ಜಿಲ್ಲೆ

ಪ್ರತಾಪ್ ಸಿಂಹ ವಿರುದ್ಧ ಕಾಂಗ್ರೆಸ್ ಪ್ರತಿಭಟನೆ

ಕಿರಣ್ ಗೌಡ.ಜಿ

ಶನಿವಾರಸಂತೆ: ಜಿಲ್ಲೆಯ ಶಾಸಕರ ವಿರುದ್ಧ ಅಸಂಬದ್ಧ ಹೇಳಿಕೆ ನೀಡಿದ ಮಾಜಿ ಸಂಸದ ಪ್ರತಾಪ್ ಸಿಂಹ ವಿರುದ್ಧ ಕೊಡ್ಲಿಪೇಟೆ ಹೋಬಳಿ ಕಾಂಗ್ರೆಸ್ ಗುರುವಾರ ಪ್ರತಿಭಟನೆ ನಡೆಸಿತು. ಕಡೆಪೇಟೆ ಸರ್ಕಲ್‌ನಿಂದ ಮೆರವಣಿಗೆಯಲ್ಲಿ ಸಾಗಿ ಬಂದ ಪ್ರತಿಭಟನಾಕಾರರು ಬಸ್ ನಿಲ್ದಾಣದಲ್ಲಿ ಜಮಾಯಿಸಿ ಪ್ರತಾಪ್ ಸಿಂಹ ಹಾಗೂ ಬಿಜೆಪಿ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿ, ಶಾಸಕರ ಪರವಾಗಿ ಜೈಕಾರ ಹಾಕಿದರು.

ಶಾಸಕರಾದ ಡಾ.ಮಂತರ್ ಗೌಡ ಹಾಗೂ ಎ.ಎಸ್.ಪೊನ್ನಣ್ಣ ಅವರ ಬಗ್ಗೆ ಪ್ರತಾಪ್‌ಸಿಂಹ ನೀಡಿರುವ ಆಕ್ಷೇಪಾರ್ಹ ಹೇಳಿಕೆಯನ್ನು ಖಂಡಿಸಿದ ಕಾಂಗ್ರೆಸ್ ಮುಖಂಡರು, ಪ್ರತಾಪ್‌ಸಿಂಹ ಬಹಿರಂಗವಾಗಿ ಕ್ಷಮೆಯಾಚಿಸಬೇಕೆಂದು ಆಗ್ರಹಿಸಿದರು.

ಕಾಂಗ್ರೆಸ್ ಜಿಲ್ಲಾ ಕಾರ್ಯದರ್ಶಿ ಜೆ.ಎಲ್.ಜನಾರ್ದನ್, ಹಿರಿಯ ಮುಖಂಡರಾದ ಕೆ.ಆರ್.ಚಂದ್ರಶೇಖರ , ಕೊಡ್ಲಿಪೇಟೆ ಪ್ಯಾಕ್ಸ್ ನಿರ್ದೇಶಕ ಜೆ.ಕೆ.ತೇಜ್‌ಕುಮಾರ್, ಯುವ ಕಾಂಗ್ರೆಸ್ ಜಿಲ್ಲಾ ಕಾರ್ಯದರ್ಶಿ ನಿಸಾರ್ ಅಚ್ಚುಪ್ಪ, ಸಾಮಾಜಿಕ ಹೋರಾಟಗಾರ ಜಿ.ಆರ್.ಸುಬ್ರಹ್ಮಣ್ಯ, ವಲಯ ಕಾಂಗ್ರೆಸ್ ಅಧ್ಯಕ್ಷರಾದ ಔರಂಗಜೇಬ್ ಕೊಡ್ಲಿಪೇಟೆ, ಸುಲ್ಯೆಮಾನ್ ಬ್ಯಾಡಗೊಟ್ಟ, ತಾಲೂಕು ಕೆಡಿಪಿ ಸದಸ್ಯ ಡಿ.ಆರ್.ವೇದಕುಮಾರ್, ಗ್ರಾಮ ಪಂಚಾಯಿತಿ ಸದಸ್ಯ ಹನೀಫ್, ವಹಾಬ್, ಪ್ರಸನ್ನ, ಪಾವನಾ, ಮುಖಂಡರಾದ ಮೇದಪ್ಪ, ವಾಸಿಂ, ಅಬ್ದುಲ್ ರಹೀಂ, ಸೋಮಣ್ಣ , ಪ್ರೇಮ್ ಕುಮಾರ್, ಹಾಲಪ್ಪ ಬೆಸೂರು, ಇಂದ್ರೇಶ್, ಅವಿನಾಶ್ ಹಾಗೂ ವಲಯ ಮತ್ತು ಭೂತ್ ಸಮಿತಿ ಪದಾಧಿಕಾರಿಗಳು ಮುಂತಾದವರಿದ್ದರು.