ಚನ್ನಗಿರಿ: ವಾಲ್ಮೀಕಿ ಬೇಡ ನಾಯಕ ಸಮುದಾಯಕ್ಕೆ ಜಾತಿ ನಿಂದನೆ ಮಾಡಿರುವ ಮಾಜಿ ಸಂಸದ ರಮೇಶ್ ಕತ್ತಿ ವಿರುದ್ಧ ರಾಜ್ಯದ ಪ್ರತಿ ಠಾಣೆಯಲ್ಲಿ ದೂರು ದಾಖಲಿಸಲಾಗುತ್ತಿದೆ. ಕೂಡಲೇ ಪೊಲೀಸರು ಅವರನ್ನು ಬಂಧಿಸಿ ಕಾನೂನು ರೀತ್ಯ ಕ್ರಮ ತೆಗೆದುಕೊಳ್ಳಬೇಕು ಎಂದು ಕಾಂಗ್ರೆಸ್ ರಾಜ್ಯ ವಕ್ತಾರ ಹೊದಿಗೆರೆ ರಮೇಶ್ ತಿಳಿಸಿದರು.
ಚನ್ನಗಿರಿ ಪೊಲೀಸ್ ಠಾಣೆಯಲ್ಲಿ ಸೋಮವಾರ ಮಾಜಿ ಸಂಸದ ರಮೇಶ್ ಕತ್ತಿ ವಿರುದ್ಧ ದೂರು ನೀಡಿ ಮಾತನಾಡಿ, ಜವಾಬ್ದಾರಿಯುತ ಸ್ಥಾನದಲ್ಲಿದ್ದುಕೊಂಡು ಒಂದು ಸಮಾಜದ ವಿರುದ್ಧ ಅವಹೇಳನಕರವಾಗಿ ಮಾತನಾಡುವುದು ಸರಿಯಲ್ಲ. ಒಂದು ವೇಳೆ ಪೊಲೀಸರು ಅವರ ವಿರುದ್ಧ ಕ್ರಮ ಕೈಗೊಳ್ಳದಿದ್ದರೆ ರಾಜ್ಯವ್ಯಾಪಿ ಪ್ರತಿಭಟನೆ ನಡೆಸಲಾಗುತ್ತದೆ ಎಂದರು.
ನಮಗೆ ಸಂಸ್ಕಾರವಿಲ್ಲ ಎಂದು ಹೇಳುವ ಉನ್ನತ ಸಮುದಾಯದಲ್ಲಿ ಹುಟ್ಟಿದ ರಮೇಶ್ಕತ್ತಿ ಅವರಿಗೆ ತಂದೆ-ತಾಯಿ ಸಂಸ್ಕಾರ ಹೇಳಿಕೊಡಲಿಲ್ಲವೇ? ಸಮಾಜದ ಎಲ್ಲ ವರ್ಗದವರ ಜತೆ ಪ್ರೀತಿಯಿಂದ ಜೀವನ ಕಟ್ಟಿಕೊಂಡು ಬದುಕುತ್ತಿದ್ದೇವೆ. ಭವಿಷ್ಯದಲ್ಲಿ ರಾಜ್ಯದಲ್ಲಿ ಜಾತಿನಿಂದನೆ ಪ್ರಕರಣಗಳು ನಡೆಯಕೂಡದು ಎಂದು ಆಕ್ರೋಶ ವ್ಯಕ್ತಪಡಿಸಿದರು.
ಹಸಿರುಸೇನೆ ಅಧ್ಯಕ್ಷ ರಂಗನಾಥ ಬಸವಾಪುರ ಪೊಲೀಸರಿಗೆ ದೂರು ನೀಡಿದರು. ಕಾಂಗ್ರೆಸ್ ಮುಖಂಡ ಕೊಂಡದಹಳ್ಲಿ ಜಯಣ್ಣ, ಅಶೋಕ್ ಹರೋನಹಳ್ಳಿ, ಮಾದಿಗ ಸಮಾಜದ ಅಧ್ಯಕ್ಷ ಮಂಜಿನಾಥ್, ಪುರಸಭೆ ಸದಸ್ಯ ಜಿತೇಂದ್ರರಾಜ್ ಇದ್ದರು.