ತುಮಕೂರು: ವ್ಯಕ್ತಿಪೂಜೆ, ಅಧಿಕಾರ ಲಾಲಸೆಯಿಂದ ಕಾಂಗ್ರೆಸ್ ಬೌದ್ಧಿಕವಾಗಿ ದಿವಾಳಿಯಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ಕುಮಾರ್ ಕಟೀಲ್ ಹೇಳಿದರು.
ನಗರದ ಸಿದ್ಧಿವಿನಾಯಕ ಸಮುದಾಯ ಭವನದಲ್ಲಿ ಭಾನುವಾರ ಆಯೋಜಿಸಿದ್ದ ಬೆಂಗಳೂರು ಮಹಾನಗರ, ಬೆಂಗಳೂರು ಗ್ರಾಮಾಂತರ ಹಾಗೂ ದಾವಣಗೆರೆ ವಿಭಾಗ ಮಟ್ಟದ 10 ಜಿಲ್ಲೆಗಳ ಜಿಲ್ಲಾ ವಿಷಯ ಪ್ರಮುಖರ ಪ್ರಶಿಕ್ಷಣ ವರ್ಗ ತರಬೇತಿ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದರು.
ರಾಷ್ಟ್ರಭಕ್ತಿ ಉದ್ದೀಪನೆಯಿಂದ ಆರಂಭವಾದ ಕಾಂಗ್ರೆಸ್ ಸ್ವಾತಂತ್ರಾೃನಂತರ ವ್ಯಕ್ತಿ ನಿರ್ಮಾಣ ಕಾರ್ಯ ಕೈಬಿಟ್ಟಿತು. ರಾಷ್ಟ್ರಭಾವನೆ ಮರೆತು ವ್ಯಕ್ತಿಪೂಜೆ, ಸಿದ್ಧಾಂತ ಮರೆತು ಅಧಿಕಾರ ಬೆನ್ನತ್ತಿದ ಪಕ್ಷ ತನ್ನ ಮಾತಿನಲ್ಲಿ, ಕಾರ್ಯಶೈಲಿಯಲ್ಲಿ ತಪ್ಪಿದ್ದರಿಂದ ಇಂದು ಕಾಂಗ್ರೆಸ್ ಮುಕ್ತ ಭಾರತ ನಿರ್ಮಾಣವಾಗುತ್ತಿದೆ ಎಂದು ಕುಟುಕಿದರು.
20 ರಾಜ್ಯದಲ್ಲಿ ಅಧಿಕಾರ: ಬಿಜೆಪಿ ಜನತೆಗೆ ಕೊಟ್ಟ ವಿಚಾರಧಾರೆಗಳಿಗೆ ಬದ್ಧವಾಗಿ, ಕೊಟ್ಟ ಭರವಸೆಗಳನ್ನು ಅನುಷ್ಠಾನಗೊಳಿಸಿದ್ದರಿಂದ 400 ಸ್ಥಾನಗಳಲ್ಲಿದ್ದ ಕಾಂಗ್ರೆಸ್ 40 ಸ್ಥಾನಕ್ಕಿಳಿಯಿತು. ಲೋಕಸಭೆಯಲ್ಲಿ 2 ಸ್ಥಾನಗಳಲ್ಲಿದ್ದ ಬಿಜೆಪಿ 300ಕ್ಕಿಂತ ಹೆಚ್ಚು ಸ್ಥಾನ ಪಡೆದು, 20ಕ್ಕೂ ಹೆಚ್ಚು ರಾಜ್ಯಗಳಲ್ಲಿ ಅಧಿಕಾರ ಪಡೆಯಲು ಸಾಧ್ಯವಾಯಿತು ಎಂದು ಹೇಳಿದರು. ರಾಮಮಂದಿರ ಎದ್ದು ನಿಂತಾಗ ಮಾತ್ರ ಸ್ವಾಭಿಮಾನದ ಸಂಕೇತ ಪ್ರಜ್ವಲಿಸಲಿದೆ. ಮಂದಿರ ನಿರ್ಮಾಣಕ್ಕೆ ಶಿಲಾನ್ಯಾಸ ಮಾಡಿದ ಹೆಗ್ಗಳಿಕೆಗೆ ಮೋದಿ ಪಾತ್ರರಾಗಿದ್ದು, ಕಾಶ್ಮೀರದ 370ನೇ ವಿಧಿ ರದ್ದು ಮಾಡಿ ದೇಶದ ರಕ್ಷಣೆಗೂ ಸರ್ಕಾರ ಬದ್ಧವಾಗಿದೆ. ಈ ದೇಶದಲ್ಲಿ ಒಂದು ಪ್ರಧಾನಿ, ಒಂದು ಧ್ವಜ ಇರಬೇಕು ಎಂದು ಜನಸಂಘ ಹತ್ತಾರು ವರ್ಷಗಳ ಕಾಲ ಹೋರಾಟ ಮಾಡಿತ್ತು. ಈ ಕನಸು ಇಂದು ನೆರವೇರುತ್ತಿದೆ ಎಂದರು. ರಾಜ್ಯ ಬಿಜೆಪಿ ಮುಖಂಡ ಶ್ರೀಕಾಂತ್ ಕುಲಕರ್ಣಿ, ಬಿಜೆಪಿ ಸಂಘಟನಾ ಪ್ರಧಾನ ಕಾರ್ಯದರ್ಶಿ ಅರುಣ್‌ಕುಮಾರ್, ವಿಧಾನ ಪರಿಷತ್ ಮಾಜಿ ಸದಸ್ಯ ಸಿದ್ದರಾಮಣ್ಣ, ಜಿಲ್ಲಾ ಬಿಜೆಪಿ ಜಿಲ್ಲಾಧ್ಯಕ್ಷ ಬಿ. ಸುರೇಶ್‌ಗೌಡ, ವಿಭಾಗ ಪ್ರಭಾರ ಲಕ್ಷ್ಮೀಶ್ ಮತ್ತಿತರರು ಪಾಲ್ಗೊಂಡಿದ್ದರು.
ಕಾಂಗ್ರೆಸ್ ಮುಳಗುವ ಹಡಗು ಬಿಜೆಪಿ ಓಡುವ ಹಡಗು!: ಕಾಂಗ್ರೆಸ್ ಪಕ್ಷ ಅಧಿಕಾರ ಇದ್ದಾಗ ಕೊಟ್ಟ ಭರವಸೆಗಳನ್ನು ಮರೆತು ಇಂದು ಮುಳುಗುವ ಹಡಗಾಗಿದೆ. ಆದರೆ, ಬಿಜೆಪಿ ದೇಶದ ಜನರಿಗೆ ಕೊಟ್ಟ ಮಾತನ್ನು ಉಳಿಸಿಕೊಳ್ಳುವ ಮೂಲಕ ಓಡುವ ಹಡಗಾಗಿದೆ. 6 ವರ್ಷದಲ್ಲಿ ಒಂದೇ ಒಂದು ಭ್ರಷ್ಟಾಚಾರ ಆರೋಪ ಇಲ್ಲದ ಸರ್ಕಾರ ಅಂದರೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ. ದೇಶದಲ್ಲಿ ಕಪ್ಪು ಹಣ, ಭ್ರಷ್ಟಾಚಾರ ನಿಯಂತ್ರಣವಾಗಿದೆ. ಇದುವರೆಗೆ ಯಾವ ಸರ್ಕಾರಗಳೂ ಮಾಡದಂತಹ ಸಾಧನೆಯನ್ನು ಬಿಜೆಪಿ ಸರ್ಕಾರ ಮಾಡಿದೆ ಎಂದು ನಳಿನ್‌ಕುಮಾರ್ ಕಟೀಲ್ ತಿಳಿಸಿದರು.
