ವಿಜಯಪುರ ಜಿಪಂ ಸಭಾಂಗಣದಲ್ಲಿ ಸಚಿವ ಎಂ.ಬಿ. ಪಾಟೀಲರು ಬರ ನಿರ್ವಹಣೆ ಪ್ರಗತಿ ಪರಿಶೀಲನೆ ಸಭೆ ನಡೆಸಿದರು.  
ಜಿಲ್ಲೆ

ನೇಹಾಳ ಕೊಲೆ ಪ್ರಕರಣದಿಂದ ಕಾಂಗ್ರೆಸ್‌ಗೆ ಹಿನ್ನಡೆ ? ಸಚಿವ ಎಂ.ಬಿ. ಪಾಟೀಲ ಪ್ರತಿಕ್ರಿಯೆ ಏನು ಗೊತ್ತಾ?

ವಿಜಯಪುರ: ಹುಬ್ಬಳ್ಳಿಯಲ್ಲಿ ವಿದ್ಯಾರ್ಥಿನಿ ನೇಹಾ ಹಿರೇಮಠ ಕೊಲೆ ಪ್ರಕರಣದಿಂದಾಗಿ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಹಿನ್ನಡೆಯಾಗಲಿದೆ ಎಂಬ ವದಂತಿಗೆ ತೆರೆ ಎಳೆದಿರುವ ಬೃಹತ್ ಹಾಗೂ ಮಧ್ಯಮ ಕೈಗಾರಿಕೆ ಸಚಿವ ಎಂ.ಬಿ. ಪಾಟೀಲರು, ಅಂಥ ಯಾವುದೇ ಹಿನ್ನಡೆ ಇಲ್ಲ; ಜನ ಪ್ರಬುದ್ಧರಿದ್ದಾರೆ ಎಂದರು.

ನೇಹಾಳ ಕೊಲೆ ಪ್ರಕರಣದಿಂದ ಕಾಂಗ್ರೆಸ್‌ಗೆ ಹಿನ್ನಡೆಯಾಗುತ್ತದೆ ಎಂದು ಯಾರು ಹೇಳಿದರು? ಸಮೀಕ್ಷೆ ನಡೆಸಿದ್ದೀರಾ? ಅಂಥ ಯಾವುದೇ ಹಿನ್ನಡೆ ಆಗುವುದಿಲ್ಲ. ಬಿಜೆಪಿಯವರು ಚುನಾವಣೆಯ ಕಾರಣದಿಂದ ಹಾಗೆ ಮಾತನಾಡುತ್ತಿದ್ದಾರೆ. ಬಿಜೆಪಿಯವರಿಗೆ ಬದುಕು ಕಟ್ಟಿಕೊಡುವ ಕೆಲಸ ಇಲ್ಲ, ಭಾವನೆಗಳನ್ನು ಕೆರಳಿಸುವ ಕೆಲಸ ಇದೆ. ಹಿಜಾಬ್ ಹಲಾಲ್‌ನಂತಹ ಘಟನೆಗಳನ್ನು ಇಂದಿಗೂ ಮಾಡುತ್ತಿದ್ದಾರೆ ಎಂದು ಮಂಗಳವಾರ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದರು.

ನೇಹಾ ಹಿರೇಮಠ ಕೊಲೆಯ ಆರೋಪಿಗೆ ಗೆಲ್ಲು ಶಿಕ್ಷೆ ಆಗಬೇಕು. ಇಂಥ ಘಟನೆಗಳ ಪ್ರಕರಣಗಳನ್ನು ಫಾಸ್ಟ್‌ಟ್ರ್ಯಾಕ್ ಕೋರ್ಟ್‌ಗಳಲ್ಲಿ ಹಾಕಿ ತ್ವರಿತ ನ್ಯಾಯ ನೀಡಬೇಕು. ತಪ್ಪಿತಸ್ಥ ಆರೋಪಿಗೆ ಕಠಿಣ ಮತ್ತು ಗಲ್ಲು ಶಿಕ್ಷೆ ನೀಡಬೇಕು. ಕೇಂದ್ರ ಹಾಗೂ ರಾಜ್ಯ ಸರ್ಕಾರ ಕೂಡಿ ವಿಶೇಷ ಕಾನೂನಿನ ಜಾರಿ ಮಾಡಬೇಕು. ವಿಶೇಷ ನ್ಯಾಯಾಲಯ ಸ್ಥಾಪನೆ ಮಾಡಬೇಕು. ನೇಹಾ ಕೊಲೆ ಪ್ರಕರಣ ಒಂದೇ ಕೇಸಲ್ಲ ಇದೇ ರೀತಿ ಇತರೆ ಪ್ರಕರಣಗಳು ಬಾಲಕಿಯರ ಮೇಲೆ ಅತ್ಯಾಚಾರ ಮಾಡಿದ ಪ್ರಕರಣಗಳನ್ನು ತ್ವರಿತ ನ್ಯಾಯಾಲಯದಲ್ಲಿ ವಿಚಾರಣೆ ಮಾಡಬೇಕು ಎಂದರು.

