ಮೈಸೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್‌ಗೆ ರಾಜ್ಯಪಾಲರು ಅನುಮತಿ ನೀಡಿರುವ ಕ್ರಮ ಖಂಡಿಸಿ ಕಾಂಗ್ರೆಸ್ ಕಾರ್ಯಕರ್ತರು ನಗರದಲ್ಲಿ ಸೋಮವಾರ ಬೃಹತ್ ಪ್ರತಿಭಟನೆ ನಡೆಸಿದರು.
ನಗರದ ಗಾಂಧಿ ವೃತ್ತದಲ್ಲಿ ಸೇರಿದ ಸಾವಿರಾರು ಕಾರ್ಯಕರ್ತರು, ರಾಜ್ಯಪಾಲರು, ಬಿಜೆಪಿ, ಜೆಡಿಎಸ್ ವಿರುದ್ಧ ಘೋಷಣೆಗಳನ್ನು ಕೂಗಿ, ತಕ್ಷಣವೇ ಪ್ರಾಸಿಕ್ಯೂಷನ್‌ಗೆ ನೀಡಿರುವ ಅನುಮತಿ ಹಿಂಪಡೆಯಬೇಕು ಎಂದು ಆಗ್ರಹಿಸಿದರು.
ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಮಾತನಾಡಿ, ಕೇಂದ್ರ ಸರ್ಕಾರದ ಸಹಕಾರದಿಂದ ರಾಜ್ಯಪಾಲರು ರಾಜ್ಯ ಸರ್ಕಾರ ಅಸ್ಥಿರಗೊಳಿಸಲು ಮುಂದಾಗಿದ್ದಾರೆ. ಮುಡಾ ತನ್ನ ತಪ್ಪನ್ನು ತಾನೇ ಒಪ್ಪಿಕೊಂಡಿದೆ. ಇದರಲ್ಲಿ ಸಿದ್ದರಾಮಯ್ಯ ಪಾತ್ರ ಏನಿದೆ? ತನಿಖೆಗೆ ಆದೇಶ ನೀಡಿರುವುದರ ಹಿಂದೆ ಸಾಕಷ್ಟು ಚರ್ಚೆಗಳು ನಡೆದಿದೆ. ಯಾವುದೇ ಆಧಾರ ಇಲ್ಲದೆ ಖಾಸಗಿ ವ್ಯಕ್ತಿಯ ದೂರಿಗೆ ಸಿಎಂ ವಿರುದ್ಧ ಪ್ರಾಸಿಕ್ಯೂಷನ್‌ಗೆ ನೀಡಿದ್ದೀರಾ ಎಂದು ಪ್ರಶ್ನಿಸಿದರು.
ಹೆಸರೇ ಇಲ್ಲದ ಯಾವುದೋ ಕಂಪನಿಗೆ 500 ಎಕರೆ ಭೂಮಿ ನೀಡಿರುವ ವಿಚಾರಕ್ಕೆ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ವಿರುದ್ಧ ಲೋಕಾಯುಕ್ತ ವರದಿ ಇದೆ. ಇವರ ವಿರುದ್ಧ ನ್ಯಾಯಾಂಗ ತನಿಖೆಗೆ ಯಾಕೆ ಅನುಮತಿ ನೀಡಿಲ್ಲ? ಸಿದ್ದರಾಮಯ್ಯ ಈ ರಾಜ್ಯದ ಪ್ರಾಮಾಣಿಕ ರಾಜಕಾರಣಿಯಾಗಿದ್ದು, ಅವರ ಹೆಸರಿಗೆ ಕಳಂಕ ತರುವ ಪ್ರಯತ್ನ ನಡೆದಿದೆ ಎಂದು ಟೀಕಿಸಿದರು.
ದಲಿತರ ಬಗ್ಗೆ ಮಾತನಾಡುವ ಬಿಜೆಪಿ, ದಲಿತ ಸಮುದಾಯಕ್ಕೆ ಎಷ್ಟು ಅನುದಾನ ಕೊಟ್ಟಿದೆ. ಬಿಜೆಪಿ, ಜೆಡಿಎಸ್‌ನವರು ವಾಮಮಾರ್ಗದ ಮೂಲಕ ಅಧಿಕಾರ ಹಿಡಿದಿದ್ದಾರೆ. ಪ್ರಾಮಾಣಿಕ ರಾಜಕಾರಣಿ, ಜನಾದೇಶ ಪಡೆದಿರುವ ಈ ಸರ್ಕಾರ ಕೆಡವಲು ಸಾಧ್ಯವಿಲ್ಲ ಎಂದು ಹೇಳಿದರು.
