಕೆಬೈಲ್, ಉದ್ಯಾವರ ನಾಗೇಶ್ ಕುಮಾರ್, ಕೃಷ್ಣಮೂರ್ತಿ ಆಚಾರ್ಯ, ಪ್ರಶಾಂತ್ ಜತ್ತನ್ನ, ಪ್ರಮೀಳ ಜತ್ತನ್ನ, ವಿಲಿಯಂ ಮಾರ್ಟಿಸ್, ಉಪೇಂದ್ರ ಗಾಣಿಗ, ನಗರಸಭೆ ವಿರೋಧ ಪಕ್ಷದ ನಾಯಕರಾದ ರಮೇಶ್ ಕಾಂಚನ್, ಸದಾಶಿವ ಅಮೀನ್ ಕಟ್ಟೆಗುಡ್ಡೆ, ಜನಾರ್ದನ ಭಂಡಾರ್ಕಾರ್ ಉಪಸ್ಥಿತರಿದ್ದರು.