ಜಿಲ್ಲೆ

ಟಿಪ್ಪು ಹೆಸರು ಹೇಳುವುದನ್ನು ಕಾಂಗ್ರೆಸ್ ಬಿಡಲಿ: ಮೈಸೂರು ನಗರ ಬಿಜೆಪಿ ವಕ್ತಾರ ಮೋಹನ್

ಮೈಸೂರು: ಇತಿಹಾಸ ತಿರುಚುವ ಕೆಲಸವನ್ನು ಕಾಂಗ್ರೆಸ್ ಮಾಡುತ್ತಿದೆ. ಕನ್ನಡಿಗರ ಮೇಲೆ ದೌರ್ಜನ್ಯ ನಡೆಸಿದ್ದ ಟಿಪ್ಪು ಹೆಸರು ಹೇಳುವುದನ್ನು ಕಾಂಗ್ರೆಸ್ ನಾಯಕರು ಬಿಡಬೇಕು ಎಂದು ಮೈಸೂರು ನಗರ ಬಿಜೆಪಿ ವಕ್ತಾರ ಮೋಹನ್ ವಾಗ್ದಾಳಿ ನಡೆಸಿದರು.

ಈ ವಾರ ಒಂದು ರೀತಿಯಲ್ಲಿ ಹಾಸ್ಯಭರಿತ ವಾರವಾಗಿದ್ದು, ಸಚಿವ ಎಚ್.ಸಿ.ಮಹದೇವಪ್ಪ, ಎಂಎಲ್‌ಸಿ ಡಾ.ಯತೀಂದ್ರ ಹೇಳಿದ್ದನ್ನೆಲ್ಲಾ ಕಾಂಗ್ರೆಸ್ಸಿಗರು ಒಪ್ಪುತ್ತಿದ್ದಾರೆ. ಆಡಳಿತ ಮಾಡುವವರು ಮೊದಲು ಇತಿಹಾಸ ತಿಳಿಯಬೇಕು, ಇಲ್ಲದಿದ್ದಲ್ಲಿ ಇಂತಹ ಅವಾಂತರಗಳು ಉಂಟಾಗುತ್ತವೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಟೀಕಿಸಿದರು.

ಹೈದರಾಲಿ, ಟಿಪ್ಪು ಸುಲ್ತಾನ್ 40 ವರ್ಷಗಳ ಕಾಲ ಮಾತ್ರ ಆಳ್ವಿಕೆ ನಡೆಸಿದ್ದು, 40 ವರ್ಷದಲ್ಲಿ ಹೇಳಿಕೊಳ್ಳುವ ಸಾಧನೆ ಏನೂ ಅವರು ಮಾಡಿಲ್ಲ. ಇತಿಹಾಸ ತಿರುಚುವ ಕೆಲಸವನ್ನು ಕಾಂಗ್ರೆಸ್ ಏಕೆ ಮಾಡುತ್ತಿದೆ. ಕನ್ನಡಿಗರ ಮೇಲೆ ದೌರ್ಜನ್ಯ ನಡೆಸಿದ ಟಿಪ್ಪು ಹೆಸರು ಹೇಳುವುದನ್ನು ಕಾಂಗ್ರೆಸ್ ನಾಯಕರು ಬಿಡಲಿ ಎಂದರು.

ಕಾಂಗ್ರೆಸ್ ನಾಯಕರು ಮುಸ್ಲಿಂ ಓಲೈಕೆ ರಾಜಕಾರಣ ನಿಲ್ಲಿಸಬೇಕು. ಮುಸ್ಲಿಂ ಓಲೈಕೆಗಾಗಿಯೇ ಯಾವಾಗಲು ಟಿಪ್ಪು ಹೆಸರು ಹೇಳುತ್ತಿದ್ದಾರೆ. ಕೆಆರ್‌ಎಸ್‌ಗೂ ಟಿಪ್ಪುಗೂ ಸಂಬಂಧ ಕಲ್ಪಿಸುತ್ತಿದ್ದಾರೆ. ಮುಂದೆ ಸರಗೂರನ್ನು ಸರ್ಫರಾಜೂರು ಮಾಡುತ್ತಾರೆ ಎಂದು ಟೀಕಿಟಿದರು.

