ಜಿಲ್ಲೆ

ಬ್ಯಾಡಗಿ ಬಂದ್​ಗೆ ಕಾಂಗ್ರೆಸ್ ಬೆಂಬಲ

ಬಸವರಾಜ ವೀರಪ್ಪ ಗರಗ

ಬ್ಯಾಡಗಿ: ಪಟ್ಟಣದಲ್ಲಿ ಹಾದು ಹೋಗಿರುವ ಗಜೇಂದ್ರಗಡ-ಸೊರಬ ಮುಖ್ಯರಸ್ತೆಯ ವಿಸ್ತರಣೆಗೆ ಆಗ್ರಹಿಸಿ ಜೂ. 5ರಂದು ಕರೆ ನೀಡಿರುವ ಬ್ಯಾಡಗಿ ಬಂದ್​ಗೆ ತಾಲೂಕು ಕಾಂಗ್ರೆಸ್ ಘಟಕ ಬೆಂಬಲ ನೀಡಲಿದೆ ಎಂದು ತಾಲೂಕು ಘಟಕ ಅಧ್ಯಕ್ಷ ದಾನಪ್ಪ ಚೂರಿ ತಿಳಿಸಿದರು.

ಇಲ್ಲಿನ ಕಾಂಗ್ರೆಸ್ ಭವನದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 2010ರಿಂದ ಬ್ಯಾಡಗಿ ಮುಖ್ಯರಸ್ತೆ ವಿಸ್ತರಣೆ ಹೋರಾಟ ನಡೆದಿದ್ದು, 2013ರಲ್ಲಿ ಶಾಸಕ ಬಸವರಾಜ ಶಿವಣ್ಣನವರ ಆಯ್ಕೆಯಾದ ಬಳಿಕ ಎರಡು ಹಂತದಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿ ನಡೆಸಿದ್ದರು. ಅಂಗಡಿ ಮಾಲೀಕರ ಜತೆ ಸಾಕಷ್ಟು ಬಾರಿ ಸಂಧಾನ ನಡೆಸಿ ಇತ್ಯರ್ಥಕ್ಕೆ ಯತ್ನಿಸಿದ್ದಾರೆ. ಆದರೆ, ಕೆಲಕಾರಣಗಳಿಂದ ಇಂದಿಗೂ ಸಮಸ್ಯೆ ಬಗೆಹರಿದಿಲ್ಲ. ಅಧಿಕಾರಿಗಳ ನಿರ್ಲಕ್ಷ್ಯದಿಂದ ರಸ್ತೆ ಕಾಮಗಾರಿಗೆ ಚಾಲನೆ ಸಿಕ್ಕಿಲ್ಲ.

ರಾಜ್ಯದಲ್ಲಿ ನಮ್ಮ ಸರ್ಕಾರ ಹಾಗೂ ಶಾಸಕರು ನಮ್ಮವರಿದ್ದು, ನಮ್ಮ ಹೋರಾಟ ಸರ್ಕಾರದ ವಿರುದ್ಧವಲ್ಲ, ರಸ್ತೆ ವಿಸ್ತರಣೆಗೆ ವಿರೋಧಿಸುವವರನ್ನು ಖಂಡಿಸಿ ಬೆಂಬಲಿಸಿದ್ದೇವೆ ಎಂದರು. ಪುರಸಭೆ ಸದಸ್ಯ ಶಂಕರ ಕುಸಗೂರು ಮಾತನಾಡಿ, ಶೀಘ್ರದಲ್ಲೇ ರಸ್ತೆ ನಿರ್ವಿುಸಲು ಅಧಿಕಾರಿಗಳು ಮುಂದಾಗದಿದ್ದಲ್ಲಿ ಸಾರ್ವಜನಿಕ ಹಿತಾಸಕ್ತಿ ಪರಿಗಣಿಸಿ, ಪುರಸಭೆ ಸ್ಥಾನ ತ್ಯಜಿಸುವ ಮೂಲಕ ರಾಜೀನಾಮೆ ನೀಡಲು ಸಿದ್ಧರಿದ್ದೇವೆ ಎಂದರು.

ಗ್ಯಾರಂಟಿ ಯೋಜನೆ ತಾಲೂಕಾಧ್ಯಕ್ಷ ಶಂಭನಗೌಡ್ರ ಪಾಟೀಲ, ಕಾರ್ಯದರ್ಶಿ ರಮೇಶ ಸುತ್ತಕೋಟಿ, ಪುರಸಭೆ ಆಶ್ರಯ ಸಮಿತಿ, ಮುನ್ನಾಫಲಿ ಎರೆಸೀಮೆ, ಗಿರೀಶ ಇಂಡಿಮಠ, ದುರ್ಗೆಶ ಗೋಣೆಮ್ಮನವರ, ಶಿವನಗೌಡ್ರ ಪಾಟೀಲ, ಜಿಲ್ಲಾ ಕೆಡಿಪಿ ಸದಸ್ಯ ಮಂಜೂರಲಿ ಹಕೀಂ, ನಜೀರ ಅಹ್ಮದ್ ಶೇಖ್, ಮಾರುತಿ ಅಚ್ಚಿಗೇರಿ, ಖಾದರಸಾಬ್ ದೊಡ್ಡಮನಿ, ಬಾಬುಸಾಬ್ ಓಲೇಕಾರ, ಸೋಮಶೇಖರ ಸಂಕಣ್ಣನವರ, ಸೋಮಣ್ಣ ಕರ್ಚಡ ಇತರರಿದ್ದರು.