ಜಿಲ್ಲೆ

ಪಾಕಿಸ್ತಾನಕ್ಕೆ ತಕ್ಕ ಉತ್ತರ ನೀಡಲಿ : ಮೋದಿ ನಿರ್ಧಾರಕ್ಕೆ ಕಾಂಗ್ರೆಸ್ ಬೆಂಬಲ-ಮಲ್ಲಿಕಾರ್ಜುನ ಖರ್ಗೆ

ಬಾಬುರಾವ ಯಡ್ರಾಮಿ

ಮೋದಿ ನಿರ್ಧಾರಕ್ಕೆ ಕಾಂಗ್ರೆಸ್ ಬೆಂಬಲ | ಪಹಲ್ಗಾಮ್ ಸಂತ್ರಸ್ತರಿಗೆ ಪರಿಹಾರ ನೀಡಲು ಒತ್ತಾಯ

ವಿಜಯವಾಣಿ ಸುದ್ದಿಜಾಲ ಕಲಬುರಗಿ

ವಿನಾಕಾರಣ ಭಾರತವನ್ನು ಕೆಣಕುತ್ತ ಪದೇಪದೆ ದಾಳಿ ಮಾಡುತ್ತಿರುವ ಪಾಕಿಸ್ತಾನಕ್ಕೆ ಕೇಂದ್ರ ಸರ್ಕಾರ ತಕ್ಕ ಉತ್ತರ ನೀಡಬೇಕು. ದೇಶದ ಐಕ್ಯತೆ, ಹಿತ ಮತ್ತು ಸುರಕ್ಷತೆ ದೃಷ್ಟಿಯಿಂದ ನರೇಂದ್ರ ಮೋದಿ ಸರ್ಕಾರ ಕೈಗೊಳ್ಳುವ ನಿರ್ಧಾರಕ್ಕೆ ಬೆಂಬಲಿಸುವುದಾಗಿ ಎಐಸಿಸಿ ಅಧ್ಯಕ್ಷರಾದ ರಾಜ್ಯಸಭೆ ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಹೇಳಿದರು.

ಈ ವಿಷಯದಲ್ಲಿ ರಾಜಕೀಯ ಮಾಡದೆ ಎಲ್ಲ ಪಕ್ಷದವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ನಿರ್ಧಾರ ಕೈಗೊಳ್ಳಬೇಕು. ಪಹಲ್ಗಾಮ್ ಉಗ್ರರ ದಾಳಿಯಲ್ಲಿ ೨೬ ಜನ ಪ್ರಾಣ ಕಳೆದುಕೊಂಡಿರುವುದು ಗಂಭೀರ ವಿಷಯ. ಈ ನಿಟ್ಟಿನಲ್ಲಿ ಕೇವಲ ಭಾಷಣ ಮಾಡಿ ಕುಳಿತುಕೊಂಡರೆ ಸಾಲದು. ದಿಟ್ಟ ಮತ್ತು ಸೂಕ್ತ ಹೆಜ್ಜೆ ಇಡಬೇಕು. ದೇಶವನ್ನು ಕೆಣಕಿದರೆ ಸುಮ್ಮನಿರಲು ಸಾಧ್ಯವಿಲ್ಲ ಎಂದು ಅವರು ಶನಿವಾರ ಭೇಟಿಯಾದ ಸುದ್ದಿಗಾರರೆದುರು ಗುಡುಗಿದರು.