ಮೈಸೂರು ನಗರ ಬಿಜೆಪಿ ಅಧ್ಯಕ್ಷ ಎಲ್.ನಾಗೇಂದ್ರ ಮಾತನಾಡಿ, ರಾಜ್ಯ ಸರ್ಕಾರದ ವೈಫಲ್ಯ ಮುಚ್ಚಿಕೊಳ್ಳಲು ಹಾಗೂ ಜನರ ಗಮನ ಬೇರೆಡೆಗೆ ಸೆಳೆಯಲು ಕಾಂಗ್ರೆಸ್ ನಾಯಕರು ಮತಗಳ ಕಳ್ಳತನ ಎಂಬ ಸುಳ್ಳು ಆರೋಪ ಮಾಡುತ್ತಿದ್ದಾರೆ. ಕಾಂಗ್ರೆಸ್ ನಾಯಕರು ಸುಳ್ಳು ವದಂತಿಗಳನ್ನು ಹಬ್ಬಿಸುತ್ತಿದ್ದು, ಕಾಂಗ್ರೆಸ್‌ನ ರಾಷ್ಟ್ರೀಯ ನಾಯಕರಿಗೆ ನಾಚಿಕೆ ಆಗಬೇಕಿದೆ. ಚುನಾವಣೆಯ ಸೋಲು ಸೋಲೇ ಆಗಿದ್ದು, ಈಗ ಎಷ್ಟೇ ಬೊಂಬಡಾ ಬಜಾಯಿಸಿದರೂ ನಿಮ್ಮನ್ನು ಲೋಕಸಭೆಗೆ ಕಳುಹಿಸುವುದಿಲ್ಲ. ಕಾಂಗ್ರೆಸ್ ನಾಯಕರು ತಪ್ಪು ಮಾಹಿತಿ ನೀಡಿ ಜನರಲ್ಲಿ ಗೊಂದಲ ಸೃಷ್ಟಿಸುತ್ತಿದ್ದಾರೆ. ರಾಜ್ಯ ಸರ್ಕಾರದ ವೈಫಲ್ಯ ಮುಚ್ಚಿಕೊಂಡು, ಜನರ ಗಮನ ಬೇರೆಡೆಗೆ ಸೆಳೆಯಲು ಪ್ರಯತ್ನಿಸುತ್ತಿದ್ದಾರೆ ಎಂದು ದೂರಿದರು.

ಕಳೆದ ಲೋಕಸಭಾ ಚುನಾವಣೆಯಲ್ಲಿ ಮೈಸೂರು-ಕೊಡಗು ಕ್ಷೇತ್ರದಲ್ಲಿ ಮತಗಳ ಕಳ್ಳತನ ಮಾಡಲಾಗಿದೆ ಎಂಬ ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ಆರೋಪಕ್ಕೆ ತಿರುಗೇಟು ನೀಡಿದ ಅವರು, ಎನ್.ಆರ್. ಕ್ಷೇತ್ರದಲ್ಲಿ ಕಾಂಗ್ರೆಸ್‌ಗೆ 70 ಸಾವಿರ ಲೀಡ್ ಸಿಕ್ಕಿದ್ದು, ಹಾಗಾದರೆ ಅಲ್ಲಿ ನೀವು ಮತಗಳ ಕಳ್ಳತನ ಮಾಡಿದ್ದೀರಾ? ನೀವು ಮತದಾರರಿಗೆ ತಲಾ 500 ರೂ. ಹಂಚಿಲ್ಲವೇ? ಈ ಬಗ್ಗೆ ಚಾಮುಂಡೇಶ್ವರಿ ಸನ್ನಿಧಾನಕ್ಕೆ ಬಂದು ಪ್ರಮಾಣ ಮಾಡಿ ಎಂದು ಸವಾಲು ಹಾಕಿದರು. ಲೋಕಸಭಾ ಚುನಾವಣೆಯನ್ನು ಬಿಜೆಪಿ ಪ್ರಾಮಾಣಿಕವಾಗಿ ಎದುರಿಸಿದೆ. ಯದುವೀರ್ ಅವರನ್ನು ಜನರು ಗೌರವ ಭಾವನೆಯಿಂದ ಕಂಡು ಮತ ಚಲಾಯಿಸಿದ್ದಾರೆ ಎಂದರು.

ಸುದ್ದಿಗೋಷ್ಠಿಯಲ್ಲಿ ನಗರ ಪ್ರಧಾನ ಕಾರ್ಯದರ್ಶಿ ಕೇಬಲ್ ಮಹೇಶ್, ಮಾಧ್ಯಮ ಸಂಚಾಲಕ ಮಹೇಶ್ ರಾಜೇ ಅರಸ್, ಸಂತೋಷ್ ಕುಮಾರ್ ಇತರರಿದ್ದರು.