ವಿಜಯವಾಣಿ ಸುದ್ದಿಜಾಲ ಧಾರವಾಡ
ಬೆಳಗಾವಿ ಕಾಂಗ್ರೆಸ್ ಅಧಿವೇಶನವು ಕರ್ನಾಟಕ ಏಕೀಕರಣಕ್ಕೆ ಪ್ರೇರಣೆಯಾದ ಅಧಿವೇಶನವಾಗಿದೆ. ಕನ್ನಡಿಗರಲ್ಲಿ ರಾಷ್ಟ್ರೀಯ ಭಾವನೆ ಹಾಗೂ ಕರ್ನಾಟಕ ಏಕೀಕರಣಕ್ಕೆ ಈ ಅಧಿವೇಶನವು ಬುನಾದಿಯಾಯಿತು ಎಂದು ಜೆಎಸ್ಎಸ್ ಕಾರ್ಯದರ್ಶಿ ಡಾ. ಅಜಿತ ಪ್ರಸಾದ ಹೇಳಿದರು.
ರಾಷ್ಟ್ರೀಯ ಕಾಂಗ್ರೆಸ್ ಬೆಳಗಾವಿ ಅಧಿವೇಶನ ಶತಮಾನೋತ್ಸವ ನಿಮಿತ್ತ ನಗರದ ಜೆಎಸ್ಎಸ್ನ ಶ್ರೀ ಮಂಜುನಾಥೇಶ್ವರ ಸ್ನಾತಕ ಮತ್ತು ಸ್ನಾತಕೋತ್ತರ ಅಧ್ಯಯನ ಸಂಸ್ಥೆಯಲ್ಲಿ ವರ್ಷದುದ್ದಕ್ಕೂ ನಡೆಸಲಾಗುವ ಉಪನ್ಯಾಸ ಮಾಲಿಕೆಗೆ ಇತ್ತೀಚೆಗೆ ಚಾಲನೆ ನೀಡಿ ಅವರು ಮಾತನಾಡಿದರು.
ಇತಿಹಾಸದ ಅಧ್ಯಯನ ನಮ್ಮ ಸಂಸ್ಕೃತಿ ಸಮಾಜದ ಬಗ್ಗೆ ನಮಗೆ ಅರಿವು ಮೂಡಿಸುತ್ತದೆ. ದೇಶಾಭಿಮಾನ ಹೆಚ್ಚಿಸುವ ಕಾರ್ಯಕ್ರಮಗಳು ಹೆಚ್ಚಾಗಿ ನಡೆಯಲಿ. ಸರ್ಕಾರದ ಆದೇಶದ ಪ್ರಕಾರ ವರ್ಷದುದ್ದಕ್ಕೂ ಈ ಅಧಿವೇಶನಕ್ಕೆ ಸಂಬಂಧಿಸಿದ ವಿವಿಧ ಕಾರ್ಯಕ್ರಮಗಳನ್ನು ಕಾಲೇಜಿನಲ್ಲಿ ಏರ್ಪಡಿಸಲಾಗುವುದು ಎಂದರು.
ಪ್ರೊ. ಕೆ.ಎಸ್. ಕೌಜಲಗಿ ಮಾತನಾಡಿದರು. ಡಾ. ಸೂರಜ್ ಜೈನ್, ಮಹಾವೀರ ಉಪಾಧ್ಯೆ, ಡಾ. ಆರ್.ವಿ. ಚಿಟಗುಪ್ಪಿ, ಪ್ರೊ. ರಜನಿ ತಾಳಿಕೋಟಿ, ಪ್ರೊ. ಸ್ಮಿತಾ ಪಾಟೀಲ, ಇತರರು ಇದ್ದರು.