ಶಿರಾದಲ್ಲಿ ಕೈ ಸೋಲಿಸಲು ಡಿಕೆಶಿ ಪಣ?: ಶಿರಾ ಹಾಗೂ ಆರ್ ಆರ್ ನಗರ ಉಪಸಮರದಲ್ಲಿ ಬಿಜೆಪಿ ಗೆಲುವಿಗೆ ಕಾಂಗ್ರೆಸ್‌ನ ಒಳಜಗಳವು ಕಾರಣವಾಗಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದರು. ನಗರದಲ್ಲಿ ಪಕ್ಷದ ಕಾರ್ಯಕ್ರಮದಲ್ಲಿ ಭಾಗವಹಿಸುವ ಮುನ್ನ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿ, ಆರ್ ಆರ್ ನಗರವನ್ನು ಡಿ.ಕೆ.ಶಿವಕುಮಾರ್ ಉಸ್ತುವಾರಿ ವಹಿಸಿಕೊಂಡಿದ್ದರು. ಶಿರಾದ ಉಸ್ತುವಾರಿಯನ್ನು ಸಿದ್ದರಾಮಯ್ಯ ಹೊತ್ತುಕೊಂಡಿದ್ದಾರೆ. ಹಾಗಾಗಿ, ಶಿರಾದಲ್ಲಿ ಕಾಂಗ್ರೆಸ್ ಸೋಲಿಸುವುದಕ್ಕೆ ಶಿವಕುಮಾರ್ ತಲೆಬಿಸಿ ಮಾಡಿಕೊಂಡಿದ್ದರು. ಹಾಗೆಯೇ ಆರ್ ಆರ್ ನಗರದಲ್ಲಿ ಗೆಲ್ಲುವ ಬದಲು ಕಾಂಗ್ರೆಸ್ ಸೋಲಿಸುವುದು ಹೇಗೆ ಎಂದು ಸಿದ್ದರಾಮಯ್ಯ ತಲೆಕೆಡಿಸಿಕೊಂಡಿದ್ದರು ಎಂದು ಲೇವಡಿ ಮಾಡಿದರು. ಕಾಂಗ್ರೆಸ್ ನ ಆಂತರಿಕ ಜಗಳ ಈಗ ಬೀದಿಜಗಳವಾಗಿದೆ. ಸಿದ್ದರಾಮಯ್ಯಗೆ ಮೂಲೆಗುಂಪಾಗುವ ಭಯವಿದ್ದು, ಅವರ ನಾಯಕತ್ವಕ್ಕೆ ಬೆಲೆಯಿಲ್ಲ ಅನ್ನಿಸಿದೆ. ಅದಕ್ಕೋಸ್ಕರ ಸಿಎಂ ಮೇಲೆ ದಿನಕ್ಕೊಂದು ಹೇಳಿಕೆ ನೀಡುತ್ತಿದ್ದಾರೆ. ಈ ಚುನಾವಣೆ ಬಳಿಕ ಕಾಂಗ್ರೆಸ್ ಜಗಳ ಬೀದಿ ಕಾಳಗವಾಗಲಿದೆ ಎಂದು ಹರಿಹಾಯ್ದರು.
ಕಾಂಗ್ರೆಸ್‌ನವರಿಗೆ ಯಾವಾಗ ಸೋಲಾಗುತ್ತೋ ಆಗ ಇವಿಎಂ ಮೇಲೆ ಅನುಮಾನ ಪಡ್ತಾರೆ. ಗೆದ್ದಾಗ ಇವಿಎಂ ಸರಿ ಇರುವುದಿಲ್ಲವಾ? ಇದರಿಂದ ಅವರಿಗೆ ಅರ್ಥವಾಗಿದೆ ನಾವು ಸೋಲುತ್ತೀವಿ ಅಂತ. ಇವಿಎಂ ದೋಷವಿದ್ದರೆ ಡಿಕೆಶಿ, ಸಿದ್ದರಾಮಯ್ಯ ಗೆಲ್ಲುವುದಕ್ಕೆ ನಾವು ಬಿಡುತ್ತಿದ್ದೆವಾ ಎಂದು ಕಟೀಲ್ ತಿರುಗೇಟು ನೀಡಿದರು.