ವಿಜಯಪುರ: ಅಧಿಕಾರದ ಆಸೆಗಾಗಿ ಬುದ್ದ, ಬಸವ, ಅಂಬೇಡ್ಕರ್ ತತ್ವಕ್ಕೆ ತಿಲಾಂಜಲಿ ಇರಿಸಿ ಆರ್‌ಎಸ್‌ಎಸ್ ಓಲೈಕೆಗಾಗಿ ಸಿಎಂ ಸಿದ್ದರಾಮಯ್ಯ ವಿರುದ್ದ ಟೀಕೆ ಮಾಡುವ ಮಾಜಿ ಡಿಸಿಎಂ ಗೋವಿಂದ ಕಾರಜೋಳರಿಗೆ ಕೃಷ್ಣಾ ಮೇಲ್ದಂಡೆ ಯೋಜನೆ ಬಗ್ಗೆ ಮಾತನಾಡುವ ಯಾವುದೇ ನೈತಿಕ ಹಕ್ಕು ಇಲ್ಲ ಎಂದು ಕೆಪಿಸಿಸಿ ವಕ್ತಾರ ಎಸ್.ಎಂ. ಪಾಟೀಲ ಗಣಿಹಾರ ಕಿಡಿ ಕಾರಿದರು.
ಬಿಜೆಪಿ ಅಧಿಕಾರ ಅವಧಿಯಲ್ಲಿ ಜಲಸಂಪನ್ಮೂಲ ಸಚಿವರಾಗಿದ್ದ ಗೋವಿಂದ ಕಾರಜೋಳರು ಕೃಷ್ಣಾ ಮೇಲ್ದಂಡೆ ಯೋಜನೆ ಹಂತ - 3 ಕ್ಕೆ ತಾವು ನೀಡಿದ ಕೊಡುಗೆ ಏನು? ಎಂಬುದನ್ನು ಮೊದಲು ಸ್ಪಷ್ಟಪಡಿಸಲಿ. ಆ ಬಳಿಕ ಸಿದ್ದರಾಮಯ್ಯ ಅವರ ಸಾಧನೆ ಕುರಿತು ಪ್ರಶ್ನಿಸಲಿ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಅವರು ಹರಿಹಾಯ್ದರು.
ಈ ಹಿಂದೆ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಕೃಷ್ಣಾ ಕೊಳ್ಳದ ನೀರಾವರಿ ಯೋಜನೆಗೆ ಅನುದಾನ ಮೀಸಲಿಡುವ ಮೂಲಕ ಸಿದ್ದರಾಮಯ್ಯ ನುಡಿದಂತೆ ನಡೆದಿದ್ದಾರೆ. ಇದೇ ಜಿಲ್ಲೆಯವರಾದ ಎಂ.ಬಿ. ಪಾಟೀಲರು ನೀರಾವರಿ ಮಂತ್ರಿಯಾಗಿ ದೇಶವೇ ಮೆಚ್ಚುವ ಕಾರ್ಯ ಮಾಡಿದ್ದಾರೆ. ರಾಜ್ಯದ ಸಮಗ್ರ ನೀರಾವರಿಗೆ ಶ್ರಮಿಸಿದ್ದಾರೆ. ಅಂತೆಯೇ ಎಂ.ಬಿ. ಪಾಟೀಲರನ್ನು ಜನ ಭಗೀರಥ ಎಂದು ಕೊಂಡಾಡುತ್ತಾರೆ. ತಾವು ಸಹ ಇದೇ ಜಿಲ್ಲೆಯವರಾಗಿ ಮಾಡಿದ ಸಾಧನೆ ಏನು? ಎಂದು ಗಣಿಹಾರ ಪ್ರಶ್ನಿಸಿದರು.