ಮೃತ ೨೬ ಸಂತ್ರಸ್ತರ ಕುಟುಂಬಗಳಿಗೆ ಪರಿಹಾರ ನೀಡಿ ಪುರ್ನವಸತಿ ಕಲ್ಪಿಸುವ ಕೆಲಸ ಕೇಂದ್ರ ಸರ್ಕಾರ ಮಾಡಬೇಕು. ನಮಗೆ ದೇಶ ಮತ್ತು ಜನರ ಹಿತ ಮುಖ್ಯ. ಹೀಗಾಗಿ ಮೋದಿ ಕೈಗೊಳ್ಳುವ ಯಾವುದೇ ನಿರ್ಧಾರಕ್ಕೂ ಬೆಂಬಲವಿದೆ. ಪಹಲ್ಗಾಮ್ ಘಟನೆಗೆ ಸಿಡಬ್ಲುÈಸಿ ಸಭೆಯಲ್ಲಿ ತೀವ್ರ ಆಘಾತ ಮತ್ತು ನೋವು ವ್ಯಕ್ತವಾಗಿದೆ ಎಂದು ತಿಳಿಸಿದರು.

ಜನಗಣತಿ ಜತೆಗೆ ಜಾತಿ ಗಣತಿ ನಡೆಸಲು ಕೇಂದ್ರ ನಿರ್ಧರಿಸಿದ್ದು ಒಳ್ಳೆಯದು. ಇದೇ ಬೇಡಿಕೆಯನ್ನು ರಾಹುಲ್ ಗಾಂಧಿ ಎರಡು ವರ್ಷ ಹಿಂದೆ ಪತ್ರ ಬರೆದು ಜಾತಿ ಗಣತಿಗೆ ಒತ್ತಾಯಿಸಿದಾಗ, ಜಾತಿಗಳ ನಡುವೆ ಜಗಳ ಹಚ್ಚುವ ಪ್ರಯತ್ನ ಮಾಡಲಾಗುತ್ತಿದೆ ಎಂದು ನಮ್ಮ ವಿರುದ್ಧ ಬಿಜೆಪಿ ಗೂಬೆ ಕೂರಿಸಲು ಯತ್ನಿಸಿತು. ಈಗ ಅವರೇ ನಿರ್ಧಾರ ಕೈಗೊಂಡಿದ್ದು, ಕಾಂಗ್ರೆಸ್ ಬೇಡಿಕೆಗೆ ಸ್ಪಂದನೆ ಸಿಕ್ಕಂತಾಗಿದೆ ಎಂದು ಖರ್ಗೆ ಹೇಳಿದರು.

ಶಾಸಕರಾದ ಎಂ.ವೈ. ಪಾಟೀಲ್, ಅಲ್ಲಮಪ್ರಭು ಪಾಟೀಲ್, ಜಗದೇವ ಗುತ್ತೇದಾರ, ಮುಖಂಡರಾದ ಶಿವಾನಂದ ಪಾಟೀಲ್ ಮರತೂರ, ಡಾ.ಕಿರಣ ದೇಶಮುಖ, ಪ್ರವೀಣ ಹರವಾಳ ಇತರರಿದ್ದರು.

ಕೋಟ್ (ಫೋಟೋ ಬಳಸಿ)

ಜಾತಿಗಣತಿ ಮಾದರಿಯಾಗಿ ನಡೆಸಲಿ. ಈ ಹೆಸರಿನಲ್ಲಿ ಸಮಾಜ, ಜಾತಿ, ಧರ್ಮದ ನಡುವೆ ಕಂದಕ ಸೃಷ್ಟಿಸುವ, ಬೆಂಕಿ ಹಚ್ಚುವ ಕೆಲಸ ಮಾಡಬಾರದು. ಪಾರದರ್ಶಕ ಗಣತಿ ಮಾಡಿ ಹಿಂದುಳಿದ, ಅತಿ ಹಿಂದುಳಿದ ಇತರ ಎಲ್ಲ ಸಮುದಾಯದವರಿಗೆ ಸವಲತ್ತು ಕಲ್ಪಿಸುವ ಯೋಜನೆ ರೂಪಿಸಲು, ಹೊಸದಾಗಿ ನಿಗಮ ಸ್ಥಾಪಿಸಲು ಬಳಸಿಕೊಳ್ಳಬೇಕು.

| ಡಾ.ಮಲ್ಲಿಕಾರ್ಜುನ ಖರ್ಗೆ

ಎಐಸಿಸಿ ಅಧ್ಯಕ್ಷ