ಕೆಪಿಸಿಸಿ ಕಾರ್ಯಾಧ್ಯಕ್ಷ ಶಾಸಕ ತನ್ವಿರ್ ಸೇಠ್ ಮಾತನಾಡಿ, ಸಿದ್ದರಾಮಯ್ಯ ಯಾವುದೇ ವಿಚಾರದಲ್ಲಿ ಯಾರಿಗೂ ಶಿಫಾರಸು ಮಾಡಿಲ್ಲ. ನಿವೇಶನ ಹಂಚಿಕೆ ಮಾಡುವ ವೇಳೆ ಸಿದ್ದರಾಮಯ್ಯ ಅವರ ಯಾವುದೇ ಪಾತ್ರವಿಲ್ಲ. ಹೀಗಿದ್ದರೂ ಬಿಜೆಪಿ, ಜೆಡಿಎಸ್ ನಾಯಕರು ರಾಜಕೀಯ ಲಾಭಕ್ಕಾಗಿ ಹೋರಾಟ ಮಾಡುತ್ತಿದ್ದಾರೆ ಎಂದು ಟೀಕಿಸಿದರು.
ರಾಜ್ಯಪಾಲರ ಕ್ರಮ ಸಂವಿಧಾನ ವಿರೋಧಿಯಾಗಿದೆ. ರಾಜ್ಯಪಾಲರ ಕ್ರಮ ಪ್ರಶ್ನಿಸಿ ಹೈಕೋರ್ಟ್ ಮೊರೆ ಹೋಗಲಾಗಿದೆ. ಸಚಿವರು, ಶಾಸಕರು, ಪರಿಷತ್ ಸದಸ್ಯರು ಸಿದ್ದರಾಮಯ್ಯ ಬೆನ್ನ ಹಿಂದೆ ಇದ್ದಾರೆ. ನೀಚ ರಾಜಕಾರಣ ಮಾಡುತ್ತಿರುವ ಜೆಡಿಎಸ್, ಬಿಜೆಪಿಗೆ ತಕ್ಕ ಪಾಠ ಕಲಿಸಬೇಕಾಗಿದೆ. ಸಿದ್ದರಾಮಯ್ಯನವರೇ ಈ ರಾಜ್ಯದ ಮುಖ್ಯಮಂತ್ರಿಯಾಗಿ ಮುಂದುವರೆಯುತ್ತಾರೆ ಎಂದರು.
ವಿಧಾನ ಪರಿಷತ್ ಮಾಜಿ ಸದಸ್ಯ ಮರಿತಿಬ್ಬೇಗೌಡ ಮಾತನಾಡಿ, ರಾಜ್ಯದಲ್ಲಿ ಉತ್ತಮವಾಗಿ ಆಡಳಿತ ನಡೆಸುತ್ತಿರುವ ಸಿದ್ದರಾಮಯ್ಯ ಸರ್ಕಾರ ಕೆಡವಲು ಬಿಜೆಪಿಯಿಂದ ರಾಜ್ಯಪಾಲರನ್ನು ಬಳಕೆ ಮಾಡಿಕೊಳ್ಳಲಾಗಿದೆ. ಇದು ಸಿಎಂ ಸಿದ್ದರಾಮಯ್ಯ ಹೆಸರಿಗೆ ಕಪ್ಪು ಚುಕ್ಕೆ ತರಲು ಮಾಡಿರುವ ಕುತಂತ್ರ ಎಂದು ಟೀಕಿಸಿದರು.