ರಾಜ್ಯದ ಸಮಗ್ರ ನೀರಾವರಿ ಯೋಜನೆಗೆ ಎರಡು ಲಕ್ಷ ಕೋಟಿ ರೂ.ಅನುದಾನ ನೀಡುವುದಾಗಿ ಸಿದ್ದರಾಮಯ್ಯ ಅವರು ಹೇಳಿದ್ದು ನಿಜ. ಇದೀಗ ಅಧಿಕಾರಕ್ಕೆ ಬಂದು ಮೂರು ತಿಂಗಳಾಗಿದೆ. ಇನ್ನೂ ಸಾಕಷ್ಟು ಸಮಯಾವಕಾಶ ಇದೆ. ನುಡಿದಂತೆ ನಡೆಯುತ್ತಾರೆಂಬ ವಿಶ್ವಾಸ ಇದೆ. ಆದರೆ, ಯುಕೆಪಿ ರಾಷ್ಟ್ರೀಯ ಯೋಜನೆ ಮಾಡುವ ಬಗ್ಗೆ ಮಾತನಾಡುವ ಕಾರಜೋಳರು, ಕೇಂದ್ರ ಹಾಗೂ ರಾಜ್ಯ ಸರ್ಕಾರದಲ್ಲಿ ತಮ್ಮದೇ ಪಕ್ಷ ಅಧಿಕಾರದಲ್ಲಿ ಇದ್ದಾಗ ಮಾಡಲಿಲ್ಲವೇಕೆ? ಎಂದು ಪ್ರಶ್ನಿಸಿದರು.
ಲೋಕ ಸಭೆ ಚುನಾವಣೆ ಸಮೀಪಿಸುತ್ತಿದ್ದಂತೆ ಒಂದು ದೇಶ ಒಂದು ಚುನಾವಣೆ ಬಗ್ಗೆ ಬಿಜೆಪಿ ಮಾತನಾಡುತ್ತಿದೆ. ಒಕ್ಕೂಟ ವ್ಯವಸ್ಥೆಯಲ್ಲಿ ಇದು ಸಾಧ್ಯವಾ? ಎಂದ ಗಣಿಹಾರ, ಇದೊಂದು ಸಂವಿಧಾನ ಅಶಕ್ತಗೊಳಿಸುವ ಉದ್ದೇಶ ಹೊಂದಿದೆ ಎಂದರು.
ಈ ಬಾರಿ ಬಿಜೆಪಿಗೆ ಸೋಲಿಸಲು ಅಸಂಖ್ಯಾತ ಜನ ಪಣ ತೊಟ್ಟಿದ್ದಾರೆ. ಬಹುಸಂಖ್ಯಾತ ಹಿಂದುಳಿದ ವರ್ಗದವರು, ಅಲ್ಪಸಂಖ್ಯಾತರು, ದಲಿತರು ಒಟ್ಟಾಗಿ ಬಿಜೆಪಿ ಸೋಲಿಸಲು ಸಿದ್ದಾಗಿದ್ದಾರೆ. ಇದು ಬಿಜೆಪಿಗೆ ಮನವರಿಕೆಯಾಗುತ್ತಿದ್ದಂತೆ ಮತ್ತೆ ಎನ್‌ಡಿಎ ಮೈತ್ರಿಕೂಟದ ಮೊರೆ ಹೋಗಿದೆ. ಮಾತ್ರವಲ್ಲ, ಒಂದು ದೇಶ ಒಂದು ಚುನಾವಣೆಯಂಥ ಅಸಂವಿಧಾನಿಕ ಕ್ರಮ ಜಾರಿಗೆ ಮುಂದಾಗಿದೆ ಎಂದರು.
