ಮಂಗಳೂರು: ಪಂಚಾಯಿತಿ ಚುನಾವಣೆಗೆ ನಿಲ್ಲಿಸಲು ಕಾಂಗ್ರೆಸ್ ಅಭ್ಯರ್ಥಿಗಳ ಕೊರತೆ ಎದುರಿಸುತ್ತಿದ್ದು, ಕಾರ್ಯಕರ್ತರಿಗೆ ಭವಿಷ್ಯವಿಲ್ಲ ಎನ್ನುವ ಸ್ಥಿತಿ ನಿರ್ಮಾಣವಾಗಿದೆ. ಕಾರ್ಯಕರ್ತರೇ ಪಕ್ಷವನ್ನು ತಿರಸ್ಕರಿಸುವ ಪರಿಸ್ಥಿತಿ ಬಂದೊದಗಿದ್ದು, ಪಂಚಾಯಿತಿ ಚುನಾವಣೆ ಬಳಿಕ ಕಾಂಗ್ರೆಸ್ ಮುಕ್ತ ದಕ್ಷಿಣ ಕನ್ನಡ ಜಿಲ್ಲೆ ನಿರ್ಮಾಣವಾಗಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಭವಿಷ್ಯ ನುಡಿದಿದ್ದಾರೆ.
ಜಿಲ್ಲಾ ಬಿಜೆಪಿ ಕಚೇರಿಯಲ್ಲಿ 30ಕ್ಕೂ ಅಧಿಕ ಕಾಂಗ್ರೆಸ್ ನಾಯಕರು, ಕಾರ್ಯಕರ್ತರನ್ನು ಬಿಜೆಪಿಗೆ ಸ್ವಾಗತಿಸಿ ಮಾತನಾಡಿದರು.
ಜಿಲ್ಲೆಯಲ್ಲಿ ಶೇ.80 ಮತ್ತು ರಾಜ್ಯದಲ್ಲಿ ಶೇ.90ರಷ್ಟು ಪಂಚಾಯಿತಿಯಲ್ಲಿ ಬಿಜೆಪಿ ಜಯಗಳಿಸಲಿದೆ ಎಂದ ಅವರು, ಹೊಸದಾಗಿ ಪಕ್ಷಕ್ಕೆ ಸೇರ್ಪಡೆಯಾದವರ ಸ್ಥಾನ ಮಾನಗಳಿಗೆ ಚ್ಯುತಿ ಬಾರದ ರೀತಿಯಲ್ಲಿ ನಡೆಸಿಕೊಳ್ಳಲಾಗುವುದು ಎಂದರು.
ಪಕ್ಷಕ್ಕೆ ಸೇರ್ಪಡೆ: ಕಾಂಗ್ರೆಸ್ ಹಿಂದುಳಿದ ವರ್ಗಗಳ ಜಿಲ್ಲಾ ಅಧ್ಯಕ್ಷ ಮಾಧವ ಮಾವೆ, ಜಿಪಂ ಸದಸ್ಯೆ ಮಂಜುಳಾ ಮಾಧವ ಮಾವೆ ದಂಪತಿ, ಬಂಟ್ವಾಳ ತಾಪಂ ಸದಸ್ಯ ಕುಮಾರ ಭಟ್ ಬಜಕೋಡಿ, ಕೆದಿಲ ಗ್ರಾಪಂ ಮಾಜಿ ಸದಸ್ಯ ಸುದರ್ಶನ್ ಕೆದಿಲ, ಸಾಮಾಜಿಕ ಕಾರ್ಯಕರ್ತ ಹನೀಫ್ ಸಾಹೇಬ್ ಪಾಜಪಳ್ಳ ನೇತೃತ್ವದಲ್ಲಿ 20ಕ್ಕೂ ಅಧಿಕ ಅಲ್ಪಸಂಖ್ಯಾತ ಕಾಂಗ್ರೆಸ್ ಕಾರ್ಯಕರ್ತರು ಬಿಜೆಪಿಗೆ ಸೇರ್ಪಡೆಗೊಂಡರು. ರಾಜ್ಯಾಧ್ಯಕ್ಷ ನಳಿನ್ ಪಕ್ಷದ ಧ್ವಜ ನೀಡಿ ಸ್ವಾಗತಿಸಿದರು. ಬಂಟ್ವಾಳ ಶಾಸಕ ರಾಜೇಶ್ ನಾಯ್ಕ, ಜಿಲ್ಲಾಧ್ಯಕ್ಷ ಸುದರ್ಶನ್ ಮೂಡುಬಿದಿರೆ, ಜಿಲ್ಲಾ ವಕ್ತಾರ ರವಿಶಂಕರ್ ಮಿಜಾರ್, ಬಂಟ್ವಾಳ ಮಂಡಲ ಅಧ್ಯಕ್ಷ ದೇವಪ್ಪ ಪೂಜಾರಿ, ಮಾಜಿ ಶಾಸಕ ಪದ್ಮನಾಭ ಕೊಟ್ಟಾರಿ, ಜಿಲ್ಲಾ ಸಹಪ್ರಭಾರಿ ರಾಜೇಶ್ ಕಾವೇರಿ ಉಪಸ್ಥಿತರಿದ್ದರು.
ಅಧಿಕಾರದ ಆಸೆಯಿಂದ ಬಿಜೆಪಿಗೆ ಬಂದಿಲ್ಲ. ಸಾಮಾನ್ಯ ಕಾರ್ಯಕರ್ತರಾಗಿ ಕೊನೇವರೆಗೂ ಪಕ್ಷದಲ್ಲಿ ಕೆಲಸ ಮಾಡುತ್ತೇವೆ. ಕಾಂಗ್ರೆಸ್‌ನಲ್ಲೂ ಅಧಿಕಾರ ಬಯಸಿರಲಿಲ್ಲ, ಆದರೂ ಪಿತೂರಿ, ಚಾಡಿ ಮಾತುಗಳನ್ನು ಹೇಳುವವರು- ಕೇಳುವವರ ಸಂಖ್ಯೆ ಹೆಚ್ಚಾಗಿದ್ದಾರೆ. ತಾವೇ ಶ್ರೇಷ್ಠರು ಎನ್ನುವ ಕೆಲವರಿಂದಾಗಿ ಪಕ್ಷ ಬಿಟ್ಟಿದ್ದೇವೆ.
ಮಾಧವ ಮಾವೆ, ಮಂಜುಳಾ ಮಾಧವ ಮಾವೆ, ಬಿಜೆಪಿಗೆ ಸೇರ್ಪಡೆಗೊಂಡವರು.