ವಿಜಯಪುರ ಕೇಂದ್ರ ಬಸ್ ನಿಲ್ದಾಣದಲ್ಲಿ ಪ್ರಯಾಣಿಕರು ಬಸ್‌ಗಳಿಲ್ಲದೇ ಪರದಾಡಿದರು. 
ಜಿಲ್ಲೆ

ಕಾಂಗ್ರೆಸ್ ಸಾಧನಾ ಸಮಾವೇಶ ತಂದ ಸಂಕಟ, ಬಸ್‌ಗಳಿಲ್ಲದೇ ಪ್ರಯಾಣಿಕರ ಪರದಾಟ

Vijyapura - Parsuram Bhasagi

ವಿಜಯಪುರ: ರಾಜ್ಯ ಸರ್ಕಾರದಿಂದ ವಿಜಯನಗರ ಜಿಲ್ಲೆಯ ಹೊಸಪೇಟೆಯಲ್ಲಿ ನಡೆಯುತ್ತಿರುವ ಸಾಧನಾ ಸಮಾವೇಶ ಹಾಗೂ ಹಕ್ಕುಪತ್ರ ವಿತರಣೆ ಕಾರ್ಯಕ್ರಮ ಹಿನ್ನೆಲೆ ಜಿಲ್ಲೆಯಿಂದ ಹೆಚ್ಚಿನ ಪ್ರಮಾಣದಲ್ಲಿ ಬಸ್‌ಗಳು ಸಂಚರಿಸುತ್ತಿರುವ ಹಿನ್ನೆಲೆ ಸೋಮವಾರ ಪ್ರಯಾಣಿಕರು ತೀವ್ರವಾಗಿ ಪರದಾಡಿದರು.

ನಗರದ ಕೇಂದ್ರ ಬಸ್ ನಿಲ್ದಾಣದಲ್ಲಿ ಮಧ್ಯಾಹ್ನದಿಂದಲೇ ಪ್ರಯಾಣಿಕರು ಬಸ್‌ಗಳಿಗಾಗಿ ತಡಕಾಡಿದರು. ಬಸ್ ಸಂಚಾರದಲ್ಲಿ ವ್ಯತ್ಯಯವಾಗಲಿದೆ ಎಂದು ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಅಧಿಕಾರಿಗಳು ಮುಂಚಿತವಾಗಿಯೇ ತಿಳಿಸಿದ್ದರು. ಮೇ 19 ರ ಸಂಜೆಯಿಂದ ಮೇ 21ರ ಬೆಳಗಿನ ಜಾವದವರೆಗೆ ದೈನಂದಿನ ಕಾರ್ಯಾಚರಣೆಯಾಗುತ್ತಿರುವ ಅನುಸೂಚಿಗಳ ಟ್ರಿಪ್‌ನಲ್ಲಿ ವ್ಯತ್ಯವಾಗಲಿದೆ ಎಂದು ವಿಭಾಗೀಯ ನಿಯಂತ್ರಣಾಧಿಕಾರಿ ನಾರಾಯಣಪ್ಪ ಕುರುಬರ ತಿಳಿಸಿದ್ದರು. ಆದರೂ, ಪ್ರಯಾಣಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದರಿಂದ ತೀವ್ರವಾಗಿ ತೊಂದರೆ ಅನುಭವಿಸಬೇಕಾಯಿತು.

ಜಿಲ್ಲೆಯಿಂದ 10,188 ಫಲಾನುಭವಿಗಳು

ಹೊಸಪೇಟೆಯಲ್ಲಿ ಒಂದು ಲಕ್ಷ ಕುಟುಂಬಗಳಿಗೆ ಕಂದಾಯ ಗ್ರಾಮ ಹಕ್ಕು ಪತ್ರ ಸಮರ್ಪಣೆ ಮಾಡುವುದರೊಂದಿಗೆ ನೆಮ್ಮದಿ ಕಲ್ಪಿಸಲಾಗುತ್ತಿದೆ. ಜಿಲ್ಲೆಯಿಂದ 9782 ಕಂದಾಯ ಗ್ರಾಮಗಳ ಫಲಾನುಭವಿಗಳು, ದರಖಾಸ್ತು ಪೋಡಿ ಫಲಾನುಭವಿಗಳು 14, ಪೋಡಿ ಮುಕ್ತ ಗ್ರಾಮಗಳ ಫಲಾನುಭವಿಗಳು 139 ಹಾಗೂ 253 ಪೌತಿ ಖಾತೆ ಫಲಾನುಭವಿಗಳು ಸೇರಿದಂತೆ ಜಿಲ್ಲೆಯಿಂದ 10,188 ಫಲಾನುಭವಿಗಳು ಸವಲತ್ತುಗಳ ವಿತರಣಾ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.

ಸವಲತ್ತುಗಳ ವಿತರಣಾ ಕಾರ್ಯಕ್ರಮಕ್ಕೆ ಜಿಲ್ಲೆಯ ಫಲಾನುಭವಿಗಳನ್ನು ಕರೆದೊಯ್ಯಲು ಕೆಎಸ್‌ಆರ್‌ಟಿಸಿ ವತಿಯಿಂದ 200 ಬಸ್‌ಗಳ ವ್ಯವಸ್ಥೆ ಮಾಡಲಾಗಿದೆ. ಪ್ರತಿ ಬಸ್‌ಗೆ ಓರ್ವರಂತೆ ವಿಎಓ-ಎಸ್‌ಡಿಎಗಳನ್ನು ಮಾರ್ಗಾಧಿಕಾರಿಗಳೆಂದು ನೇಮಕ ಮಾಡಿ ಅವರಿಗೆ ಸಹಾಯಕರಾಗಿ ಗ್ರಾಮ ಸಹಾಯಕರನ್ನು ನೇಮಿಸಲಾಗಿದೆ. ಸಂಪೂರ್ಣ ಮೇಲುಸ್ತುವಾರಿ ನೋಡಿಕೊಳ್ಳುವಂತೆ ಆಯಾ ತಾಲೂಕಿನ ತಹಸೀಲ್ದಾರ್-ಉಪವಿಭಾಗಾಧಿಕಾರಿಗಳನ್ನು ಸೂಚಿಸಿ, ಜಿಲ್ಲಾ ಮಟ್ಟದ ಅಧಿಕಾರಿಗಳನ್ನು ನೇಮಿಸಲಾಗಿದೆ ಎಂದು ಜಿಲ್ಲಾಧಿಕಾರಿ ಟಿ.ಭೂಬಾಲನ್ ತಿಳಿಸಿದ್ದಾರೆ.