ಕೆ.ಆರ್.ನಗರ: ಇಲ್ಲಿನ ಪುರಸಭೆಯ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಮೀಸಲಾತಿ ಪ್ರಕಟವಾಗಿದ್ದು, ಕಾಂಗ್ರೆಸ್ ಸದಸ್ಯರು ಅಧಿಕಾರದ ಗದ್ದುಗೆ ಏರುವುದು ಬಹುತೇಕ ಖಚಿತ ಎನ್ನಲಾಗಿದೆ.
ಅಧ್ಯಕ್ಷ ಸ್ಥಾನ ಪರಿಶಿಷ್ಟ ಪಂಗಡಕ್ಕೆ ಮೀಸಲಾಗಿದೆ. ಪುರಸಭೆಯಲ್ಲಿನ 23 ವಾರ್ಡ್‌ಗಳಲ್ಲಿ ಪರಿಶಿಷ್ಟ ಪಂಗಡಕ್ಕೆ ಮೀಸಲಾಗಿದ್ದ 8ನೇ ವಾರ್ಡ್‌ನಿಂದ ಕಾಂಗ್ರೆಸ್ ಸದಸ್ಯನಾಗಿ ಆಯ್ಕೆಯಾಗಿರುವ ಶಿವುನಾಯಕ್ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗುವುದು ಖಚಿತ ಎನ್ನಲಾಗುತ್ತಿದೆ. ಈಗಾಗಲೇ ಶಿವುನಾಯಕ್‌ಗೆ ಶುಭಾಶಯ ಕೋರುವ ಫ್ಲೆಕ್ಸ್‌ಗಳು ಪಟ್ಟಣದಲ್ಲಿ ರಾರಾಜೀಸುತ್ತಿದ್ದು, ಪಕ್ಷಾತೀತವಾಗಿ ಎಲ್ಲ ಸದಸ್ಯರ ಮನೆಗೆ ತೆರಳಿ ಆಡಳಿತಕ್ಕೆ ಸಹಕಾರ ಕೊಡುವಂತೆ ಕೋರುತ್ತಿದ್ದಾರೆ.
ಉಪಾಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆಗೆ ಮೀಸಲಾಗಿದೆ. ಆರು ಮಹಿಳಾ ಸದಸ್ಯರು ಕಾಂಗ್ರೆಸ್‌ನಿಂದ ಆಯ್ಕೆಯಾಗಿದ್ದು, ಅದರಲ್ಲಿ 1ನೇ ವಾರ್ಡ್‌ನ ಪಲ್ಲವಿ ಆನಂದ್, 6ನೇ ವಾರ್ಡ್‌ನ ವಸಂತಮ್ಮ ಗೋವಿಂದೇಗೌಡ, 9ನೇ ವಾರ್ಡ್‌ನ ಶಾರದಾ ನಾಗೇಶ್, 20ನೇ ವಾರ್ಡ್‌ನ ಅಪ್ರೋಜ್ ಉನ್ನೀಸಾ ಉಪಾಧ್ಯಕ್ಷ ಸ್ಥಾನದ ಪ್ರಬಲ ಆಕಾಂಕ್ಷಿಗಳಾಗಿದ್ದಾರೆ. ಅಲ್ಲದೆ ಕಾಂಗ್ರೆಸ್ ವರಿಷ್ಠರ ಮೇಲೆ ತಮ್ಮ ಪತಿ ಹಾಗೂ ಕುಟುಂಬದವರ ಮೂಲಕ ಒತ್ತಡದ ತಂತ್ರ ಅನುಸರಿಸುತ್ತಿದ್ದಾರೆ.