ಸಿದ್ದರಾಮಯ್ಯ ಅವರನ್ನು ರಾಜಕೀಯವಾಗಿ ಮುಗಿಸಲು ಸಂಚು ರೂಪಿಸಲಾಗಿದೆ. ಸಿಎಂ ಧರ್ಮಪತ್ನಿಗೆ ನಿವೇಶನ ಹಂಚಿಕೆ ಆಗಿರೋದು ಬಿಜೆಪಿ ಅಧಿಕಾರದಲ್ಲಿದ್ದ ಅವಧಿಯಲ್ಲಿ. ನಿವೇಶನ ಹಂಚಿಕೆ ಮಾಡಿಸಲು ಸಿಎಂ ರಾಜಕೀಯ ಪ್ರಭಾವ ಬಳಸಿಲ್ಲ. ಜೆಡಿಎಸ್ ನಾಯಕ ಎಚ್.ಡಿ.ಕುಮಾರಸ್ವಾಮಿ, ಮುರುಗೇಶ್ ನಿರಾಣಿ ವಿರುದ್ಧ ಲೋಕಾಯುಕ್ತ ತನಿಖೆಯಾಗಿ ರಾಜ್ಯಪಾಲರಿಗೆ ವರದಿ ನೀಡಲಾಗಿದೆ. ಬಿಜೆಪಿ, ಜೆಡಿಎಸ್ ನಾಯಕರು ಚಾರಿತ್ರೃಹೀನರು ಎಂದು ಗುಡುಗಿದರು.
ರಾಜ್ಯಪಾಲರ ನಿರ್ಧಾರ ಸಂವಿಧಾನದ ಕಗ್ಗೊಲೆ. ಸಂವಿಧಾನ ಬಾಹಿರ ನಿರ್ಧಾರಗಳನ್ನು ನಾವು ಖಂಡಿಸಬೇಕು. ನ್ಯಾಯಾಲಯದಲ್ಲಿ ನಮಗೆ ನ್ಯಾಯ ಸಿಗುತ್ತದೆ. ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿ ಮುಂದುರಿಯಲಿದ್ದಾರೆ ಎಂದರು.
ಮುಡಾದ ಮಾಜಿ ಅಧ್ಯಕ್ಷ ಎಚ್.ವಿ.ರಾಜೀವ್ ಮಾತನಾಡಿ, ದೇಸಾಯಿ ಸಮಿತಿ ವರದಿ ಬಳಿಕ ರಾಜ್ಯಪಾಲರು ನಿರ್ಧಾರ ಕೈಗೊಳ್ಳಬಹುದಿತ್ತು. ಆದರೆ ರಾಜ್ಯ ಸರ್ಕಾರವನ್ನು ಅಸ್ಥಿರಗೊಳಿಸುವುದಕ್ಕಾಗಿ ರಾಜ್ಯಪಾಲರನ್ನು ದುರ್ಬಳಕೆ ಮಾಡಿಕೊಂಡು ತರಾತುರಿಯಲ್ಲಿ ತನಿಖೆಗೆ ಆದೇಶ ನೀಡಿದ್ದಾರೆ ಎಂದು ದೂರಿದರು.
ಇಂತಹ ಷಡ್ಯಂತ್ರದ ವಿರುದ್ಧ ಇಡೀ ರಾಜ್ಯದ ಜನತೆ ನಿಂತಿದ್ದಾರೆ. ರಾಜಭವನವನ್ನು ದುರ್ಬಳಕೆ ಮಾಡಿಕೊಳ್ಳಲಾಗಿದೆ. ಆದರೆ ನಾವೆಲ್ಲರೂ ಸಿದ್ದರಾಮಯ್ಯ ಜತೆ ಇದ್ದೇವೆ. ಇಡೀ ರಾಜ್ಯದ ಜನತೆ ಕೂಡ ಇಂತಹ ಷಡ್ಯಂತ್ರ ವಿರುದ್ಧ ಹೋರಾಟ ಮಾಡುತ್ತಾರೆ ಎಂದರು.
ಶಾಸಕರಾದ ದರ್ಶನ್ ಧ್ರುವನಾರಾಯಣ್, ಕೆ.ಹರೀಶ್‌ಗೌಡ, ಅನಿಲ್ ಚಿಕ್ಕಮಾದು, ರವಿಶಂಕರ್, ಕೆಪಿಸಿಸಿ ಮಹಿಳಾ ಘಟಕದ ಮಾಜಿ ಅಧ್ಯಕ್ಷೆ ಪುಷ್ಪ್ಪಾ ಅಮರನಾಥ್, ಮಾಜಿ ಸಚಿವ ಎಂ.ಶಿವಣ್ಣ, ಎಚ್.ವಿ.ರಾಜೀವ್, ಬಿ.ಜೆ.ವಿಜಯಕುಮಾರ್, ಆರ್.ಮೂರ್ತಿ ಸೇರಿದಂತೆ ಹಲವು ಮುಖಂಡರು ಇದ್ದರು.