ರಾಷ್ಟ್ರಪತಿ ಹುದ್ದೆ ಅಲಂಕರಿಸಿದ ರಾಮನಾಥ ಕೋವಿಂದ ಅವರನ್ನು ಒಂದು ದೇಶ ಒಂದು ಚುನಾವಣೆಗೆ ಸಂಬಂಧಿಸಿದಂತೆ ಪರಾಮರ್ಶೆ ನಡೆಸಲು ರಚಿಸಿರುವ ಸಮಿತಿಗೆ ಅಧ್ಯಕ್ಷರನ್ನಾಗಿ ಮಾಡಲಾಗಿದೆ. ರಾಷ್ಟ್ರದ ಉನ್ನತ ಹುದ್ದೆ ಅಲಂಕರಿಸಿದ ನಾಯಕನನ್ನು ಇಂಥ ಸಣ್ಣ ಸಮಿತಿಗೆ ನೇಮಿಸಿರುವುದು ರಾಷ್ಟ್ರಪತಿ ಹುದ್ದೆಗೆ ಮಾಡುವ ಅವಮಾನ. ಅವರೊಬ್ಬ ದಲಿತ ಎಂಬ ಕಾರಣಕ್ಕೆ ಹೀಗೆ ನಡೆಸಿಕೊಳ್ಳುತ್ತಿದ್ದಾರೋ ಹೇಗೆ? ಎಂಬುದು ತಿಳಿಯದಾಗಿದೆ ಎಂದರು.
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ಮೀಸಲಿಟ್ಟ ಅನುದಾನವನ್ನು ಗ್ಯಾರಂಟಿ ಯೋಜನೆಗಳಿಗೆ ಡೈವರ್ಟ್ ಮಾಡಲಾಗುತ್ತಿದೆ ಎಂದು ಕಾರಜೋಳ ಅಪಪ್ರಚಾರ ಮಾಡುತ್ತಿದ್ದಾರೆ. ಆದರೆ, ಬ್ಯಾಕ್‌ಲಾಗ್ ಹುದ್ದೆಗಳ ಭರ್ತಿ, ಎಸ್‌ಸಿ-ಎಸ್‌ಟಿ ಕಲ್ಯಾಣಕ್ಕಾಗಿ ಸಾವಿರಾರು ಕೋಟಿ ರೂ. ಅನುದಾನ, ಸರ್ಕಾರಿ ಗುತ್ತಿಗೆಯಲ್ಲಿ 1 ಕೋಟಿ ರೂ. ಮೀಸಲು ಹೀಗೆ…. ಆ ಸಮುದಾಯಗಳಿಗೆ ಸಿದ್ದರಾಮಯ್ಯ ದೊಡ್ಡಮಟ್ಟದ ಕೊಡುಗೆಯನ್ನೇ ನೀಡಿದ್ದಾರೆ. ದಲಿತರ ಕಲ್ಯಾಣವೇ ಕಾಂಗ್ರೆಸ್ ಸರ್ಕಾರದ ಧ್ಯೇಯ ಎಂದರು.
ಗ್ಯಾರಂಟಿ ಯೋಜನೆಗಳ ಯಶಸ್ವಿ ಬಗ್ಗೆ ನಡೆದ ಸಮೀಕ್ಷೆಯಲ್ಲಿ ಶೇ.72 ರಷ್ಟು ಜನರು ಈ ಯೋಜನೆ ಬಗ್ಗೆ ಸಂತಸ ವ್ಯಕ್ತಪಡಿಸಿದ್ದಾರೆ. ಬಹುಸಂಖ್ಯಾತ ಪ್ರಜೆಗಳಿಗೆ ಈ ಯೋಜನೆಗಳ ಲಾಭ ತಟ್ಟಿದೆ, ಶೇ.26 ರಷ್ಟು ಜನರು ಇದನ್ನು ವಿರೋಧಿಸಿದರೂ ಆ ಯೋಜನೆಗಳ ಫಲ ಜನರಿಗೆ ತಲುಪಿದೆ ಎಂದರು.
ಮುಖಂಡರಾದ ನಾಗರಾಜ ಲಂಬು, ವಸಂತ ಹೊನಮೊಡೆ, ಫಯಾಜ್ ಕಲಾದಗಿ ಮತ್ತಿತರರಿದ್ದರು.