ಮುಸ್ಲಿಮರಿಗೆ ಸಂಪತ್ತಿನ ಹಂಚಿಕೆ ವಿಚಾರ

ದೇಶದ ಸಂಪತ್ತಿನ ಮೇಲೆ ಅಲ್ಪ ಸಂಖ್ಯಾತರಿಗೆ ಮೊದಲ ಹಕ್ಕು ಇದೆ ಎಂದು ಮನಮೋಹನ್‌ಸಿಂಗ್ ಹೇಳಿದ್ದಾರೆಂಬ ಪಿಎಂ ಮೋದಿ ಆರೋಪಕ್ಕೆ ತಿರುಗೇಟು ನೀಡಿರುವ ಸಚಿವ ಎಂ.ಬಿ. ಪಾಟೀಲ, ದೇಶದ ಹಿಂದುಳಿದವರು, ದಲಿತರು, ಅಲ್ಪ ಸಂಖ್ಯಾತರು, ಬಡವರಿಗೆ ದೇಶದ ಸಂಪತ್ತಿನ ಮೇಲೆ ಅಧಿಕಾರವಿದೆ ಎಂದು ಮಾಜಿ ಪ್ರಧಾನಿ ಮನಮೋಹನಸಿಂಗ್ ಹೇಳಿದ್ದಾರೆ. ಅವರ ಆ ಹೇಳಿಕೆಯನ್ನು ಪ್ರಧಾನಿ ಮೋದಿ ತಿರುಚಿದ್ದಾರೆ. ಈ ಮೂಲಕ ಕೀಳು ಮಟ್ಟಕ್ಕೆ ಇಳಿದಿದ್ದಾರೆ ಎಂದರು.
ಪ್ರಧಾನಿಯವರ ಹೇಳಿಕೆ ಕುರಿತು ತೀವ್ರವಾಗಿ ಖಂಡಿಸುತ್ತೇವೆ, ಈ ಕೂಡಲೇ ಅವರು ಕ್ಷಮೆ ಕೇಳಬೇಕು, ಚುನಾವಣೆ ಆಯೋಗ ಪ್ರಧಾನಿ ಮೇಲೆ ಕ್ರಮ ಕೈಗೊಳ್ಳಬೇಕು ಎಂದರು.

ಪ್ರಧಾನಿ ಅಭ್ಯರ್ಥಿ ಆಯ್ಕೆ ಹೈಕಮಾಂಡ್‌ಗೆ ಬಿಟ್ಟದ್ದು

ಕಾಂಗ್ರೆಸ್‌ನಲ್ಲಿ ಚುನಾವಣೆ ಪೂರ್ವದಲ್ಲಿಯೇ ಪ್ರಧಾನಿ ಅಭ್ಯರ್ಥಿಯನ್ನು ಘೋಷಣೆ ಮಾಡುವ ಪದ್ಧತಿ ಇಲ್ಲ ಎಂದು ಸಚಿವ ಎಂ.ಬಿ. ಪಾಟೀಲ ಹೇಳಿದರು.
ಈ ಹಿಂದೆ ಅವಕಾಶ ಇದ್ದಾಗಲೂ ಸೋನಿಯಾ ಗಾಂಧಿ ಅವರು ಪ್ರಧಾನಿಯಾಗದೇ ಮನಮೋಹನ್ ಸಿಂಗ್ ಅವರಿಗೆ ಅವಕಾಶ ಕಲ್ಪಿಸಿದರು. ಆ ಮೂಲಕ ತ್ಯಾಗ ಮಾಡಿದರು. ನಮಗೆ ಪ್ರಧಾನಿ ಯಾರಾಗಬೇಕೆಂಬುದಕ್ಕಿಂತ ಪ್ರಜಾಪ್ರಭುತ್ವ ಉಳಿಯಬೇಕೆಂಬುದೇ ಮಹತ್ವದ್ದು ಎಂದರು.
ಕಾಂಗ್ರೆಸ್‌ನಲ್ಲಿ ಯಾವುದೇ ಭಿನ್ನಾಭಿಪ್ರಾಯ ಇಲ್ಲ. ಈ ಬಾರಿ 20ಕ್ಕಿಂತ ಅಧಿಕ ಸ್ಥಾನಗಳಲ್ಲಿ ಗೆಲ್ಲುವ ವಿಶ್ವಾಸ ವ್ಯಕ್ತಪಡಿಸಿದರು.