ಶಿರಸಿ: ಕಾಂಗ್ರೆಸ್ ಪಕ್ಷವು ಕುಟುಂಬ ರಾಜಕಾರಣದ ಮೂಲಕ ದೇಶದ ಜನರ ಹಿತವನ್ನೇ ಬಲಿಕೊಟ್ಟಿದೆ. ಕುಟುಂಬ ರಾಜಕಾರಣಕ್ಕೆ ಅಂತ್ಯಹಾಡಿ, ದೇಶವನ್ನು ಪ್ರಗತಿ ಪಥದತ್ತ ಸಾಗಿಸಿದವರು ಪ್ರಧಾನಿ ನರೇಂದ್ರ ಮೋದಿ ಎಂದು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು.
ನಗರದ ದೀನದಯಾಳ ಸಭಾಭವನದಲ್ಲಿ ಬುಧವಾರ ಬಿಜೆಪಿ ಸದಸ್ಯತ್ವ ಅಭಿಯಾನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. 10 ವರ್ಷದಲ್ಲಿ ಒಂದೇ ಒಂದು ಭ್ರಷ್ಟಾಚಾರ ಇಲ್ಲದೆ ನರೇಂದ್ರ ಮೋದಿ ಅವರು ಆಡಳಿತ ನಡೆಸುತ್ತಿದ್ದಾರೆ. ಒಂದು ಪಕ್ಷಕ್ಕೆ ಸಿದ್ಧಾಂತಗಳು ಎಷ್ಟು ಮುಖ್ಯವೋ ಕಾರ್ಯ ಸಿದ್ಧಾಂತವೂ ಅಷ್ಟೇ ಮುಖ್ಯವಾಗಿರುತ್ತದೆ. ಆರ್ಟಿಕಲ್ 370ನ್ನು ರದ್ದು ಮಾಡಿದ ಕೀರ್ತಿ ಬಿಜೆಪಿಗಿದೆ. ನಮ್ಮ ಯೋಜನೆಗಳಿಂದ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಫಲ ಸಿಕ್ಕಿದೆ. ಹೊಸ ಶಿಕ್ಷಣ ನೀತಿ ಜಾರಿಗೆ ತರಲಾಗಿದೆ. ದೇಶ ಮೊದಲು ಎಂಬ ಭಾವನೆ ಬಂದು ಮತ್ತೊಮ್ಮೆ ನಮ್ಮ ದೇಶ ವಿಶ್ವಗುರು ವನ್ನಾಗಿಸಲು ಶ್ರಮಿಸುತ್ತಿದ್ದೇವೆ ಎಂದರು.
ಸದಸ್ಯತ್ವ ಅಭಿಯಾನಕ್ಕೆ ದೇಶಾದ್ಯಂತ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಉತ್ತರ ಕನ್ನಡ ಜಿಲ್ಲೆಯಲ್ಲಿ 4ಲಕ್ಷಕ್ಕೂ ಅಧಿಕ ಸದಸ್ಯತ್ವ ಮಾಡುವ ಗುರಿ ನಮ್ಮದಾಗಿದೆ. ಮತಗಳು ಕಡಿಮೆ ಬಂದಿರುವ ಬೂತ್‌ಗಳಲ್ಲಿ ಸದಸ್ಯತ್ವ ಹೆಚ್ಚಾಗುವಂತೆ ನೋಡಿಕೊಳ್ಳಬೇಕು. ಇದೊಂದು ಜನಾಂದೋಲನ ರೀತಿಯಲ್ಲಿ ನಡೆಯಬೇಕು ಎಂದರು.
ಬಿಜೆಪಿ ಜಿಲ್ಲಾಧ್ಯಕ್ಷ ಎನ್.ಎಸ್. ಹೆಗಡೆ ಮಾತನಾಡಿ, ಜಿಲ್ಲೆಯಲ್ಲಿ ಸದಸ್ಯತ್ವ ಅಭಿಯಾನವನ್ನು ಯಶಸ್ವಿಯಾಗಿಸಲು ತಂಡಗಳನ್ನು ರಚಿಸಲಾಗಿದೆ ಎಂದರು. ಗುರುಪ್ರಸಾದ ಹೆಗಡೆ ಹರ್ತೆಬೈಲ್, ಎಂ.ಜಿ. ನಾಯ್ಕ, ವೆಂಕಟೇಶ ನಾಯ್ಕ, ಶಿವಾಜಿ ನರ್ಸಾನಿ, ಆರ್.ಡಿ. ಹೆಗಡೆ, ಪ್ರೇಮಕುಮಾರ, ನಗರಸಭೆ ಅಧ್ಯಕ್ಷೆ ಶರ್ಮಿಳಾ ಮಾದನಗೇರಿ ಇತರರು ಇದ್ದರು.