ಪುರಸಭೆಯಲ್ಲಿ 5 ವರ್ಷದ ಅವಧಿಗೆ ಅಧಿಕಾರವಿದ್ದು, 23 ಸದಸ್ಯ ಸ್ಥಾನಗಳ ಪೈಕಿ 14 ಕಾಂಗ್ರೆಸ್, 8 ಜೆಡಿಎಸ್ ಮತ್ತು 1 ಸ್ಥಾನ ಬಿಜೆಪಿ ಪಾಲಾಗಿದೆ. ಇವರಲ್ಲಿ 6 ಮಹಿಳೆಯರು ಮತ್ತು 8 ಪುರುಷ ಸದಸ್ಯರು ಕಾಂಗ್ರೆಸ್‌ನವರಾಗಿದ್ದಾರೆ. ಸಾಮಾನ್ಯ ಮಹಿಳೆಗೆ ಮೀಸಲಾಗಿರುವ ಉಪಾಧ್ಯಕ್ಷ ಸ್ಥಾನಕ್ಕೆ ಭಾರಿ ಪೈಪೋಟಿ ಏರ್ಪಟ್ಟಿದ್ದರೂ ಪಕ್ಷದ ವರಿಷ್ಠರ ತೀರ್ಮಾನವೇ ಅಂತಿಮವಾಗಲಿದೆ. ಉಪಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಲು ಜೆಡಿಎಸ್‌ನಲ್ಲೂ ಮಹಿಳಾ ಸದಸ್ಯರಿದ್ದು, ಉಪಾಧ್ಯಕ್ಷ ಸ್ಥಾನಕ್ಕೆ ಮಾತ್ರ ಚುನಾವಣೆ ನಡೆಯುವುದರಿಂದ ಬಹುಮತ ಇಲ್ಲವಾದ್ದರಿಂದ ಜೆಡಿಎಸ್ ಸ್ಪರ್ಧಿಸುವುದು ಅನುಮಾನವಿದೆ.
ಪುರಸಭಾ ಆಡಳಿತ ಮಂಡಳಿಗೆ ಚುನಾವಣೆ ನಡೆದು 10 ತಿಂಗಳ ನಂತರ ಮೀಸಲಾತಿ ನೀಡಲಾಗಿತ್ತು. 30 ತಿಂಗಳ ಅವಧಿಗೆ ಅಧ್ಯಕ್ಷ ಸ್ಥಾನ ಸಾಮಾನ್ಯ ವರ್ಗಕ್ಕೆ ಮೀಸಲಾಗಿತ್ತು. ಕೆ.ಜಿ.ಸುಬ್ರಮಣ್ಯ, ಕೋಳಿ ಪ್ರಕಾಶ್, ಸೈಯದ್ ಸಿದ್ದೀಕ್ ಅಧ್ಯಕ್ಷರಾಗಿ ಅಧಿಕಾರ ಹಂಚಿಕೊಂಡರು. ಎಸ್‌ಸಿ ಮಹಿಳೆಗೆ ಮೀಸಲಾಗಿದ್ದ ಉಪಾಧ್ಯಕ್ಷ ಸ್ಥಾನಕ್ಕೆ ಸೌಮ್ಯಾ ಲೋಕೇಶ್ ಅವಿರೋಧವಾಗಿ ಆಯ್ಕೆಯಾಗಿ ಅಧಿಕಾರ ನಡೆಸಿದ್ದರು. ಇವರ 30 ತಿಂಗಳ ಅವಧಿ 2023 ಮೇ 5ರಂದು ಕೊನೆಗೊಂಡಿತ್ತು. ನಂತರ ಮುಂದಿನ 30 ತಿಂಗಳ ಅವಧಿಗೆ ಸರ್ಕಾರ ಮೀಸಲಾತಿ ಪ್ರಕಟಿಸದ ಕಾರಣ ಹುಣಸೂರು ಉಪವಿಭಾಗಾಧಿಕಾರಿಯನ್ನು ಆಡಳಿತಾಧಿಕಾರಿಯನ್ನಾಗಿ ನೇಮಿಸಿತ್ತು. 20 ತಿಂಗಳ ನಂತರ ಮತ್ತೆ ಉಳಿದ 10 ತಿಂಗಳ ಅವಧಿಗೆ ಮೀಸಲಾತಿ ಪ್ರಕಟಿಸಿದ್ದು ಅಧ್ಯಕ್ಷ ಸ್ಥಾನವನ್ನು ಎಸ್‌ಟಿ ಮಹಿಳೆಗೆ ನೀಡಲಾಗಿತ್ತು. ಆದರೆ ಎಸ್‌ಟಿ ಮಹಿಳಾ ಸದಸ್ಯೆ ಇಲ್ಲದ ಕಾರಣ ಮತ್ತೆ ಸಾಮಾನ್ಯಕ್ಕೆ ಮೀಸಲು ಬದಲಾಯಿಸಿ ಪ್ರಕಟಿಸಿದೆ.
