ಮಂಡ್ಯ: ಕೊಡಗಿನಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರ ಕಾರಿನ ಮೇಲೆ ಮೊಟ್ಟೆ ಎಸೆದ ಕಿಡಿಗೇಡಿಗಳ ವಿರುದ್ಧ ಕಠಿಣ ಕ್ರಮಕೈಗೊಳ್ಳಬೇಕೆಂದು ಆಗ್ರಹಿಸಿ ಜಿಲ್ಲಾ ಕಾಂಗ್ರೆಸ್ ವತಿಯಿಂದ ಶುಕ್ರವಾರ ಪ್ರತಿಭಟನೆ ನಡೆಸಲಾಯಿತು.
ಸರ್ ಎಂ.ವಿಶ್ವೇಶ್ವರಯ್ಯ ಪ್ರತಿಮೆ ಎದುರು ಜಮಾಯಿಸಿದ ಕಾಂಗ್ರೆಸ್ ಕಾರ್ಯಕರ್ತರು ರಾಜ್ಯ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಸ ವ್ಯಕ್ತಪಡಿಸಿದರು. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹಾಳಾಗಿದ್ದು, ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ತಮ್ಮ ಹುದ್ದೆಗೆ ರಾಜೀನಾಮೆ ನೀಡಬೇಕು. ಸೂಕ್ತ ಭದ್ರತೆ ಒದಗಿಸುವಲ್ಲಿ ವಿಫಲವಾಗಿರುವ ಕೊಡಗು ಜಿಲ್ಲಾ ಪೊಲೀಸ್ ಅಧೀಕ್ಷಕ ಅಯ್ಯಪ್ಪ ಅವರನ್ನು ಸೇವೆಯಿಂದ ವಜಾ ಮಾಡಬೇಕೆಂದು ಒತ್ತಾಯಿಸಿದರು.
ಕೊಡಗು ಜಿಲ್ಲೆಯಲ್ಲಿ ಮಳೆ ಹಾನಿ ಸಂತ್ರಸ್ತ ಪ್ರದೇಶಗಳ ವೀಕ್ಷಣೆಗೆ ತೆರಳಿದ್ದ ಸಮಯದಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯನವರ ಕಾರಿನ ಮೇಲೆ ನಡೆಸಿದ ಮೊಟ್ಟೆ ದಾಳಿಗೆ ಬಿಜೆಪಿ ಕುಮ್ಮಕ್ಕಿದೆ. ವಿಪಕ್ಷ ನಾಯಕರು ಜಿಲ್ಲೆಗೆ ಭೇಟಿ ನೀಡುವ ಮಾಹಿತಿ ಇದ್ದರೂ, ಸರ್ಕಾರ ಮತ್ತು ಪೊಲೀಸ್ ಇಲಾಖೆ ಸಿದ್ದರಾಮಯ್ಯನವರಿಗೆ ಸೂಕ್ತ ಭದ್ರತೆ ಒದಗಿಸುವಲ್ಲಿ ವಿಫಲವಾಗಿದೆ. ಹಾಗಾಗಿ ಗೃಹ ಸಚಿವರು ತಮ್ಮ ಹುದ್ದೆಗೆ ರಾಜೀನಾಮೆ ನೀಡಬೇಕು, ಕೊಡಗು ಜಿಲ್ಲಾ ಪೊಲೀಸ್ ಅಧೀಕ್ಷಕ ಅಯ್ಯಪ್ಪರನ್ನು ಸೇವೆಯಿಂದ ವಜಾಗೊಳಿಸಬೇಕೆಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸಿ.ಡಿ.ಗಂಗಾಧರ, ಮಾಜಿ ಸಚಿವ ಎಂ.ಎಸ್.ಆತ್ಮಾನಂದ, ಮುಖಂಡರಾದ ಅಮರಾವತಿ ಚಂದ್ರಶೇಖರ್, ಸುರೇಶ್, ಗಣಿಗ ರವಿಕುಮಾರ್, ಹಾಲಹಳ್ಳಿ ಅಶೋಕ್, ಸಿ.ಎಂ.ದ್ಯಾವಪ್ಪ, ಅಂಜನಾ ಶ್ರೀಕಾಂತ್, ಪಲ್ಲವಿ, ವಿಜಯ್ ಕುಮಾರ್, ಸಿದ್ದರಾಮೇಗೌಡ, ಮಹಮದ್ ಜಬೀವುಲ್ಲಾ, ರುದ್ರಪ್ಪ, ದೇಶಹಳ್ಳಿ ಮೋಹನ್ ಕುಮಾರ್, ಕಂಬದಹಳ್ಳಿ ಪುಟ್ಟಸ್ವಾಮಿ, ಸುದರ್ಶನ್ ಇತರರಿದ್ದರು.