ಜಿಲ್ಲೆ

ಮಡಿಕೇರಿಯಲ್ಲಿ ಕಾಂಗ್ರೆಸ್ ಪ್ರತಿಭಟನೆ

ಸುನಿಲ್ ಪೊನ್ನೇಟಿ

ಮಡಿಕೇರಿ:

ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಅವರ ಭಾರತ್ ಜೋಡೋ ನ್ಯಾಯ ಯಾತ್ರೆ ಅಸ್ಸಾಂನಲ್ಲಿ ಸಾಗುತ್ತಿದ್ದ ಸಂದರ್ಭ ಬಿಜೆಪಿ ಕಾರ್ಯಕರ್ತರು ತಡೆದು ಹಲ್ಲೆಗೆ ಯತ್ನಿಸಿದ್ದಾರೆ ಎಂದು ಆರೋಪಿಸಿ ಕಾಂಗ್ರೆಸ್ ವತಿಯಿಂದ ಮಡಿಕೇರಿಯಲ್ಲಿ ಮಂಗಳವಾರ ಪ್ರತಿಭಟನೆ ನಡೆಸಲಾಯಿತು. ಇಲ್ಲಿಯ ಇಂದಿರಾಗಾಂಧಿ ವೃತ್ತದಲ್ಲಿ ಸೇರಿದ ಪ್ರತಿಭಟನಾಕಾರರು ಘಟನೆಯನ್ನು ತೀವ್ರವಾಗಿ ಖಂಡಿಸಿದರು. ಬಿಜೆಪಿ ವಿರುದ್ಧ ಘೋಷಣೆಗಳನ್ನು ಕೂಗಿದರು. ಈ ಸಂದರ್ಭದಲ್ಲಿ ಮಾತನಾಡಿದ ಕಾಂಗ್ರೆಸ್ ಮಡಿಕೇರಿ ಬ್ಲಾಕ್ ಅಧ್ಯಕ್ಷ ಹಂಸ ಹೆಚ್.ಎ., ನಿಜವಾದ ಹಿಂದೂ ರಾಹುಲ್ ಗಾಂಧಿ ಅವರು ದೇವಾಲಯ ಪ್ರವೇಶಿಸದಂತೆ ತಡೆದಿರುವುದು ಸರಿಯಲ್ಲ. ಈ ಘಟನೆ ಹಿಂದೆ ಕೇಂದ್ರ ಮತ್ತು ಅಸ್ಸಾಂ ಸರ್ಕಾರದ ಕೈವಾಡ ಇದೆ. ಇದು ಪ್ರಜಾಪ್ರಭುತ್ವಕ್ಕೆ ಒಳ್ಳೆಯದಲ್ಲ. ಇದನ್ನು ತೀವ್ರವಾಗಿ ಖಂಡಿಸುವುದಾಗಿ ಹೇಳಿದರು.

ನಗರ ಕಾಂಗ್ರೆಸ್ ಅಧ್ಯಕ್ಷ ಬಿ.ವಿ. ರಾಜೇಶ್ ಮಾತನಾಡಿ, ರಾಹುಲ್ ಗಾಂಧಿ ಅವರು ದೇವಾಲಯ ಪ್ರವೇಶಿಸದಂತೆ ತಡೆದಿರುವ ಬಿಜೆಪಿ ಕಾರ್ಯಕರ್ತರು ಮತ್ತು ಸರ್ಕಾರದ ನಡೆ ಪ್ರಜಾಪ್ರಭುತ್ವದ ಕಗ್ಗೊಲೆ ಆಗಿದೆ. ದೇವಾಲಯಗಳ ಭೇಟಿ ಅವರವರ ವೈಯಕ್ತಿಕ ವಿಚಾರ. ಇದಕ್ಕೆ ಕೇಂದ್ರ ಸರ್ಕಾರ ಅಡ್ಡಿಪಡಿಸಿರುವುದು ಸರಿಯಲ್ಲ. ಇದಕ್ಕೆ ಸ್ಥಳೀಯ ಸರ್ಕಾರ ಮತ್ತು ಅಲ್ಲಿನ ಮುಖ್ಯಮಂತ್ರಿ ಪ್ರಚೋದನೆ ಕೊಟ್ಟಿದ್ದಾರೆ ಎಂದು ಆರೋಪಿಸಿದರು.
ಪಕ್ಷದ ಪ್ರಮುಖರಾದ ಚುಮ್ಮಿ ದೇವಯ್ಯ, ಚಂದ್ರಶೇಖರ್, ವಿ.ಪಿ. ಸುರೇಶ್, ಪ್ರಕಾಶ್ ಆಚಾರ್ಯ, ಅಬ್ದುಲ್ ರಜಾಕ್, ಹೊಟ್ಟೆಯಂಗಡ ಫ್ಯಾನ್ಸಿ ಮತ್ತಿತರರು ಇದ್ದರು.