ಅಧ್ಯಕ್ಷ ಸ್ಥಾನಕ್ಕೆ ಶಿವುನಾಯಕ್ ಆಯ್ಕೆಯಾಗುವುದು ಖಚಿತವಾಗಿದ್ದು, ಉಪಾಧ್ಯಕ್ಷರು ಯಾರಾಗಬೇಕೆಂಬುದನ್ನು ಶಾಸಕ ಡಿ.ರವಿಶಂಕರ್ ಮತ್ತು ಕೆಪಿಸಿಸಿ ಕಾರ್ಯಕಾರಿಣಿ ಸದಸ್ಯ ದೊಡ್ಡಸ್ವಾಮೇಗೌಡ ನಿರ್ಧರಿಸಲಿದ್ದಾರೆ. ಇವರ ಆಶೀರ್ವಾದ ಯಾರಿಗೆ ದೊರೆಯಲಿದೆ ಎಂಬುದನ್ನು ಕಾದು ನೋಡಬೇಕಿದೆ.
ಜ.13 ರಂದು ಪುರಸಭಾ ಸಭಾಂಗಣದಲ್ಲಿ ಚುನಾವಣೆ ಪ್ರಕ್ರಿಯೆ ನಡೆಯಲಿದ್ದು, ತಹಸೀಲ್ದಾರ್ ಜಿ.ಸುರೇಂದ್ರಮೂರ್ತಿ ಚುನಾವಣಾಧಿಕಾರಿಯಾಗಿ ಕಾರ್ಯನಿರ್ವಹಿಸಲಿದ್ದಾರೆ.
ಪುರಸಭೆಯಲ್ಲಿ ಕಾಂಗ್ರೆಸ್‌ನ 14 ಸದಸ್ಯರಿದ್ದು, ನಮ್ಮ ಪಕ್ಷ ಅಧಿಕಾರ ಹಿಡಿಯುವುದು ಖಚಿತ. ಅಧ್ಯಕ್ಷ ಸ್ಥಾನಕ್ಕೆ ಒಬ್ಬರೇ ಅಭ್ಯರ್ಥಿ ಇರುವುದರಿಂದ ಶಿವುನಾಯಕ್ ಅವಿರೋಧವಾಗಿ ಆಯ್ಕೆಯಾಗಲಿದ್ದಾರೆ. ಉಪಾಧ್ಯಕ್ಷ ಸ್ಥಾನಕ್ಕೆ ನಾಲ್ಕೈದು ಸದಸ್ಯರು ಪೈಪೋಟಿಯಲ್ಲಿದ್ದರೂ ಪಕ್ಷದ ವರಿಷ್ಠರ ತೀರ್ಮಾನವೇ ಅಂತಿಮವಾಗಲಿದೆ.
ನಟರಾಜು ಪುರಸಭಾ ಸದಸ್ಯ
ಹಿಂದಿನಿಂದಲೂ ಪರಿಶಿಷ್ಟ, ಅಲ್ಪಸಂಖ್ಯಾತ, ಹಿಂದುಳಿದ ಮತ್ತು ಧ್ವನಿಯಿಲ್ಲದ ಸಮಾಜಗಳಿಗೆ ಕಾಂಗ್ರೆಸ್ ಅಧಿಕಾರ ಕೊಡುತ್ತ ಬಂದಿದೆ. ಶಾಸಕ ಡಿ.ರವಿಶಂಕರ್ ಕೂಡ ನಮ್ಮ ಸಮಾಜದ ಹಲವರಿಗೆ ಹೆಚ್ಚಿನ ವಿವಿಧ ಅಧಿಕಾರ ನೀಡಿದ್ದಾರೆ. ಶಿವುನಾಯಕ್ ಅವರು ಪುರಸಭೆಯ ಅಧ್ಯಕ್ಷರಾಗುತ್ತಿರುವುದಕ್ಕೆ ಶಾಸಕರ ಸಹಕಾರವೇ ಕಾರಣ. ಅವರಿಗೆ ನಮ್ಮ ಸಮುದಾಯದ ಪರವಾಗಿ ಕೃತಜ್ಞತೆ ಸಲ್ಲಿಸುತ್ತೇನೆ.
ತಿಪ್ಪೂರು ಮಹದೇವ್ ತಾಲೂಕು ಅಧ್ಯಕ್ಷ, ಬ್ಲಾಕ್ ಕಾಂಗ್ರೆಸ್ ಎಸ್‌ಟಿ ಘಟಕ